ಹುಮನಾಬಾದ: ಕ್ಷೇತ್ರದಲ್ಲಿನ ವಿವಿಧ ಪಂಚಾಯಗಳಲ್ಲಿನ ನರೇಗಾ ಕಾಮಗಾರಿಗಳಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿವೆ. ಅದಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿರುವ ಬಗ್ಗೆ ದೂರುಗಳಿವೆ. ಈ ಕುರಿತು ಏನು ಕ್ರಮ ಕೈಗೊಂಡಿದ್ದಿರಿ ಎಂದು ಶಾಸಕ ರಾಜಶೇಖರ ಪಾಟೀಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮತಕ್ಷೇತ್ರದ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅನೇಕ ಪಂಚಾಯತಗಳಲ್ಲಿ ಅವಿಶ್ವಾಸ ಮಂಡನೆ ಆಗುತ್ತಿದೆ. ಇದಕ್ಕೆ ಭ್ರಷ್ಟಾಚಾರವೇ ಪ್ರಮುಖ ಕಾರಣ ಇರಬಹುದು ಎನ್ನಲಾಗುತ್ತಿದೆ. ಗ್ರಾಪಂ ಹಾಗೂ ತಾಪಂನ ಕೆಲ ಜನರು ಯಾವುದೇ ಬಿಲ್‌ಗಳ ಪಾವತಿಗೆ ಪಸೆಂìಟ್ ಕಮಿಷನ್ ಪಡೆಯುತ್ತಿರುವ ಬಗ್ಗೆ ದೂರುಗಳು ಇವೆ. ಕ್ಷೇತ್ರದ ಸಿಂಧನಕೇರಾ ಗ್ರಾಪಂನಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಅವ್ಯವಹಾರ ನಡೆದಿದೆ ಎಂದು ಸದಸ್ಯರು ಆರೋಪಿಸುತ್ತಿದ್ದಾರೆ ಎಂದರು.
ಇದೇ ಸಂರ್ಭದಲ್ಲಿ ಸಿಂಧನಕೇರಾ, ದುಬಲಗುಂಡಿ, ಸೇಡೊಳ ಪಿಡಿಒ ಸುಗಂದಾ ಮಾತನಾಡಿ, ಗ್ರಾಪಂ ಸದಸ್ಯರು ನನಗೆ ಬ್ಲಾಕ್ ಮೇಲ್ ಮಾಡುವ ಮೂಲಕ ಭ್ರಷ್ಟಾಚಾರ ಮಾಡಲು ಒತ್ತಡ ಹಾಕುತ್ತಿದ್ದಾರೆ. ನನಗೆ ಕೂಡಲೇ ತಾಪಂ ಕಚೇರಿಯಲ್ಲೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮುನ್ನೆಚ್ಚರಿಕೆ ವಹಿಸಿ: ಮಳೆಗಾಲ ಆರಂಭಗೊಂಡಿದ್ದು, ಪಟ್ಟಣ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಕಡೆಗೆ ಅಧಿಕಾರಿಗಳು ಗಮನ ಹರಿಸಬೇಕು. ಚರಂಡಿ ಸ್ವತ್ಛತೆ, ಕುಡಿಯುವ ನೀರಿನ ಕಡೆ ಹೆಚ್ಚಿನ ಗಮನ ಹರಿಸುವ ಮೂಲಕ ಪದೇ ಪದೇ ಫಾಗಿಂಗ್ ಮಾಡುವ ಕೆಲಸ ಆಗಬೇಕು ಎಂದು ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ್, ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಗೇಪ್ಪ, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ| ಗೋವಿಂದ, ಚಿಟ್ಟಗುಪ್ಪ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟ ಸಿಂಧೆ, ಬಸವಕಲ್ಯಾಣ ಕಿರಣ ಪಾಟೀಲ ಸೇರಿದಂತೆ ತಾಲೂಕು ಮಟ್ಟ ಅಧಿಕಾರಿಗಳು ಇದ್ದರು.