ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಪ್ರಕರಣದ ಕಿಂಗ್ ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪರ ವಕೀಲ ಸ್ವರೂಪ್ ಆನಂದ 1ನೇ ಎಸಿಎಂಎಂ ಕೋರ್ಟ್ ಗೆ ದೂರು ನೀಡಿದ್ದು, ವಿಚಾರಣೆ ನಡೆಸಿದ ಕೋರ್ಟ್ ಎಸ್‌ಐಟಿ ಮುಖ್ಯಸ್ಥರಾದ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಮನೀಶ್ ಖರ್ಬಿಕರ್ ಮತ್ತು ಡಿಐಜಿ ವಂಶಿಕೃಷ್ಣ ಹಾಗೂ ತನಿಖಾಧಿಕಾರಿಗೆ ನ.3ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ. ತುಮಕೂರಿನ ನ್ಯೂ ಎಕ್ಸ್‌ಟೆಷನ್ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಸರ್ಕಾರ ವೆಬ್‌ಸೈಟ್ ಹ್ಯಾಕ್ ಮಾಡಿದ ಆರೋಪದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಬಳಿಕ 2021ರಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ಪಕರಣದಲ್ಲಿ ಶ್ರೀಕೃಷ್ಣ ಸೇರಿ ಆರೇಳು ಮಂದಿ ಬಂಧನವಾಗಿತ್ತು. ಈ ವೇಳೆ ಶ್ರೀಕಿ ಸರ್ಕಾರಿ ವೆಬ್‌ಸೈಟ್ ಹ್ಯಾಂಕಿಂಗ್ ಮಾಡಿದ್ದಾನೆ ಎಂಬುದು ಗೊತ್ತಾಗಿತ್ತು.
ಮತ್ತೂಂದೆಡೆ ಕೋರ್ಟ್‌ನಲ್ಲಿ ಶ್ರೀಕಿ ಪರ ವಕೀಲ ಸ್ವರೂಪ್ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ವಕೀಲ ಸ್ವರೂಪ್ ಆನಂದ್‌ಗೆ ಸಿಐಡಿ ಎಸ್ ಐಟಿ ಇನ್‌ಸ್ಪೆಕ್ಟರ್ ಎಂ.ಜೆ.ದಯಾನಂದ ತುಮಕೂರಿನ ನ್ಯೂ ಎಕ್ Õಟೆಷನ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಕುರಿತು ಮಾಹಿತಿಗಾಗಿ ಖುದ್ದು ಹಾಜರಾಗುವಂತೆ ನೋಟಿಸ್‌ಜಾರಿ ಮಾಡಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸ್ವರೂಪ್ ಆನಂದ್, 1ನೇ ಎಸಿಎಂಎಂ ಕೋರ್ಟ್‌ಗೆ ಇನ್‌ಸ್ಪೆಕ್ಟರ್ ದಯಾನಂದ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ, ತಮ್ಮ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಮಾಡಿರುವ ಆರೋಪ ಏನು?: ವಕೀಲ ಸ್ವರೂಪ್ ಆನಂದ್ ಕೋರ್ಟ್‌ಗೆ ನೀಡಿರುವ ದೂರಿನಲ್ಲಿ, ಅ.12ರಂದು ಇನ್‌ಸ್ಪೆಕ್ಟರ್ ದಯಾನಂದ್ ತಮಗೆ ಕರೆ ಮಾಡಿ, ಪ್ರಕರಣ ಕುರಿತ ಮಾಹಿತಿಗಾಗಿ ಅ.21 ಮತ್ತು ಅ.25ರಂದು ತಮ್ಮ ಸಿಐಡಿ ಕಚೇರಿಯಲ್ಲಿ ಭೇಟಿಯಾಗಬೇಕು ಎಂದು ಸೂಚಿಸಿದ್ದರು. ಆದರೆ, ಇದಕ್ಕೆ ಮೌಖೀಕವಾಗಿ ಇನ್‌ಸ್ಪೆಕ್ಟರ್‌ಗೆ ಉತ್ತರ ನೀಡಲಾಗಿತ್ತು. ಆದರೂ, ತನ್ನ ಫೋನ್ ಕದ್ದಾಲಿಕೆ ಮಾಡಲಾಗಿದೆ. ಪ್ರಮುಖವಾಗಿ 2023ರ ಜುಲೈ ತಿಂಗಳ ವಾಟ್ಸ್‌ಆ್ಯಪ್ ಸಂಭಾಷಣೆ ಮಾಹಿತಿಯನ್ನು ಇನ್‌ಸ್ಪೆಕ್ಟರ್ ಪಡೆದುಕೊಂಡಿದ್ದಾರೆ. ಇದು ನನಗೆ ಆತಂಕ ಉಂಟು ಮಾಡಿದೆ. ಜತೆಗೆ ನನ್ನ ಕಕ್ಷಿದಾರನ ವಿರುದ್ಧವೇ ಸಾಕ್ಷಿ ಹೇಳುವಂತೆ ಇನ್‌ಸ್ಪೆಕ್ಟರ್ ಪರೋಕ್ಷವಾಗಿ ಒತ್ತಾಯಿಸುತ್ತಿದ್ದಾರೆ ಎಂದು ಸ್ವರೂಪ್ ಆನಂದ್ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್ ನ.3ರಂದು ಎಸ್‌ಐಟಿ ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳು ಖುದ್ದು ಹಾಜರಾಗಬೇಕು ಎಂದು ಸೂಚಿಸಿದೆ.