ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸುಮಾರು 85 ಕೋಟಿ ರೂ. ಹಣ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ಪ್ರಭಾವದಿಂದ ಇತರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್‌ಬಾಬು, ಮುಕ್ತ ವಿವಿಯಿಂದ ಮಾಡಲಾದ ವಿವಿಧ ಸಹಕಾರ ಸಂಸ್ಥೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದೆಲ್ಲದರ ವಿರುದ್ಧ ನ್ಯಾಯಾಂಗ ತನಿಖೆ ಆಗಬೇಕೆಂದು ಆಗ್ರಹಿಸಿದರು.
ಸಚಿವ ಅಶ್ವತ್ಥ ನಾರಾಯಣ ಅವರು ತಮ್ಮ ಅಧಿಕಾರ ದುರುಪಯೋಗ ಪಡೆಸಿಕೊಂಡು 2020 ಆ. 31 ರಲ್ಲಿ ಶಿಫಾರಸು ಮಾಡುವುದರ ಮೂಲಕ ಮುಕ್ತ ವಿವಿ ಹಣವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿದ್ದಾರೆ. ಸಚಿವರ ಪ್ರಭಾವದಿಂದಾಗಿ ಈ ವಿವಿ ಕುಲಪತಿಗಳು ನಿಯಮಮೀರಿ ಹಣ ದುರ್ಬಳಕೆ ಮಾಡಿದ್ದು, ಇದರ ಸಂಪೂರ್ಣ ತನಿಖೆ ಆಗಬೇಕಿದೆ ಎಂದು ಒತ್ತಾಯಿಸಿದರು.
ಸಾಬೀತುಪಡಿಸದಿದ್ದರೆ ಕ್ರಿಮಿನಲ್ ಕೇಸ್
ಕೆಪಿಸಿಸಿ ಉಪಾಧ್ಯಕ್ಷ ರಮೇಶ್ ಬಾಬು ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಕಿಂಚಿತ್ತೂ ಹುರುಳಿಲ್ಲ. ಇವುಗಳನ್ನು ಸಾಬೀತು ಪಡಿಸಬೇಕು. ಒಂದು ವೇಳೆ ಸಾಬೀತಾಗದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಎಚ್ಚರಿಸಿದ್ದಾರೆ.