Advertisement

ವೈದ್ಯರ ನಿರ್ಲಕ್ಷ್ಯ ಆರೋಪ: ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

09:11 PM Jul 26, 2023 | Team Udayavani |

ಮಂಗಳೂರು: ಬಾಣಂತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬುಧವಾರ ನಗರದ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.

Advertisement

ವೇಣೂರು ನಿವಾಸಿ ಪ್ರದೀಪ್‌ ಅವರ ಪತ್ನಿ ಶಿಲ್ಪಾ (34) ಮೃತಪಟ್ಟವರು. ಅವರು ಎರಡನೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಶಿಲ್ಪಾ ಅವರು ಮೇ 28ರಂದು ಮನೆಯವರ ಜತೆ ಬಂದು ಸ್ಕ್ಯಾನಿಂಗ್‌ ಮಾಡಿಸಿಕೊಂಡು ಹೋಗಿದ್ದರು. ಆಗ ತಾಯಿ ಮತ್ತು ಮಗುವಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಜು. 6ರಂದು ಹೆರಿಗೆಗೆ ದಿನಾಂಕ ಕೊಟ್ಟಿದ್ದರು. ಜು. 2ರಂದು ಬೆನ್ನು ನೋವು ಎಂದು ಶಿಲ್ಪಾ ಅವರು ತಾಯಿ ಜತೆ ಆಸ್ಪತ್ರೆಗೆ ಬಂದಿದ್ದರು. ಆಗ ತಪಾಸಣೆ ಮಾಡುತ್ತಿದ್ದ ವೈದ್ಯೆಗೆ ಡ್ಯೂಟಿ ಡಾಕ್ಟರ್‌ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ರವಿವಾರವಾದ ಕಾರಣ ಅವರು ಬರಲು ಆಗುವುದಿಲ್ಲ ಎಂದಿದ್ದರು. ಆಸ್ಪತ್ರೆಯವರು ಅವರನ್ನು ದಾಖಲು ಮಾಡಿಕೊಂಡು ಸಿಸೇರಿಯನ್‌ ಮೂಲಕ ಮಗುವನ್ನು ಹೊರಗೆ ತೆಗೆದಿದ್ದಾರೆ. ಈ ಸಂದರ್ಭ ಶಿಲ್ಪಾ ಅವರಿಗೆ ರಕ್ತಸ್ರಾವ ಹೆಚ್ಚಾಗಿದೆ.

ಗರ್ಭಕೋಶದಲ್ಲಿ ತೊಂದರೆ ಇದೆಯೆಂದು ವೈದ್ಯರು ಗರ್ಭಕೋಶವನ್ನು ತೆಗೆದಿದ್ದರು. ಅಷ್ಟರಲ್ಲಿ ಶಿಲ್ಪಾ ಕೋಮಾಕ್ಕೆ ಹೋಗಿದ್ದರು. ಸುಮಾರು 22 ದಿನ ಕೋಮಾದಲ್ಲಿದ್ದ ಅವರು ಚೇತರಿಸಿಕೊಳ್ಳದೆ ಸೋಮವಾರ ಮೃತಪಟ್ಟಿದ್ದಾರೆ. ಆ ಬಳಿಕ ವೈದ್ಯರಾಗಲಿ, ಆಸ್ಪತ್ರೆಯ ಆಡಳಿತ ಮಂಡಳಿಯವರಾಗಲಿ ನಮಗೆ ಸ್ಪಂದನೆ ನೀಡಿಲ್ಲ. ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಆ್ಯಂಬುಲೆನ್ಸ್‌ಗೆ ತಡೆ
ಮಳೆಯನ್ನು ಲೆಕ್ಕಿಸದೆ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಲಾಯಿತು. ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ದಿಕ್ಕಾರ ಕೂಗಿದ ಪ್ರತಿಭಟನಕಾರರು ಶವವನ್ನು ವೆನ್ಲಾಕ್ ಗೆ ಕೊಂಡೊಯ್ಯಲು ಬಂದಿದ್ದ ಆ್ಯಂಬುಲೆನ್ಸ್‌ಗೆ ತಡೆಯೊಡ್ಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ ನಡೆಯಿತು. ವಿಶ್ವಕರ್ಮ ಕೆಲಸಗಾರರ ಸಂಘದ ಜಿಲ್ಲಾಧ್ಯಕ್ಷ ಹರೀಶ್‌ ಆಚಾರ್ಯ, ಜಾಗೃತ ಮಹಿಳಾ ವೇದಿಕೆ ಅಧ್ಯಕ್ಷೆ ಪವಿತ್ರಾ ಆಚಾರ್ಯ ಮೊದಲಾದವರು ಸ್ಥಳದಲ್ಲಿದ್ದರು.

Advertisement

ಸಾವಿನ ಕಾರಣ ಮನವರಿಕೆ ಯತ್ನ
ನಮ್ಮ ಆಸ್ಪತ್ರೆಯ ಮೆಡಿಕಲ್‌ ಕಾಲೇಜಿನಲ್ಲಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಡೀನ್‌ ಹಾಗೂ ವೈದ್ಯರು ಮೃತ ಮಹಿಳೆಯ ಕುಟುಂಬಸ್ಥರಿಗೆ ಸಾವಿಗೆ ಕಾರಣ ಏನು ಎಂಬುದನ್ನು ಮನವರಿಕೆ ಮಾಡಲು ಯತ್ನಿಸಿದ್ದಾರೆ. ನಾನು ಮಂಗಳೂರಿನಲ್ಲಿ ಇಲ್ಲದೆ ಇರುವುದರಿಂದ ಎರಡು ದಿನ ಬಿಟ್ಟು ಆಸ್ಪತ್ರೆಗೆ ಭೇಟಿ ನೀಡಿ ನಡೆದ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ.
– ಡಾ| ಪ್ರಶಾಂತ್‌ ಮಾರ್ಲ
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಮತ್ತು ಸಂಶೋಧನ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next