Advertisement

ಇಂದಿನ ಯುವಕರಿಗೆ ಮಹಾನ್ ಅಲ್ಲಮ ಮಾದರಿಯಾಗಬೇಕು : ಶಿವಾನಂದ ಶ್ರೀ

09:30 PM Jun 01, 2022 | Team Udayavani |

ರಬಕವಿ-ಬನಹಟ್ಟಿ:ಇಂದಿನ ಪ್ರಚಲಿತ ವಿಷಯಗಳ ಕುರಿತು ಮಾತಾಡದಿದ್ದಲ್ಲಿ ಮನಸ್ಸುಗಳೇ ಕೆಟ್ಟು ಹೋಗುತ್ತವೆ. ಮಠಾಧೀಶರಿಗೆ ಸಮಾಜಿಕ ಸ್ವಾಸ್ಥ್ಯ ಕಾಪಾಡುವ ಹೊಣೆಯೂ ಇರುವುದರಿಂದ ನಾವು ಭಾರತೀಯ ನೆಲದ ಆಧ್ಯಾತ್ಮಿಕ ತತ್ವ ಮತ್ತು ಸನಾತನ ಪರಂಪರೆಯ ದಿವ್ಯತೆಯನ್ನು ಉಳಿಸಿಕೊಂಡು ಹೋಗಲು ಜನಜಾಗೃತಿ ಮೂಡಿಸಬೇಕಿದೆ. ಇಂದಿನ ಯುವಕರು ಹಿಂಸೆಯ ವಿಜೃಂಭಣೆ ಮತ್ತು ಪ್ರೀತಿ-ಪ್ರೇಮದ ಹುಚ್ಚಲ್ಲಿ ನಮ್ಮ ಭಾರತೀಯ ಉದಾತ್ತ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಯುವಕರಿಗೆ ಅಲ್ಲಮಪ್ರಭು ಆದರ್ಶಬಾಗಬೇಕು. ಆತನ ಚೆಲುವಿಗೆ, ಮದ್ದಳೆ ವಾದನದ ಶೃತಿಗೆ ಮನಸೋತ ಮಾಯೆ ತನ್ನ ಮೋಹದ ಬಲೆ ಬೀಸಿದರೂ ಅದನ್ನು ಲೆಕ್ಕಿಸದ ಕಾರಣ ಆಕೆಯೇ ಆತನ ಹಿಂದೆ ಬಿದ್ದಳು. ಭೌತಿಕ ಸುಖಕ್ಕಿಂತ ಪಾರಮಾರ್ಥ ಸುಖದ ಸವಿಯುಂಡ ಬಳಿಕ ಆಕೆ ಶರಣೆಯಾಗಿ ಬಾಳಿಬದುಕಿದಳು ಎಂದು ಹಂದಿಗುಂದ-ಆಡಿ ಮಠದ ಶಿವಾನಂದ ಮಹಾಸ್ವಾಮಿಗಳು ಯುವಕರಿಗೆ ಕಿವಿಮಾತು ಹೇಳಿದರು.

Advertisement

ಅವರು ತೇರದಾಳದ ಅಲ್ಲಮಪ್ರಭು ಸಭಾಭವನದಲ್ಲಿ ವ್ಯೋಮಕಾಮ ಸಿದ್ಧ ಶ್ರೀ ಅಲ್ಲಮ ಪ್ರಭುದೇವರ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಧರ್ಮ, ದೇವರು, ಆಧ್ಯಾತ್ಮ ನಮಗೆ ಶಾಂತಿ ತುಂಬಲು ಅಗತ್ಯ. ಅಶಾಂತಿ ತುಂಬುವ ದೇವರು, ಧರ್ಮ ಬೇಕಿಲ್ಲ ಎಂದರಿತು ನಮ್ಮ ಸನಾತನ ಪರಂಪರೆ ಮರೆತು ಬಾಳುತ್ತಿರುವ ಇಂದಿನ ಪೀಳಿಗೆಗೆ ಅಲ್ಲಮ ಆದರ್ಶವಾಗಲಿ. ಕಬ್ಬಿಣದ ಕಡಲೆಯಂತಿದ್ದ ಆಧ್ಯಾತ್ಮಿಕ ಸಾರವನ್ನು ಸರಳವಾದ ಭಾಷೆಯಲ್ಲಿ ಎಲ್ಲರಿಗೂ ವಿದಿತವಾಗುವ ನಿಟ್ಟಿನತ್ತ ವಚನಗಳ ಮೂಲಕ ಹಂಚಿದ ಶರಣರಲ್ಲಿ ಶೂನ್ಯಸಿಂಹಾಸನಾಧೀಶ್ವರ ಅಲ್ಲಮ ಅಗ್ರಜನಾಗಿದ್ದಾರೆ. ಐತಿಹಾಸಿಕವಾದ ಆಧ್ಯಾತ್ಮಿಕ ಚಿತ್ರಗಳು ಇಂದು ಹೆಚ್ಚಾಗು ಮೂಡಿಬರಬೇಕಿವೆ. ಅನುಭವ ಮಂಟಪದ ಅತ್ಯುನ್ನತ ಸ್ಥಾನವನ್ನಲಂಕರಿಸಿದ ಅಲ್ಲಮರು ಬಸವಾದಿ ಶರಣರ ಸಂದೇಹಗಳನ್ನು ಪರಿಹರಿಸಿ ಅಂಧಕಾರವನ್ನು ಹೋಗಲಾಡಿಸುವ ಅಲ್ಲಮರು ಸತ್ಯದ ಮಾರ್ಗವನ್ನು ಸಮಾಜದಲ್ಲಿ ಬಿತ್ತುತ್ತಿದ್ದರು. ಇಂಥ ಸುವಿಚಾರಗಳನ್ನು ಹೊಂದಿದ ಚಲನಚಿತ್ರವನ್ನು ನಿರ್ಮಿಸುವಾಗ ಹಳಿಂಗಳಿಯ ಮಹಾವೀರ ಪ್ರಭುಗಳು ತಮ್ಮ ಸ್ವಂತ ಆಸ್ತಿಯನ್ನೂ ಮಾರಾಟ ಮಾಡಿ ಸಾಕಷ್ಟು ನೋವುಂಡಿದ್ದಾರೆ. ಸುಪ್ರಭೆಯ ಸುಜ್ಞಾನವರಳಿಸುವ ಇಂಥ ಚಿತ್ರಗಳನ್ನು ವೀಕ್ಷಿಸುವ ಮೂಲಕ ನಾಡಿನ ಜನತೆ ಶರಣರ ವೈಚಾರಿಕತೆ ಮತ್ತು ಸತ್ಯಾನ್ವೇಷಣೆಗೆ ಮನ್ನಣೆ ನೀಡಬೇಕೆಂದರು.

ಹಿಪ್ಪರಗಿಯ ಪ್ರಭು ಬೆನ್ನಾಳೆ ಮಹಾರಾಜರು, ಚಿಮ್ಮಡ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ತೇರದಾಳ ವಿರಕ್ತಮಠದ ಶಿವಕುಮಾರಶ್ರೀ, ಜುಂಜರವಾಡದ ಬಸವರಾಜೇಂದ್ರಶ್ರೀ, ಬನಹಟ್ಟಿಯ ಚನ್ನಬಸಯ್ಯಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿದರು. ಧುರೀಣರಾದ ಮಗಯ್ಯಸ್ವಾಮಿ ತೆಳಗಿನಮನಿ, ಪ್ರವೀಣ ನಾಡಗೌಡ, ಜಗದೀಶ ಗುಡಗುಂಟಿ ಮಾತನಾಡಿ, ಇಂದಿನ ಚಿತ್ರಗಳಲ್ಲಿ ಹಿಂಸೆ,ಕ್ರೌರ್ಯ ವಿಜೃಂಭಿಸುತ್ತಿರುವಾಗ ಇಂಥ ಸದಭಿರುಚಿಯ ಜ್ಞಾನ ಸಾಗರವಾಗಿರುವ ಅಲ್ಲಮರ ಕುರಿತಾದ ಚಿತ್ರ ನಿರ್ಮಿಸಿರುವ ಅಮರಜ್ಯೋತಿ ಸಂಸ್ಥೆಯ ಸಾಹಸ ಪ್ರಶಂಸಾರ್ಹವೆಂದರು. ವೇದಿಕೆಯಲ್ಲಿ ಉದ್ಯಮಿ ಗಣಪತರಾವ ಹಜಾರೆ, ಸುಭಾಸ ಶಿರಗೂರ, ಗಂಗಾಧರ ಮೇಟಿ, ಭುಜಬಲಿ ಕೆಂಗಾಲಿ, ನಾಗಪ್ಪ ಸನದಿ, ದೇವಲ ದೇಸಾಯಿ,ವಿತರಕ ವಿಜಯಕುಮಾರ ಹುಡೇದಮನಿ, ಪ್ರಾ.ಬಸವರಾಜ ಆಜೂರೆ, ಬಸವರಾಜ ಬಾಳಿಕಾಯಿ ಉಪಸ್ಥಿತರಿದ್ದರು.
ಪರಯ್ಯ ತೆಳಗಿನಮನಿ ಸ್ವಾಗತಿಸಿದರು. ಎಂ.ಬಿ.ಮಾಳೇದ, ಬಿ.ಎಸ್.ಖವಾಸಿ ನಿರೂಪಿಸಿದರು. ಬಿ.ಡಿ. ಹಿರೇಮೇತ್ರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next