ಅಲಹಾಬಾದ್: ಹಲವು ದಿನಗಳಿಂದ ಚರ್ಚೆಯಲ್ಲಿರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪುರಾತತ್ವ ಇಲಾಖೆ ಸಮೀಕ್ಷೆ ನಡೆಸಲು ಇದೀಗ ಅಲಹಾಬಾದ್ ಉಚ್ಛ ನ್ಯಾಯಾಲಯವು ಅನುಮತಿ ನೀಡಿದೆ. ಸಮೀಕ್ಷೆಗೆ ಅವಕಾಶ ನೀಡಿದ್ದ ವಾರಾಣಸಿ ನ್ಯಾಯಾಲಯದ ಆದೇಶವನ್ನು ಅದು ಎತ್ತಿ ಹಿಡಿದಿದೆ.
ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದ್ದು, ಶೀಘ್ರವಾಗಿ ಸರ್ವೆ ಕಾರ್ಯ ನಡೆಯಲಿ ಎಂದಿದೆ.
ನ್ಯಾಯದ ಹಿತಾಸಕ್ತಿಯಿಂದ ಮಸೀದಿ ಆವರಣದ ಸರ್ವೆ ನಡೆಸುವುದು ಅವಶ್ಯಕ ಎಂದು ತೀರ್ಪಿನಲ್ಲಿ ಪೀಠ ಅಭಿಪ್ರಾಯಪಟ್ಟಿದೆ. ಒಂದಿಷ್ಟು ಷರತ್ತಿನಡಿ ಸಮೀಕ್ಷೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ.
“ಜ್ಞಾನವಾಪಿ ಮಸೀದಿ ಸಂಕೀರ್ಣದ ಎಎಸ್ ಐ ಸಮೀಕ್ಷೆಯನ್ನು ಪ್ರಾರಂಭಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ” ಎಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಎಎನ್‌ಐಗೆ ತಿಳಿಸಿದರು.
ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಉತ್ತರ ಪ್ರದೇಶ ರಾಜ್ಯದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, “ನಾನು ಈ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಸತ್ಯ ಹೊರಬರಲಿದೆ ಎಂಬ ವಿಶ್ವಾಸವಿದೆ. ಪುರಾತತ್ವ ಇಲಾಖೆಯ ಸರ್ವೆ ಬಳಿಕ ಜ್ಞಾನವಾಪಿ ವಿವಾದ ಅಂತ್ಯವಾಗಲಿದೆ” ಎಂದರು.
ಜುಲೈ 21ರಂದು ವಾರಾಣಸಿ ಕೋರ್ಟ್ ಪುರಾತತ್ವ ಇಲಾಖೆಗೆ ಸರ್ವೆ ನಡೆಸಲು ಅನುಮತಿ ನೀಡಿತ್ತು. ದೇವಳವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆಯೇ ಎಂದು ಪತ್ತೆ ಮಾಡಲು ಉತ್ಖನನ ನಡೆಸಲೂ ಅನುಮತಿಸಿತ್ತು. ಜುಲೈ 24ರಂದು ಬೆಳಗ್ಗೆ ಇಲಾಖೆ ಸಮೀಕ್ಷೆ ಆರಂಭಿಸಿತ್ತು. ಆದರೆ ಮಸೀದಿ ಸಮಿತಿ ಸುಪ್ರೀಂ ಮೊರೆ ಹೋಗಿ ಸರ್ವೆಗೆ ತಡೆ ತಂದಿತ್ತು.
ಸರ್ವೆಯಿಂದ ಮಸೀದಿಯ ಮೂಲ ರಚನೆಗೆ ಭಂಗ ಉಂಟಾಗುತ್ತದೆ ಎಂದು ಮಸೀದಿ ಸಮಿತಿ ಆತಂಕ ಹೊರಹಾಕಿತ್ತು. ಆದರೆ ಈ ರೀತಿ ಆಗುವುದಿಲ್ಲ ಎಂದು ಇಲಾಖೆ ಸುಪ್ರೀಂ ಕೋರ್ಟ್ ಗೆ ಸ್ಪಷ್ಟಪಡಿಸಿತ್ತು.
ಮಸೀದಿ ಸಮಿತಿಯು ಸರ್ವೆ ವಿರುದ್ಧವಾಗಿ ಹಾಕಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಆಗಸ್ಟ್ 3ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು.