Advertisement

ಅವಳಿ ಕಟ್ಟಡಗಳು ಇಂದು ಧರೆಗೆ; ಎಲ್ಲ ಸಿದ್ಧತೆಗಳೂ ಪೂರ್ಣ

06:43 PM Aug 27, 2022 | Team Udayavani |

ನೋಯ್ಡಾ: ಎಲ್ಲವೂ ಅಂದುಕೊಂಡಂತೆ ನಡೆದರೆ, ಇಂದು ಮಧ್ಯಾಹ್ನ ಸರಿಯಾಗಿ 2.30ಕ್ಕೆ ಉತ್ತರಪ್ರದೇಶದ ನೋಯ್ಡಾದಲ್ಲಿರುವ 100 ಮೀಟರ್‌ ಎತ್ತರದ ಅವಳಿ ಕಟ್ಟಡಗಳು ಧರಾಶಾಹಿಯಾಗಲಿವೆ.

Advertisement

ಹೌದು, ಸೂಪರ್‌ಟೆಕ್‌ ಕಂಪನಿಯ ಅಕ್ರಮ ಕಟ್ಟಡಗಳನ್ನು ಕೆಡವಲು ಕ್ಷಣಗಣನೆ ಆರಂಭವಾಗಿದ್ದು, ಸ್ಫೋಟಕಗಳು ಮತ್ತು ಇತರೆ ವ್ಯವಸ್ಥೆಗಳ ಅಂತಿಮ ಚೆಕಪ್‌ ಶನಿವಾರ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ಧ್ವಂಸದ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ಸ್ಫೋಟಕಗಳ ನಿಯೋಜನೆ ಮತ್ತು ಅವುಗಳನ್ನು ಸಂಪರ್ಕಿಸುವ ಕೆಲಸ ಮುಗಿದಿದೆ. ಅವಳಿ ಕಟ್ಟಡಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡಿ, ಅಲ್ಲಿಂದ 100 ಮೀಟರ್‌ ಉದ್ದದ ಕೇಬಲ್‌ ಅನ್ನು ಎಕ್ಸ್‌ಪ್ಲೋಡರ್‌ಗೆ ಜೋಡಿಸುವ ಕೆಲಸವೊಂದೇ ಬಾಕಿಯಿದೆ. ಇದು ಮುಗಿದ ಬಳಿಕ, ಭಾನುವಾರ ಮಧ್ಯಾಹ್ನ ಎಕ್ಸ್‌ಪ್ಲೋಡರ್‌ನಲ್ಲಿರುವ ಗುಂಡಿ ಒತ್ತಿದೊಡನೆ ಕಟ್ಟಡಗಳು ನೆಲಸಮಗೊಳ್ಳಲಿವೆ.

ಕಟ್ಟಡ ನೆಲಕ್ಕುರುಳಿದ ಕೂಡಲೇ ರಸ್ತೆಗಳು, ಪಾದಚಾರಿ ಮಾರ್ಗಗಳು, ಮರಗಿಡಗಳನ್ನು ಸ್ವತ್ಛಗೊಳಿಸಲೆಂದು 50 ನೀರಿನ ಟ್ಯಾಂಕರ್‌ಗಳನ್ನು ಸಜ್ಜುಗೊಳಿಸಲಾಗಿದೆ. ತುರ್ತು ಪರಿಸ್ಥಿತಿಗೆ ಸ್ಪಂದಿಸಲು ನಿಯಂತ್ರಣಾ ಕೊಠಡಿಯನ್ನೂ ಸ್ಥಾಪಿಸಲಾಗಿದೆ.

ವಿಮಾನ ಸಂಚಾರ ಸ್ಥಗಿತ:
ಕಟ್ಟಡದ ಸುತ್ತಲಿನ 1 ನಾಟಿಕಲ್‌ ಮೈಲು(1.8 ಕಿ.ಮೀ.) ವ್ಯಾಪ್ತಿಯ ವಾಯುಪ್ರದೇಶದಲ್ಲಿ ಭಾನುವಾರ ಕೆಲಹೊತ್ತು ವಿಮಾನಗಳ ಸಂಚಾರ ನಿರ್ಬಂಧಿಸಲಾಗಿದೆ. ಧ್ವಂಸಗೊಂಡ ಕಟ್ಟಡದ ಧೂಳು ಬಾನೆತ್ತರಕ್ಕೆ ವ್ಯಾಪಿಸುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ, ಆ.31ರವರೆಗೂ ಈ ಪ್ರದೇಶದಲ್ಲಿ ಡ್ರೋನ್‌ಗಳ ಹಾರಾಟಕ್ಕೂ ನಿಷೇಧ ಹೇರಲಾಗಿದೆ.

Advertisement

ನನ್ನ ಕನಸು ನನಸಾಗುತ್ತಿದೆ!
“ಸೂಪರ್‌ಟೆಕ್‌ನ ಅವಳಿ ಕಟ್ಟಡಗಳನ್ನು ಕೆಡವುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿದಾಗಲೇ, “ಕಟ್ಟಡವನ್ನು ಸ್ಫೋಟಿಸುವಂಥ ಬಟನ್‌ ಒತ್ತುವ ಅವಕಾಶ ನನಗೇ ಸಿಗಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದ್ದೆ. ಈಗ ನನ್ನ ಕನಸು ನನಸಾಗುತ್ತಿದೆ.’

ಹೀಗೆಂದು ಹೇಳಿರುವುದು ಭಾನುವಾರ “ಬಟನ್‌ ಒತ್ತಿ’ ಕಟ್ಟಡದ ನಾಮಾವಶೇಷಕ್ಕೆ ಕಾರಣವಾಗಲಿರುವ ಹರ್ಯಾಣದ ಹಿಸಾರ್‌ನವರಾದ 49 ವರ್ಷದ ಬ್ಲಾಸ್ಟರ್‌ ಚೇತನ್‌ ದತ್ತಾ. ನಾನು ಈಗಾಗಲೇ ಉಷ್ಣವಿದ್ಯುತ್‌ ಸ್ಥಾವರಗಳು, ಗಣಿಗಳು ಹಾಗೂ ಇತರೆ ಕಟ್ಟಡಗಳ ಸ್ಫೋಟ ಪ್ರಕ್ರಿಯೆ ನಡೆಸಿದ್ದೇನೆ. ಆದರೆ, ವಸತಿ ಕಟ್ಟಡವನ್ನು ಬ್ಲಾಸ್ಟ್‌ ಮಾಡುತ್ತಿರುವುದು ಇದೇ ಮೊದಲು ಎಂದಿದ್ದಾರೆ ದತ್ತಾ.

Advertisement

Udayavani is now on Telegram. Click here to join our channel and stay updated with the latest news.

Next