ಮಲೇರಿಯಾ ನಿರ್ಮೂಲನೆಗೆ ಸೂಕ್ತ ಲಸಿಕೆಗಾಗಿ ಜಗತ್ತಿನ 100 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಇದೇ ಮೊದಲ ಬಾರಿ ಮಾಸ್‌ಕ್ವಿರಿಕ್ಸ್ ಎಂಬ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಈ ಲಸಿಕೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಅಭಿವೃದ್ಧಿಪಡಿಸಿದ್ದು?:
1987ರಲ್ಲಿ ಬ್ರಿಟನ್‌ನ ಗ್ಲ್ಯಾಕ್ಸೋ ಸ್ಮಿತ್ ಕ್ಲೈನ್(ಜಿಎಸ್‌ಕೆ) ಎಂಬ ಫಾರ್ಮಾಸ್ಯುಟಿಕಲ್ ಕಂಪೆನಿ ಅಭಿವೃದ್ಧಿಪಡಿಸಿದ ಲಸಿಕೆಯಿದೆ. ಆಫ್ರಿಕಾದಲ್ಲೇ ಹೆಚ್ಚು ಪರಾವಲಂಬಿ ಜೀವಿಯಿಂದ ಬರುವ ಮಾರಣಾಂತಿಕ ರೋಗ ಮಲೇರಿಯಾ. ಸೋಂಕಿತ ಹೆಣ್ಣು ಸೊಳ್ಳೆ ಅನಾಫಿಲಿಸ್ ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ. ಜಗತ್ತಿನಲ್ಲೇ ಅತೀ ಹೆಚ್ಚು ಮಲೇರಿಯಾ ಪ್ರಕರಣಗಳು ಬಾಧಿಸುವುದು ಆಫ್ರಿಕಾವನ್ನು. ಹೀಗಾಗಿ, ಆಫ್ರಿಕಾದಾದ್ಯಂತ ಇರುವ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭಿಸಲು ಡಬ್ಲ್ಯುಎಚ್‌ಒ ಚಿಂತನೆ ನಡೆಸಿದೆ.
ಹೇಗೆ ಕೆಲಸ ಮಾಡುತ್ತದೆ?:
ಪ್ಲಾಸ್ಮೋಡಿಯಂ ಫಾಲ್ಸಿಪಾರಂ ಪರಾವಲಂಬಿ ಜೀವಿಗಳ ಮೇಲ್ಮೆ„ಯಲ್ಲಿ ಕಂಡುಬರುವ ಪ್ರೊಟೀನ್‌ಗಳಿಂದಲೇ ಮಾಸ್‌ಕ್ವಿರಿಕ್ಸ್ ಲಸಿಕೆಯನ್ನು ತಯಾರಿಸಿರಲಾಗುತ್ತದೆ. ಅದು ಮಗುವಿನ ದೇಹಕ್ಕೆ ಹೋದಾಗ, “ಹೊರಗಿಂದ ಆಗಮಿಸಿದ ಈ ಪ್ರೊಟೀನ್’ ಅನ್ನು ದೇಹದ ರೋಗ ನಿರೋಧಕ ವ್ಯವಸ್ಥೆಯು ಪತ್ತೆ ಹಚ್ಚಿ, ಕೂಡಲೇ ಪ್ರತಿಕಾಯವನ್ನು ಸೃಷ್ಟಿಸುತ್ತದೆ.
ಲಸಿಕೆಯ ಬಳಕೆ ಹೇಗೆ? :
ಮಾಸ್‌ಕ್ವಿರಿಕ್ಸ್ ಲಸಿಕೆಯನ್ನು 6 ವಾರಗಳಿಂದ 17 ತಿಂಗಳು ವಯೋಮಾನದ ಮಕ್ಕಳಿಗೆ ನೀಡಲಾಗುತ್ತದೆ. 0.5 ಮಿ.ಲೀ. ಇಂಜೆಕ್ಷನ್ ಅನ್ನು ಮೊದಲಿಗೆ 3 ಡೋಸ್(ಪ್ರತೀ ಡೋಸ್‌ನ ನಡುವೆ ಒಂದು ತಿಂಗಳ ಅಂತರವಿರುತ್ತದೆ), 18 ತಿಂಗಳ ಬಳಿಕ 4ನೇ ಡೋಸ್ ನೀಡಲಾಗುತ್ತದೆ. ಮಲೇರಿಯಾದಿಂದ ರಕ್ಷಣೆ ಮಾತ್ರವಲ್ಲದೇ, ಹೆಪಟೈಟಿಸ್ ಬಿ ವೈರಸ್‌ನಿಂದ ಲಿವರ್‌ಗೆ ಆಗುವ ಸೋಂಕಿನಿಂದಲೂ ರಕ್ಷಣೆ ಒದಗಿಸುತ್ತದೆ.
22.90 ಕೋಟಿ : 2019ರಲ್ಲಿ ಜಗತ್ತಿನಾದ್ಯಂತ ಪತ್ತೆಯಾದ ಮಲೇರಿಯಾ ಪ್ರಕರಣಗಳು
ಈ ಪೈಕಿ ಮಲೇರಿಯಾದಿಂದ ಮೃತಪಟ್ಟವರ ಸಂಖ್ಯೆ
4,09,000
94% : ಮಲೇರಿಯಾ ಪ್ರಕರಣ, ಸಾವಿನಲ್ಲಿ ಆಫ್ರಿಕಾದ ಪಾಲು
ಮಾಸ್‌ಕ್ವಿರಿಕ್ಸ್ ಲಸಿಕೆಯ ಪರಿಣಾಮಕತ್ವ : 30%