ಹೊಸದಿಲ್ಲಿ : ಪ್ಯಾರಡೈಸ್ ಪೇಪರ್ಸ್ ಲೀಕ್‌ನಲ್ಲಿ ತನ್ನ ಹೆಸರು ಕಾಣಿಸಿಕೊಂಡಿರುವುದರ ವಿರುದ್ಧ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರು ಸರಣಿ ಟ್ವೀಟ್‌ಗಳ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಯತ್ನ ಮಾಡಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್ ತನಿಖೆಯಲ್ಲಿ ತೋರಿಸಲಾಗಿರುವ ತನಗೆ ಸಂಬಂಧಿಸಿದ ಎಲ್ಲ ವಹಿವಾಟಗಳನ್ನು ತಾನು ಈ ಹಿಂದೆಯೇ ಸಂಬಂಧಿತ ಅಧಿಕಾರಿಗಳ ಮುಂದೆ ಪೂರ್ತಿಯಾಗಿ ಬಹಿರಂಗಪಡಿಸಿದ್ದೇನೆ ಮತ್ತು ಆ ವಹಿವಾಟುಗಳನ್ನು ತಾನು ಅಧಿಕೃತ ನೆಲೆಯಲ್ಲಿ ಮಾಡಿದ್ದೇ ವಿನಾ ವೈಯಕ್ತಿಕ ನೆಲೆಯಲ್ಲಿ ಅಲ್ಲ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ.
ಪ್ರಮುಖ ಬಹುರಾಷ್ಟ್ರೀಯ ಕಂಪೆನಿಗಳು ಹಾಗೂ ಕೆಲವು ಅತ್ಯಂತ ಪ್ರಮುಖ ವ್ಯಕ್ತಿಗಳ ಭಾರತದಲ್ಲಿ ಹಾಗೂ ತೆರಿಗೆ ಸ್ವರ್ಗ ವಿದೇಶಗಳಲ್ಲಿ ಮಾಡಿರುವ ರಹಸ್ಯ ಹೂಡಿಕೆಗಳ ವಿವರಗಳಿರುವ ಮತ್ತು ಆ್ಯಪಲ್ ಬಿ ಎಂಬ ಕಾನೂನು ಸಂಸ್ಥೆಯಿಂದ ಸೋರಿ ಹೋಗಿರುವ ಸುಮಾರು 1.34 ಕೋಟಿ ದಾಖಲೆ ಪತ್ರಗಳ ಗುಚ್ಚವೇ ಪ್ಯಾರಡೈಸ್ ಪೇಪರ್ಸ್.
ಎಕ್ಸ್‌ಪ್ರೆಸ್ ಮಾಡಿರುವ ವರದಿಯಲ್ಲಿ, ಆ್ಯಪಲ್‌ಬಿ ದಾಖಲೆಗಳು ತೋರಿಸಿರುವಂತೆ ಸಿನ್ಹಾ ಅವರು ಚುನಾವಣಾ ಆಯೋಗಕ್ಕೆ ಓಮಿಡ್ಯಾರ್ ನೆಟ್‌ವರ್ಕ್ ಮತ್ತು ಡಿ ಲೈಟ್ ಡಿಸೈನ್ ದ ನಿರ್ದೇಶಕರ ಮಂಡಳಿಯೊಂದಿಗೆ ತನಗಿರುವ ಸಂಬಂಧವನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದೆ.
ಆದರೆ ಈಗ ಜಯಂತ್ ಸಿನ್ಹಾ ಅವರು ತಾನು ಈ ಎಲ್ಲ ಮಾಹಿತಿಗಳನ್ನು ಸಂಬಂಧಿಸಿದ ಅಧಿಕಾರಿಗಳ ಮುಂದೆ ಈ ಹಿಂದೆಯೇ ಬಹಿರಂಗಪಡಿಸಿದ್ದೇನೆ ಎಂದು ಹೇಳಿದ್ದಾರೆ.