Advertisement

ಮೊಸಳೆ ಕ್ಯಾಚರ್‌ : ಶಿರಸಿಯಲ್ಲೊಬ್ಬ ಸಾಹಸಿ

09:08 AM Apr 28, 2019 | Hari Prasad |

ಶಿರಸಿಯ ಸುತ್ತಮುತ್ತ ಮೊಸಳೆ ಕಾಣಿಸಿಕೊಂಡರೆ ಯಾರಿಗೂ ಭಯ ಆಗುವುದಿಲ್ಲ. ಏಕೆಂದರೆ, ಅವರ ಪಾಲಿಗೆ ಡಾ. ರಾಜೇಂದ್ರ ಇದ್ದಾರೆ. ಮೊಸಳೆ ಹಿಡಿಯುವುದರಲ್ಲಿ ಇವರು ಬಹಳ ಹೆಸರುವಾಸಿ. ರಾಜೇಂದ್ರರನ್ನು ಈ ಭಾಗದಲ್ಲಿ ಶಿರಸಿಯ ಸ್ಟೀವ್‌ ಇರ್ವಿನ್‌ ಅಂತಲೇ ಕರೆಯುತ್ತಾರಂತೆ. ಹಾಗಾದರೆ, ಮೊಸಳೆ ಹಿಡಿಯೋದು ಹೇಗೆ ಅಂತೀರ? ಇಲ್ಲಿದೆ ಮಾಹಿತಿ.

Advertisement

ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಮೊಸಳೆ ಬನವಾಸಿ ಆರ್‌.ಎಫ್ಓ.ಗೆ ದೊಡ್ಡ ತಲೆನೋವಾಗಿತ್ತು. ಇವರು ಶಿರಸಿಯ ರಾಜೇಂದ್ರಗೆ ಕರೆ ಮಾಡಿ,” ಇಲ್ಲಿನ ರಂಗಾಪುರದ ಕೆರೆಗೆ ಭಾರೀ ಗಾತ್ರದ ಮೊಸಳೆ ಬಂದಿದೆ ಸರ್‌, ಹಿಡೀಬೇಕಿತ್ತಲ್ಲಾ’ ಎಂದಾಗ, ರಾಜೇಂದ್ರ ಮೊದಲು ಆ ಮೊಸಳೆಯ ಚಿತ್ರವನ್ನು ಗಮನಿಸಿ, ಅದರ ಉದ್ದ, ಗಾತ್ರವನ್ನು ಅಂದಾಜಿಸಿದರು. ಆವೇಳೆಗಾಗಲೇ, ಮೊಸಳೆ ಕೆರೆಗೆ ಬಂದು ಮೂರ್‍ನಾಲ್ಕು ದಿನವಾಗಿತ್ತು. ಈ ಅವಧಿಯಲ್ಲಿ ಅದನ್ನು ನೂರಾರು ಜನ ನೋಡಿ, ಭಯಭೀತರಾಗಿದ್ದರು. ಮೊಸಳೆ ಮತ್ತೆಲ್ಲಿಗೂ ಹೋಗದಂತೆ ಅದಕ್ಕೆ ಕೋಳಿ, ಮೀನು ಹಾಕುತ್ತಾ ಕಾಯುತ್ತಿದ್ದರು.

ರಾಜೇಂದ್ರ ಬಂದರು, ಪರಿಸ್ಥಿತಿ ಅರ್ಥವಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸೇರಿ ಮೆಲ್ಲಗೆ ಬಲೆ ಬೀಸಿದರು. ಅವತ್ತು ಮೊಸಳೆ, ಅಷ್ಟೇ ಜಾಣತನದಿಂದ ತಪ್ಪಿಸಿಕೊಂಡಿತ್ತು. ಬಂದ ದಾರಿಗೆ ಸುಂಕವಿಲ್ಲ. ಒಂದು ಎಚ್ಚರಿಕೆಯ ಫ‌ಲಕವನ್ನು ನೆಡಿ ಎಂದು ಅರಣ್ಯಾ ಇಲಾಖೆಯವರಿಗೆ ಹೇಳಿ ರಾಜೇಂದ್ರ ಮನೆ ಕಡೆ ಹೊರಟರು.

ಎರಡು ಮೂರು ದಿನಗಳ ನಂತರ ಮತ್ತೆ ಕರೆ ಬಂತು. ಈ ಸಲ ಮೊಸಳೆ ತನ್ನ ವಾಸ್ತವ್ಯ ಬದಲಿಸಿ, ಕೆರೆಯಿಂದ ಒಂದು ಕಿ.ಮಿ ದೂರದ ಭತ್ತದ ಗದ್ದೆಯಲ್ಲಿ ಠಿಕಾಣಿ ಹಾಕಿತ್ತು. ರಾಜೇಂದ್ರ ಅಂಡ್‌ ಟೀಂ ಬರುವ ಹೊತ್ತಿಗೆ, ನದಿ ದಡದ ಕಡೆ ಹೋಗುತ್ತಿರುವವರನ್ನೆಲ್ಲಾ ತನ್ನತ್ತಲೇ ಬರುತ್ತಿದ್ದಾರೆ ಅಂತ ದೊಡ್ಡದಾಗಿ ಬಾಯಿ ತೆರೆಯುತ್ತಾ ಗುರ್ರ, ಗುರ್ರ ಅಂತ ಶಬ್ದ ಮಾಡುತ್ತಿತ್ತು. ಇದು 15-20 ಅಡಿ ದೂರಕ್ಕೇ ಕೇಳುತ್ತಿತ್ತು. ಅದನ್ನು ನೋಡಿದ ಜನರು ಅಯ್ಯಯ್ಯಪ್ಪ.. ಎನ್ನುತ್ತಾ ಕಾಲಿಗೆ ಬುದ್ಧಿ ಹೇಳಿದರು.


ಅವರ ಕೂಗಿನಿಂದ ಜಾಗೃತೆಗೊಂಡ ಮೊಸಳೆ, ಎದುರಿಗೆ ಬಂದ ರಾಜೇಂದ್ರರ ಮೇಲೆ ಎರಗಲು ನೋಡುತ್ತಿತ್ತು. ಬಾಯಿ ತೆರೆದ ಮೊಸಳೆಗೆ ಎದುರಿಗೆ ಇದ್ದವರು ಕಾಣಿಸುವುದಿಲ್ಲವಂತೆ. ಅಕ್ಕ ಪಕ್ಕದವರು ಮಾತ್ರ ಕಾಣಿಸುತ್ತಾರಂತೆ. ಇದನ್ನೇ ಬಂಡವಾಳ ಮಾಡಿಕೊಂಡ ರಾಜೇಂದ್ರ, ತಾವು ತಂದಿದ್ದ ನೈಲಾನ್‌ ಹಗ್ಗವನ್ನು ಮೊಸಳೆಯ ಕುತ್ತಿಗೆಗೆ ಹಾಕಿ, ಅರಣ್ಯ ಇಲಾಖೆಯ ಸಿಬ್ಬಂದಿಗೆ ಜಗ್ಗಲು ಸೂಚಿಸಿ, ತಾವು ಮೆಲ್ಲಗೆ ಅದರ ಬಾಲ ಹಿಡಿದು, ಮೈಮೇಲೆ ಏರಿ ಕುಳಿತುಕೊಂಡರು. ತಕ್ಷಣ, ಕೈಯಲ್ಲಿದ್ದ ಗೋಣಿ ಚೀಲದಿಂದ ಅದರ ಮುಖವನ್ನು ಮುಚ್ಚಿ, ಬಾಯನ್ನು ಗಮ್‌ ಟೇಪ್‌ನಿಂದ ಸುತ್ತಿದರು. ಅಲ್ಲಿಗೆ ಉಸಿರು ಬಂದಂತಾಯಿತು. ನಂತರ, ಮೊಸಳೆ ಕಿಮಕ್‌, ಕಮಕ್‌ ಅಂತ ಕೂಡ ಅನ್ನಲಿಲ್ಲ.

“ಒಂಭತ್ತು ಅಡಿ ಉದ್ದ, 200 ಕೆ.ಜಿ ಭಾರದ ಹೆಣ್ಣು ಮೊಸಳೆ ಅದು. ಅದನ್ನು ನದಿಗೆ ಬಿಡುವುದು ಅಷ್ಟೇ ಸಾಹಸದ ಕೆಲಸ. ನದಿ ಪ್ರದೇಶ ಹೊಸದಾಗಿರುವುದರಿಂದ ಅಲ್ಲಿ ಆಳ ಅಪಾಯ ಏನೂ ತಿಳಿದಿರಲಿಲ್ಲ. ಅದರಲ್ಲೂ ದಡ ಇಳಿಜಾರಾಗಿದೆ ಅನ್ನೋದು ಕೊನೇ ಕ್ಷಣದಲ್ಲಿ ಅರಿವಿಗೆ ಬಂದಿತ್ತು. ಕಟ್ಟಿದ ಹಗ್ಗವನ್ನು ಒಂದೊಂದಾಗಿ ಬಿಚ್ಚಲು ಪ್ರಾರಂಭಿಸಿದೆ. ಅದರ ಬಾಯಿಗೆ ಕಟ್ಟಿದ ಹಗ್ಗವನ್ನು ಬಿಚ್ಚದೇ ಹಾಗೇ ಬಿಡುವ ಹಾಗಿಲ್ಲ. ಇನ್ನೇನು ಮಾಡುವುದು ಅಂತ ಯೋಚಿಸಲು ಸಮಯವೂ ಇರಲಿಲ್ಲ.

Advertisement

ಕೊನೆಗೆ, ಎಲ್ಲ ಧೈರ್ಯವನ್ನೂ ಒಗ್ಗೂಡಿಸಿ ಬಾಯಿಗೆ ಸುತ್ತಿದ ಗಮ್‌ಟೇಪ್‌ ಮೆಲ್ಲಗೆ ಬಿಚ್ಚಿದ ನಂತರ, ನೆರವಿಗೆ ನಿಂತದ್ದು, ಬಾಯಿಗೆ ಕಟ್ಟಿದ್ದ ನೈಲಾನ್‌ ಹಗ್ಗ. ಜೊತೆಗಿದ್ದವರನ್ನು ದೂರವಿರುವಂತೆ ಸೂಚಿಸಿ, ನಿಧಾನಕ್ಕೆ ಹಗ್ಗವನ್ನು ಎಳೆದು ಬಿಟ್ಟೆ. ಆ ಕಡೆಯಿಂದ ಕಣ್ಣು ಮಿಟುಕಿಸುವುದರಲ್ಲಿ ಟಕ್‌ ಎಂದು ಹಗ್ಗ ಬಿಚ್ಚಿದರು. ಮೊಸಳೆ ದೊಡ್ಡದಾಗಿ ಬಾಯಿ ತೆರೆದು ಜೋರಾಗಿ ಶಬ್ದ ಮಾಡುತ್ತಾ ಕಾಳಿ ನದಿಯಲ್ಲಿ ಇಳಿದು ಮಾಯವಾಯಿತು. ಇದರಲ್ಲಿ ಏನಾದರೂ ಸ್ವಲ್ಪ ಎಚ್ಚರ ತಪ್ಪಿದ್ದರೂ ದೇವರ ಪಾದ ಸೇರಬೇಕಾಗುತ್ತಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ರಾಜೇಂದ್ರ.

ಶಿರಸಿಯ ಸುತ್ತಮುತ್ತ ಏನಾದರೂ ಮೊಸಳೆ ಕಂಡರೆ, ಈ ರಾಜೇಂದ್ರ ಸಿರ್ಸಿಕರ್‌ ಓಡಿ ಬರುತ್ತಾರೆ. ಇವರು ವೃತ್ತಿಯಲ್ಲಿ ವೈದ್ಯರು. ವೈದ್ಯ ಎಂದು ಗುರುತಿಸುವುದಕ್ಕಿಂತ ಹೆಚ್ಚಾಗಿ ಪ್ರಾಣಿ-ಪಕ್ಷಿ ತಜ್ಞ, ಅದರಲ್ಲೂ ಮೊಸಳೆ ಕ್ಯಾಚರ್‌ ಎಂದೇ ಹೆಸರಾಗಿದ್ದಾರೆ. ಇವರನ್ನು ಶಿರಸಿಯ ಸ್ಟೀವ್‌ ಇರ್ವಿನ್‌ ಎಂದೂ ಕರೆಯುವುದುಂಟು.

ಅರಣ್ಯ ಇಲಾಖೆಯವರಿಗಂತೂ ಇವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಮೃದು ಸ್ವಭಾವರಾದ ರಾಜೇಂದ್ರ, ಚಿಕ್ಕ ವಯಸ್ಸಿನಿಂದಲೂ ಪ್ರಾಣಿ, ಪಕ್ಷಿಗಳನ್ನು ಆಪಾರವಾಗಿ ಪ್ರೀತಿಸುತ್ತಿದ್ದವರು. ಅದೀಗ ದೊಡ್ಡ ಹವ್ಯಾಸವಾಗಿ ಬೆಳೆದಿದೆ. ಶಿರಸಿ ಎಂದರೆ ಮೊದಲೇ ಮಲೆನಾಡು ಪ್ರದೇಶ. ಕಾಡು ಪ್ರಾಣಿಗಳು, ಅದರಲ್ಲೂ ಮೊಸಳೆಗಳ ಹಾವಳಿ ಹೆಚ್ಚು. ಮೊಸಳೆ ಎಂದರೆ ನಾವು-ನೀವೆಲ್ಲ ಗಾವುದ ದೂರ ಓಡುತ್ತೇವೆ. ಆದರೆ, ರಾಜೇಂದ್ರರಿಗೆ ಮೊಸಳೆ ಕಂಡರೆ ಎಲ್ಲಿಲ್ಲದ ಪ್ರೀತಿ.

ಮೊಸಳೆಯನ್ನು ಹಿಡಿಯಬೇಕಾದರೆ ಧೈರ್ಯಕ್ಕಿಂತ ಟೆಕ್ನಿಕ್‌ ಮುಖ್ಯ. ಪ್ರತಿ ಪ್ರಾಣಿಗಳಿಗೆ ಅದರದೇ ಆದ ಸೈಕಾಲಜಿ ಇರುತ್ತದೆ. ಅದನ್ನು ತಿಳಿದುಕೊಂಡರೆ ಮಾತ್ರ ಕಾರ್ಯಾಚರಣೆ ಸುಲಭ. ರಂಗಾಪುದಲ್ಲಿ ಹಿಡಿದ ಮೊಸಳೆ ಮಾತ್ರ ನನ್ನ ಬೆವರು ಇಳಿಸಿ ಸರಿಯಾಗಿ ಪಾಠ ಕಲಿಸಿತು’ ಎನ್ನುತ್ತಾರೆ ರಾಜೇಂದ್ರ.

ಮೊಸಳೆ ರಕ್ಷಣೆಯ ಕಾಯಕದಲ್ಲಿ ನಿರತರಾಗಿರುವ ರಾಜೇಂದ್ರ ಈವರೆಗೆ ಹತ್ತಾರು ಮೊಸಳೆಗಳನ್ನು ಹಿಡಿದು ನದಿಗೆ ಬಿಟ್ಟಿದ್ದಾರೆ. ಇಷ್ಟೆಲ್ಲಾ ಧೈರ್ಯ ಇವರಿಗೆ ಹೇಗೆ ಬಂತು ಎಂದರೆ ಇವರು ಹೇಳುವುದು- “ನಾನು ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್ ಪಡೆದಿದ್ದೇನೆ. ಅದರಿಂದಲೇ ನನಗೆ ಧೈರ್ಯ’ ಎಂದು ಹೇಳುತ್ತಾರೆ.

ರಾಜೇಂದ್ರ ಮೊದಲ ಮೊಸಳೆ ಹಿಡಿದದ್ದು ಹೊಸಪೇಟೆ ಡ್ಯಾಂನಲ್ಲಿ. ಪ್ರಾಣಿ ಪಕ್ಷಿಗಳನ್ನು ಉಪಚರಿಸುವುದು, ಅವುಗಳ ತಳಿ ಸಂವರ್ಧನೆ ಮಾಡುವುದು ರಾಜೇಂದ್ರರ ಹವ್ಯಾಸ. ತೀರಾ ದಯನೀಯ ಪರಿಸ್ಥಿತಿಯಲ್ಲಿ ಇರುವಂತಹ ಅದೆಷ್ಟೋ ಪ್ರಾಣಿಗಳನ್ನು ತಂದು ಮನೆಯಲ್ಲಿಯೇ ಉಪಚರಿಸಿ ಕಾಡಿಗೆ ಬಿಟ್ಟು ಉದಾಹರಣೆಗಳು ಸಾವಿರಾರು ಇವೆ.

ರಾಜೇಂದ್ರ ತಮ್ಮ, ದುಡಿಮೆಯ ಹಣವನ್ನು ಪ್ರಾಣಿ ಪಕ್ಷಿಗಳಿಗೆ ಮೀಸಲಿಟ್ಟು ಶಿರಸಿಯಲ್ಲಿ ಪ್ರಾಣಿ- ಪಕ್ಷಿಗಳ ಪುನರ್ವಸತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಇದುವರೆಗೂ 1,000 ಕ್ಕೂ ಹೆಚ್ಚು ಬಿಡಾಡಿ ದನಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ. ಅಪಘಾತಕ್ಕೊಳಗಾಗಿ ಗಾಯಗೊಂಡ ಅದೆಷ್ಟೋ ಕಾಗೆ, ಕೋಗಿಲೆ, ಹದ್ದು, ಗೊಬೆ, ಮಂಗಟ್ಟೆ ಯಂಥ 200 ಕ್ಕೂ ಹೆಚ್ಚು ಪಕ್ಷಿಗಳಿಗೆ ಅವುಗಳು ಚೇತರಿಸಿಕೊಳ್ಳುವವರೆಗೂ ತಮ್ಮಲ್ಲೇ ಇಟ್ಟುಕೊಂಡು ನಂತರ ಅವುಗಳನ್ನು ಕಾಡಿನಲ್ಲಿ ಬಿಟ್ಟು ಬರುತ್ತಾರೆ.

ವಿದೇಶಿ ಪ್ರಾಣಿಗಳೂ ಇವೆ
ರಾಜೇಂದ್ರ ಅವರಿಗೆ ವಿದೇಶಿ ಪ್ರಾಣಿ ಪಕ್ಷಿ ಗಳನ್ನು ಸಾಕುವ ಖಯಾಲಿಯೂ ಇದೆ. ಚೀನಾ ಕುರಿಗಳು (ಚೈನೀಸ್‌ ಜಿಂಗೋಟ್‌) ಅಮೆಜಾನ್‌ ನ ಇಗುವಾನಾ, ಆಫ್ರಿಕನ್‌ ಬಾಲ್‌ ಪ್ಯಾಂಥರ್ಸ್‌( ಆಫ್ರಿಕಾದ ಹೆಬ್ಟಾವು) ವಿವಿಧ ಬಗೆಯ ವಿದೇಶಿ ಪ್ರಾಣಿ ಪಕ್ಷಿಗಳು, ಕೋಳಿಗಳು ಇವರ ಪ್ರಾಣಿ ದಯಾ ಸಂಘದ ಕೇಂದ್ರದಲ್ಲಿವೆ. ಪ್ರಾಣಿ, ಪಕ್ಷಿಗಳಿಗೆ ಕೂಡುವ ಲಸಿಕೆ ಮತ್ತು ಔಷಧಗಳ ಬೆಲೆ ತುಂಬಾ ದುಬಾರಿ ಇದ್ದರೂ, ಸ್ವಂತ ಹಣ ಖರ್ಚು ಮಾಡಿ ಇವುಗಳನ್ನು ಸಾಕುತ್ತಿದ್ದಾರೆ.

ಸಾಕ್ಷ್ಯಚಿತ್ರವೂ ಇದೆ
ನಾಗ ಡಾಕ್ಯುಮೆಂಟರಿ ಎನ್ನುವ ಸಾಕ್ಷ್ಯ ಚಿತ್ರವೊಂದನ್ನೂ ರಾಜೇಂದ್ರ ನಿರ್ಮಿಸಿದ್ದಾರೆ. ಇದು ಕರ್ನಾಟಕದ ಇತಿಹಾಸದಲ್ಲೇ ಪ್ರಥಮ ಎನ್ನುತ್ತಾರೆ. ಇದಕ್ಕಾಗಿ ಮೂರು ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದಾರಂತೆ. ನಾಗರ ಹಾವಿನ ಬಗ್ಗೆ ಇರುವ ಮೌಡ್ಯ, ಧಾರ್ಮಿಕ ಭಾವ ಎನ್ನುವ ವಾಸ್ತವಗಳ ನೆಲೆಗಳಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.
ಯೂಟ್ಯೂಬ್‌ ನಲ್ಲಿ ಈ ಡಾಕ್ಯುಮೆಂಟರಿಯನ್ನು ನೋಡಬಹುದು – //www.youtube.com/watch?v=OnDqJZ0hIeW

— ಟಿ.ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next