Advertisement

ಜಯನಗರ ಚುನಾವಣೆ: ಮೂವರಿಗೂ ಗೆಲ್ಲುವ ವಿಶ್ವಾಸ

12:00 PM Jun 10, 2018 | Team Udayavani |

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಹಾಗೂ ಪ್ರತಿಪಕ್ಷ ಬಿಜೆಪಿಗೆ ಚುನಾವಣೆ ಪ್ರತಿಷ್ಠೆಯಾಗಿರುವ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಮತದಾನ. 

Advertisement

ಶಾಸಕರಾಗಿದ್ದ ಬಿ.ಎನ್‌.ವಿಜಯಕುಮಾರ್‌ ನಿಧನದಿಂದಾಗಿ ಚುನಾವಣೆ ಮುಂದೂಡಿಕೆಯಾದ ಬಳಿಕ ಅವರ ಸಹೋದರ ಬಿ.ಎನ್‌.ಪ್ರಹ್ಲಾದ್‌ ಬಾಬು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಕಣದಲ್ಲಿದ್ದಾರೆ. ಇನ್ನು ಜೆಡಿಎಸ್‌, ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದೆ.

ಮೈತ್ರಿ ಸರ್ಕಾರ ರಚನೆಯಾದ ಬಳಿಕ ನಡೆದ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಜಿದ್ದಾಜಿದ್ದಿನ ಸ್ಪರ್ಧೆ ನಡೆಸಿದ್ದರು. ನಂತರ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. ಜಯನಗರ ಕ್ಷೇತ್ರದ ಮತದಾನಕ್ಕೆ ವಾರ ಬಾಕಿ ಇರುವವರೆಗೂ ಪಕ್ಷದ ನಾಯಕರು ಪ್ರಚಾಯ ನಡೆಸಿದ್ದರು.

ನಂತರ ದೇವೇಗೌಡರು ಜಯನಗರದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲಿದೆ ಎಂದು ಪ್ರಕಟಿಸಿದ ನಂತರ ಜೆಡಿಎಸ್‌ನ ಕಾಳೇಗೌಡ, ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಅವರೊಂದಿಗೆ ಪ್ರಚಾರದಲ್ಲಿ ಪಾಲ್ಗೊಂಡು ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದ್ದು ಗಮನ ಸೆಳೆದಿತ್ತು.

ಮೂರು ಪಕ್ಷಗಳಿಗೂ ಪ್ರತಿಷ್ಠೆ: ಮೈತ್ರಿ ಸರ್ಕಾರದ ಸಂಖ್ಯಾಬಲ ಹೆಚ್ಚಳ ದೃಷ್ಟಿಯಿಂದ ಮೂರು ಪಕ್ಷಗಳಿಗೂ ಜಯನಗರ ಚುನಾವಣೆ ಪ್ರತಿಷ್ಠೆ ಎನಿಸಿದೆ. ಸಾರ್ವತ್ರಿಕ ಚುನಾವಣೆ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ.

Advertisement

ಹಾಗಾಗಿ ಜಯನಗರ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸಿದೆ. ಬಿಜೆಪಿ ಪರ ಕೇಂದ್ರ ಸಚಿವ ಅನಂತಕುಮಾರ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದರಾದ ಪಿ.ಸಿ.ಮೋಹನ್‌, ಶೋಭಾ ಕರಂದ್ಲಾಜೆ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಸೇರಿ ಹಲವು ನಾಯಕರು ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ, ಅವರ ತಂದೆ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಬಿರುಸಿನ ಪ್ರಚಾರ ಮುಗಿಸಿದ್ದಾರೆ. ಹಲವು ಸುತ್ತಿನ ಪ್ರಚಾರ ನಡೆಸಿರುವ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಕೂಡ ಗಮನ ಸೆಳೆದಿದ್ದು, ಈ ಮೂವರೂ ಪ್ರಮುಖ ಅಭ್ಯರ್ಥಿಗಳ ಚುಟುಕು ಸಂದರ್ಶನ ಇಲ್ಲಿದೆ.

ಮೂವರಿಗೂ ಕೇಳಲಾದ ಪ್ರಶ್ನೆಗಳು
-ಜಯನಗರ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
-ಪ್ರಚಾರದ ವೇಳೆ ಜನರ ಸ್ಪಂದನೆ ಹೇಗಿತ್ತು?
-ನೀವು ಗಮನಿಸಿದಂತೆ ಕ್ಷೇತ್ರದಲ್ಲಿನ ಸಮಸ್ಯೆಗಳೇನು?
-ಕ್ಷೇತ್ರದ ಅಭಿವೃದ್ಧಿ ಕುರಿತಂತೆ ನಿಮ್ಮ ಆದ್ಯತೆಗಳೇನು?
-ಮತದಾರರು ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಜೆಡಿಎಸ್‌-ಕಾಂಗ್ರೆಸ್‌ ಪತನಕ್ಕೆ ಚುನಾವಣೆ ನಾಂದಿ
ನನ್ನ ಎಂಟನೇ ವಯಸ್ಸು, ಅಂದರೆ, 1972ರಿಂದಲೂ ನಾನು ಜಯನಗರ ನಿವಾಸಿ. ಪ್ರೌಢ ಶಿಕ್ಷಣ, ಪದವಿಪೂರ್ವ, ಡಿಪ್ಲೊಮಾ ಶಿಕ್ಷಣ ಪಡೆದದ್ದೂ ಜಯನಗರದಲ್ಲೇ. ಅಣ್ಣ ಕುಟುಂಬ ರಾಜಕಾರಣ ಬೇಡ ಎಂದ ಕಾರಣಕ್ಕೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿರಲಿಲ್ಲ. ಅದರ ಹೊರತಾಗಿ ಜಯನಗರ ನನಗೆ ಚಿರಪರಿಚಿತ. ಅಣ್ಣನ ಅಕಾಲಿಕ ನಿಧನದಿಂದ ಸ್ಪರ್ಧಿಸಿದ್ದೇನೆ.

ಪ್ರಚಾರ ಆರಂಭಿಸಿದ ದಿನದಿಂದಲೂ ಜನರ ಸ್ಪಂದನೆ ಉತ್ತಮವಾಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದೀಚೆಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಜನ ಪ್ರಚಾರಕ್ಕೆ ಬರಲೇಬೇಡಿ. ನಾವು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿ ಕಳಿಸುತ್ತಿದ್ದಾರೆ. ಪಕ್ಷ ಬೆಂಬಲಿಸುವ ಮೂಲಕ ಅಣ್ಣನಿಗೆ ಶ್ರದ್ಧಾಂಜಲಿ ಸಲ್ಲಿಸುವುದಾಗಿ ಸ್ವಯಂಪ್ರೇರಿತರಾಗಿ ಹೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಗಂಭೀರ ಸಮಸ್ಯೆಗಳು ಕಾಣುತ್ತಿಲ್ಲ. ಕೆಲವೆಡೆ ಸಂಚಾರ ದಟ್ಟಣೆ ಸಮಸ್ಯೆ ಇದೆ. ಇನ್ನೂ ಕೆಲವೆಡೆ ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಅವ್ಯವಸ್ಥೆಯಿದೆ.

ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಗೆ ಗಮನ ಹರಿಸಲಾಗುವುದು. ಕ್ಷೇತ್ರದ ಸರ್ಕಾರಿ ಕಟ್ಟಡಗಳ ಮೇಲೆ ಸೌರಶಕ್ತಿ ಫ‌ಲಕಗಳನ್ನು ಅಳವಡಿಸಿ ವಿದ್ಯುತ್‌ ಬಳಕೆ ವ್ಯವಸ್ಥೆ ಕಲ್ಪಿಸುವುದು. ಸಂಚಾರ ದಟ್ಟಣೆ ನಿವಾರಣೆಗೆ ಆದ್ಯತೆ. ಜಯನಗರ ವಾಣಿಜ್ಯ ಸಂಕೀರ್ಣದ ಮಳಿಗೆ ಹಂಚಿಕೆಯಲ್ಲಿನ ಗೊಂದಲ ನಿವಾರಿಸಿ ತ್ವರಿತ ಹಂಚಿಕೆಗೆ ಪ್ರಯತ್ನ. ಕಸ ವಿಲೇವಾರಿ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಿ ಸ್ವತ್ಛತೆ ಕಾಪಾಡಲು ಒತ್ತು. ಸರ್ಕಾರಿ ಶಾಲಾ ಮಕ್ಕಳಿಗೆ ಕಂಪ್ಯೂಟರ್‌ ಕಲಿಕಾ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು.

ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡರೊಂದಿಗೆ ಮಾತುಕತೆ ನಡೆಸಿ, ಹಿಂದೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ತನ್ವಿರ್‌ ಅಹಮ್ಮದ್‌ ಅವರ ನಾಮಪತ್ರ ಹಿಂಪಡೆಸಿದರು. ನಂತರ ಸ್ಪರ್ಧಿಸಿದ್ದ ಜೆಡಿಎಸ್‌ ಅಭ್ಯರ್ಥಿ ಕಾಳೇಗೌಡರು ಪ್ರಚಾರದಲ್ಲಿರುವಾಗಲೇ ದೇವೇಗೌಡರು ಕಾಂಗ್ರೆಸ್‌ ಬೆಂಬಲಿಸುವುದಾಗಿ ಪ್ರಕಟಿಸಿದರು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದೆ. ಅಣ್ಣ ವಿಜಯಕುಮಾರ್‌ ಆರಂಭಿಸಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿ ಅವರ ಶ್ರಮ ಸಾರ್ಥಕವಾಗುವಂತೆ ನೋಡಿಕೊಳ್ಳಬೇಕಿದೆ. ಶೇ.70ರಷ್ಟು ಮತದಾನದ ನಿರೀಕ್ಷೆಯಿದ್ದು, ಭಾರಿ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಆ ಮೂಲಕ ಕ್ಷೇತ್ರದಿಂದಲೇ ಬಿಜೆಪಿ ಪರ್ವ ಶುರುವಾಗಲಿದ್ದು, ಕಾಂಗ್ರೆಸ್‌- ಜೆಡಿಎಸ್‌ನ ಪತನಕ್ಕೆ ನಾಂದಿಯಾಗಲಿದೆ.
-ಬಿ.ಎನ್‌.ಪ್ರಹ್ಲಾದ್‌ಬಾಬು (ಬಿಜೆಪಿ)

***
ಪಕ್ಷೇತರ ಅಭ್ಯರ್ಥಿಗೆ ಮಾತೇ ಬಂಡವಾಳ
ನಾನು ಹುಟ್ಟಿ, ಬೆಳೆದದ್ದು, ಓದಿದ್ದು, ಕೆಲಸ ಶುರು ಮಾಡಿದ್ದು ಎಲ್ಲವೂ ಜಯನಗರದಲ್ಲಿ. ಈವರೆಗಿನ ನನ್ನ ಜೀವನ ಇಲ್ಲೇ ಕಳೆದಿದ್ದು, ನಮ್ಮ ಕುಟುಂಬ ಕೂಡ ಜಯನಗರಕ್ಕೆ ಚಿರಪರಿಚಿತ. 10 ವರ್ಷಗಳ ಹಿಂದೆ ತಂದೆ ಇದೇ ಕ್ಷೇತ್ರ ಪ್ರತಿನಿಧಿಸುತ್ತಿದ್ದು, ಹಳೆಯ ಸಂಪರ್ಕವಿದ್ದವರು ಮನೆ ಮಗಳಂತೆ ಕಂಡು ಪ್ರೋತ್ಸಾಹಿಸಿದ್ದಾರೆ. ಹಾಗಾಗಿ ಇದೇ ನನ್ನ ಆಯ್ಕೆಯ ಕ್ಷೇತ್ರ.

ಜನರು ಸಾಕಷ್ಟು ಪ್ರೀತಿ ತೋರಿ ಪ್ರೋತ್ಸಾಹ ನೀಡುತ್ತಿದ್ದಾರೆ. ಒಂದೂವರೆ ವರ್ಷದಿಂದ ಜನರ ಸಂಪರ್ಕದಲ್ಲಿದ್ದು, ಪರಿಸರ ಸಂರಕ್ಷಣೆ ಸೇರಿ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಮೂಲಕ ಜನರ ನಿರೀಕ್ಷೆ, ನಾಡಿಮಿಡಿತ ಅರ್ಥವಾಗಿದೆ. ಶಾಸಕರಾಗಿ, ಉಸ್ತುವಾರಿ ಸಚಿವರಾಗಿ ತಂದೆ ನೀಡಿದ ಕೊಡುಗೆಗಳನ್ನು ಜನ ಸ್ಮರಿಸುತ್ತಿದ್ದು, ಉತ್ತಮ ಸ್ಪಂದನೆ ಸಿಕ್ಕಿದೆ.

ಉತ್ತಮ ವ್ಯಕ್ತಿಯಾಗಿದ್ದ ಮಾಜಿ ಶಾಸಕರಾದ ಬಿ.ಎನ್‌.ವಿಜಯಕುಮಾರ್‌ ಅವರ ಬಗ್ಗೆ ಗೌರವವಿದೆ. ಕೆಲವು ಭಾಗ ಸಾಕಷ್ಟು ಅಭಿವೃದ್ಧಿಯಾಗಿದ್ದರೆ, ಗುರಪ್ಪನಪಾಳ್ಯ, ಸಾರಕ್ಕಿ, ಬೈರಸಂದ್ರದ ಹಲವೆಡೆ ಮೂಲ ಸೌಕರ್ಯದ ಕೊರತೆ ಇದೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ಪ್ರದೇಶಗಳು ಸಾಕಷ್ಟಿವೆ. ಹಸಿ, ಒಣ ಕಸ ವಿಂಗಡಣೆಯಿಲ್ಲದೆ ವಿಲೇವಾರಿಯಲ್ಲಿ ಸಮಸ್ಯೆ ಇದೆ. ಕೆಲವೆಡೆ ಕುಡಿಯುವ ನೀರಿನ ಕೊರತೆ, ಒಳಚರಂಡಿ ಸಮಸ್ಯೆ ಜನರನ್ನು ಕಾಡುತ್ತಿದೆ. ಬಡವರು ನೆಲೆಸಿರುವ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ.

ಕ್ಷೇತ್ರದ ಎಲ್ಲ ಪ್ರದೇಶಗಳಿಗೂ ಸಮಾನ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು. ಸರ್ಕಾರಿ ಕಚೇರಿಗಳನ್ನು ಲಂಚಮುಕ್ತಗೊಳಿಸಿ ಪಾರದರ್ಶಕ ಹಾಗೂ ಉತ್ತರದಾಯಿತ್ವದ ಆಡಳಿತ ನೀಡಲಾಗುವುದು. ಜಯನಗರ ವಾಣಿಜ್ಯ ಸಂಕೀರ್ಣದ ಮಳಿಗೆಗಳು ಹಂಚಿಕೆಯಾಗದ ಕಾರಣ ನಷ್ಟವಾಗುತ್ತಿದ್ದು, ತ್ವರಿತವಾಗಿ ಮಳಿಗೆ ಹಂಚಿಕೆಗೆ ಒತ್ತು ನೀಡಲಾಗುವುದು. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವ ಆಸ್ಪತ್ರೆ ನಿರ್ಮಾಣಕ್ಕೆ ಒತ್ತು.

ಸಮಾಜದಲ್ಲಿ ಬದಲಾವಣೆ ತರಬೇಕೆಂಬ ತವಕವಿದ್ದು, ಆಕ್ಟಿವಿಸ್ಟ್‌ ಆಗಿದ್ದ ನಾನು ರಾಜಕೀಯದ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಇಚ್ಛಿಸಿದ್ದೇನೆ. ಪಕ್ಷೇತರ ಅಭ್ಯರ್ಥಿಗೆ ಮಾತೇ ಬಂಡವಾಳ. 10 ವರ್ಷದ ಹಿಂದೆ ಸ್ಪರ್ಧಿಸಿದ್ದವರು ನಂತರ ಕ್ಷೇತ್ರದತ್ತ ಸುಳಿದಿರಲಿಲ್ಲ. ಜನರಿಗೆ ಪರಿಚಿತರಲ್ಲದ ಬಿಜೆಪಿ ಅಭ್ಯರ್ಥಿ ಭಾವನಾತ್ಮಕವಾಗಿ ಮತ ಯಾಚಿಸುತ್ತಿದ್ದಾರೆ. ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಬೆಂಬಲಿಸಿದ್ದು, ಮಹಿಳಾ ಅಭ್ಯರ್ಥಿಯಾದ ನನ್ನನ್ನು ಜನ ಆಯ್ಕೆ ಮಾಡುವ ವಿಶ್ವಾಸವಿದೆ.
-ಸೌಮ್ಯಾ ರೆಡ್ಡಿ (ಕಾಂಗ್ರೆಸ್‌)

***
10 ದಿನದಲ್ಲಿ ಸರ್ಕಾರಿ ಕಚೇರಿಗಳು ಲಂಚಮುಕ್ತ
ಇತರೆ ವಿಧಾನಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಜಯನಗರ ಕ್ಷೇತ್ರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಮತದಾರರು ವಿದ್ಯಾವಂತ, ಪ್ರಜ್ಞಾವಂತರಾಗಿದ್ದು, ಹಣ, ಹೆಂಡ, ಆಮಿಷಗಳಿಗೆ ಒಳಗಾಗುವುದು ಕಡಿಮೆ. ಈ ಕಾರಣಗಳಿಂದಾಗಿ 2008ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿ ರಾಜಕೀಯ ಆರಂಭಿಸಿದ್ದೆ.

ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ಸಾಕಷ್ಟು ಪ್ರಚಾರ ನಡೆಸಿ ಉಳಿದ ಎಲ್ಲ ಅಭ್ಯರ್ಥಿಗಳಿಗಿಂತ ಜನರಿಗೆ ಹೆಚ್ಚು ಪರಿಚಿತ ಹಾಗೂ ಜನಪ್ರಿಯನಾಗಿದ್ದೇನೆ. ಇತರೆ ಪಕ್ಷಗಳ ಚುನಾವಣಾ ಅಕ್ರಮ ಬಯಲಿಗೆಳೆಯುವ ಮೂಲಕ ಜನರಲ್ಲಿ ಅರಿವು ಮೂಡಿಸಿದ್ದೇನೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್‌ ಬೆಂಬಲಿಗರು ಸಹ ಈ ಬಾರಿ ನನ್ನನ್ನು ಬೆಂಬಲಿಸುವ ನಿರೀಕ್ಷೆ ಇದೆ.

ಮಧ್ಯಮ ಮತ್ತು ಮಧ್ಯಮ ಕೆಳವರ್ಗದವರು ನೆಲೆಸಿರುವ ಕಡೆ ಕಸದ ಸಮಸ್ಯೆ, ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ರೆವಿನ್ಯೂ ಬಡಾವಣೆಗಳಲ್ಲಿ ಕುಡಿಯುವ ನೀರಿನ ಅಭಾವ, ಒಳಚರಂಡಿ ವ್ಯವಸ್ಥೆಯಲ್ಲಿ ಸಮಸ್ಯೆಗಳಿವೆ. ಸರ್ಕಾರಿ ಕಚೇರಿಗಳಲ್ಲಿ ಲಂಚಗುಳಿತನ ತೀವ್ರವಾಗಿದ್ದು, ಹಣ ನೀಡದೆ ಯಾವುದೇ ಸೇವೆ ಸಿಗದ ಸ್ಥಿತಿ ಇದೆ. ಕ್ಷೇತ್ರದ ಜನಸಂಖ್ಯೆಯಲ್ಲಿ ಶೇ.25ರಷ್ಟು ಮಂದಿ ಗುರಪ್ಪನಪಾಳ್ಯದಲ್ಲಿದ್ದು, ಒಂದೂ ಮೈದಾನವಿಲ್ಲ. ಆದರೆ ಜಯನಗರ ಭಾಗದಲ್ಲಿ ಸಾಕಷ್ಟು ಮೈದಾನಗಳಿವೆ. ಅಭಿವೃದ್ಧಿಯಲ್ಲಿ ಸಾಕಷ್ಟು ಏರುಪೇರುಗಳಿವೆ.

ನಾನು ಶಾಸಕನಾದರೆ 10 ದಿನದಲ್ಲಿ ಕ್ಷೇತ್ರದಲ್ಲಿನ ಎಲ್ಲ ಸರ್ಕಾರಿ ಕಚೇರಿಗಳನ್ನು ಲಂಚಮುಕ್ತಗೊಳಿಸುತ್ತೇನೆ. ಕ್ಷೇತ್ರದಾದ್ಯಂತ ಕಸ ವಿಂಗಡಣೆಯನ್ನು ಪರಿಣಾಮಕಾರಿಯಾಗಿ ಕೈಗೊಂಡು 2 ವರ್ಷದಲ್ಲಿ ಕಸಮುಕ್ತಗೊಳಿಸಲಾಗುವುದು. ಸರ್ಕಾರಿ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಿಸಲಾಗುವುದು. ನಾವು ನೀಡಿದ ದೂರಿನ ಹಿನ್ನೆಲೆಯಲ್ಲಿ ಜಯನಗರ ವಾಣಿಜ್ಯ ಸಂಕೀರ್ಣವು ಬಿಡಿಎಯಿಂದ ಬಿಬಿಎಂಪಿ ಸುಪರ್ಧಿಗೆ ವರ್ಗಾವಣೆಯಾಯಿತು. ಮಳಿಗೆಗಳನ್ನು ಅರ್ಹರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಜೆಸಿಬಿ ಪಕ್ಷಗಳ (ಜನತಾದಳ, ಕಾಂಗ್ರೆಸ್‌, ಬಿಜೆಪಿ) ಅನೈತಿಕ, ಭ್ರಷ್ಟಾಚಾರ, ಚುನಾವಣಾ ಅಕ್ರಮಗಳನ್ನು ಬಯಲಿಗೆಳೆದಿದ್ದು, ಜನರಲ್ಲಿ ಅರಿವು ಮೂಡಿಸಿದ್ದೇನೆ. ಜನಪರ ಹೋರಾಟದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದೇನೆ. ನನ್ನ ವಿದ್ಯಾರ್ಹತೆ, ದೇಶ- ವಿದೇಶಗಳಲ್ಲಿ ಕಾರ್ಯ ನಿರ್ವಹಣೆ, ನೈತಿಕತೆ, ಗಾಂಧಿಗಿರಿಯ ಹೋರಾಟಕ್ಕೂ ಇತರೆ ಅಭ್ಯರ್ಥಿಗಳಿಗೂ ಹೋಲಿಕೆಯೇ ಇಲ್ಲ. ಹಾಗಾಗಿ ಜನ ನನ್ನನ್ನು ಆಯ್ಕೆ ಮಾಡುವ ನಂಬಿಕೆ ಇದೆ.
-ರವಿಕೃಷ್ಣಾ ರೆಡ್ಡಿ (ಪಕ್ಷೇತರ)

* ಎಂ.ಕೀರ್ತಿಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next