ಕೊಪ್ಪಳ: ಆರು ಮಕ್ಕಳನ್ನು ಹೆತ್ತಿರುವ ಮಹಿಳೆ ನಗರದ ಕೆ.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ ಎಂದು ಸುದ್ದಿ ಹರಡುತ್ತಿದ್ದಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಬಂದಿದ್ದ ವೇಳೆ ಮಹಿಳೆ ಕಣ್ತೆರೆದಿದ್ದರಿಂದ ಸಂಬಂಧಿಕರು ವಿಚಲಿತರಾದ ಘಟನೆ ನಡೆದಿದ್ದು, ಕೊನೆಗೂ ಆ ಮಹಿಳೆ ಮೃತಪಟ್ಟಿದ್ದಾಳೆ.
ಹೌದು, ಕೊಪ್ಪಳದ ಕೆ.ಎಸ್.ಆಸ್ಪತ್ರೆಯಲ್ಲಿ ಸಿನಿಮೀಯ ರೀತಿಯಲ್ಲಿ ವಿಚಿತ್ರ ಘಟನೆ ನಡೆದು ಎಲ್ಲರನ್ನು ತಬ್ಬಿಬ್ಟಾಗಿಸುವಂತೆ ಮಾಡಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಮಹಿಳೆ ಕವಿತಾ ಕುಂಬಾರ ಅವರಿಗೆ ಇಲ್ಲಿನ ಗೋವನಕೊಪ್ಪ ಆಸ್ಪತ್ರೆಯಲ್ಲಿ ಕೇವಲ 25ನೇ ವಯಸ್ಸಿನಲ್ಲಿ ಆರನೇ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಬಳಿಕ ತೊಂದರೆ ಕಾಣಿಸಿಕೊಂಡಿಲ್ಲ. ಆದರೆ ಸೋಮವಾರ ರಾತ್ರಿ ರಕ್ತಸ್ರಾವವಾಗಿದ್ದರಿಂದ ಸಂಬಂಧಿಕರು ಚಿಕಿತ್ಸೆಗಾಗಿ ಕೆ.ಎಸ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದಿದ್ದು ಏನು? ಆಸ್ಪತ್ರೆಯಲ್ಲಿ ಕವಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೆದುಳು, ಮೂತ್ರಪಿಂಡ ನಿಷ್ಕ್ರಿಯವಾಗಿರುವ ವಿಷಯ ತಿಳಿದ ವೈದ್ಯರು, ಪತಿ ಮಂಜುನಾಥ ಕುಂಬಾರಗೆ ಕವಿತಾ ಅವರ ಜೀವಕ್ಕೆ ಅಪಾಯವಿದೆ ಎಂಬ ವಿಷಯ ತಿಳಿಸಿದ್ದರಂತೆ. ಮೆದುಳು ಶಕ್ತಿ ಕಳೆದುಕೊಂಡಿದೆ. ಕಿಡ್ನಿ ಸಹಿತ ವಿಫಲವಾಗಿವೆ. ಕೇವಲ ಆಮ್ಲಜನಕದೊಂದಿಗೆ ಮಾತ್ರ ಉಸಿರಾಟ ನಡೆಸುತ್ತಿದ್ದಾರೆ. ಕೃತಕ ಆಮ್ಲಜನಕ ತೆಗೆದರೆ ಜೀವ ಕಳೆದುಕೊಳ್ಳಲಿದ್ದಾರೆ ಎಂದಿದ್ದರಂತೆ. ಪತಿ ಮಂಜುನಾಥ ಸಹಿತ ಈ ವಿಷಯವನ್ನು ತಮ್ಮ ಕುಟುಂಬ ಸದಸ್ಯರಿಗೆ ಮುಟ್ಟಿಸಿದ್ದಾರೆ. ಆದರೆ ಕವಿತಾ ಸತ್ತಿರುವ ಸುದ್ದಿ ಗ್ರಾಮದಲ್ಲೂ ಹರಡಿದೆ.
ಅಂತ್ಯ ಸಂಸ್ಕಾರಕ್ಕೆ ಬಂದು ಕಂಗಾಲು: ಕವಿತಾ ಅವರ ಸಾವಿನ ಸುದ್ದಿ ಊರಲ್ಲಿ ಹರಡಿದ್ದಲ್ಲದೇ, ಬೇರೆ ಊರಿನ ಸಂಬಂಧಿಕರಿಗೂ ನಿಧನ ಸುದ್ದಿ ತಲುಪಿದೆ. ಅವರೆಲ್ಲರೂ ಮಹಿಳೆ ಅಂತ್ಯಸಂಸ್ಕಾರಕ್ಕೆ ಬಂದಿದ್ದಾರೆ. ಮಹಿಳೆ ಶವ ತೆಗೆದುಕೊಂಡು ಹೋಗಲು ಆಸ್ಪತ್ರೆಗೆ ಬಂದಿದ್ದ ವೇಳೆ ಕವಿತಾ ಆಸ್ಪತ್ರೆಯಲ್ಲಿ ಕಣ್ಣು ತೆರೆದು ನೋಡಿದ್ದಾಳೆ. ಇದರಿಂದ ದಿಗ್ಭ್ರಮೆಗೊಂಡ ಕುಟುಂಬ ಸದಸ್ಯರು ನಮ್ಮ ಮಗಳು ಸತ್ತಿಲ್ಲ. ಆದರೂ ವೈದ್ಯರು ಸತ್ತಿದ್ದಾರೆ ಎಂದು ನಮಗೆ ಸುಳ್ಳು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಹಣಕ್ಕಾಗಿ ಈ ರೀತಿ ಮಾಡಿದ್ದಾರೆ. ದೇಹವನ್ನು ಹೊರಗಡೆ ಬಿಡದಂತೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿ ವೈದ್ಯರ ವಿರುದ್ಧ ಸಂಬಂಧಿಕರು ಆಕ್ರೋಶ ಹೊರ ಹಾಕಿದರು.