Advertisement

ಎಲ್ಲ ಕೆಲಸವನ್ನು ಸರ್ಕಾರ ಮಾಡದು

12:28 PM Oct 29, 2018 | Team Udayavani |

ಮೈಸೂರು: ರೈತ ಸಂಘಗಳು ಗ್ರಾಮೀಣ ಪ್ರದೇಶಗಳಲ್ಲಿ ನೆಲೆ ಕಾಣುವ ಮೂಲಕ ಬೆಳೆ ಬೆಳೆಯುವ ರೈತರಿಗೆ ನೆರವಾಗುವ ಜತೆಗೆ ರೈತ ಸಂಘಗಳು ಎಲ್ಲಾ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಹೋರಾಟ ಮಾಡುತ್ತಾ ಕುಳಿತರೆ ಸಾಲದು ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಸಲಹೆ ನೀಡಿದರು. 

Advertisement

ನಗರದ ಗಾಂಧಿ ವಿಚಾರ ಪರಿಷತ್‌ನಿಂದ ಶ್ರೀರಾಂಪುರದ ಎಸ್‌ಬಿಎಂ ಕಾಲೋನಿಯಲ್ಲಿರುವ ಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ “ಹಳ್ಳಿಗೆ ಹೋಗೋಣ ಬನ್ನಿ’ ವಿಷಯ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಮತ್ತು ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರೈತ ಸಂಘವೂ ಇಂದು ಪಟ್ಟಣ ಸೇರಿದ್ದು, ಎಲ್ಲಾ ಕೆಲಸಗಳನ್ನು ಸರ್ಕಾರ ಮಾಡುತ್ತವೆ ಎಂದು ರೈತ ಸಂಘಗಳು ಹೋರಾಟ ಮಾಡುತ್ತಾ ಕೂರುವ ಬದಲು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

ಇದಕ್ಕಾಗಿ ರೈತ ಸಂಘಗಳು ಮೊದಲು ಹಳ್ಳಿಯಲ್ಲಿ ನೆಲೆ ಕಾಣಬೇಕಿದ್ದು, ಬೆಳೆ ಬೆಳೆಯುವ ರೈತರಿಗೆ ನೆರವಿಗೆ ನಿಲ್ಲಬೇಕಿದೆ. ಇದೇ ಕಾರಣಕ್ಕೆ ಗಾಂಧೀಜಿ ಅವರು ಗ್ರಾಮಗಳಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂದಿದ್ದರು. ಈ ಹಿನ್ನೆಲೆಯಲ್ಲಿ ನಾವಿಂದು ಗಾಂಧೀಜಿ ಅವರನ್ನು ನೆನೆಯದಿದ್ದರೂ, ನಮ್ಮ ತನವನ್ನಾದರೂ ನೆನೆದುಕೊಂಡು ಬದುಕು ಕಟ್ಟಿಕೊಳ್ಳದಿದ್ದರೆ ಪರಕೀಯರ ಆಕ್ರಮಣಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಾಲಮನ್ನವೇ ಮದ್ದಲ್ಲ: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಾಲಮನ್ನವೇ ಮದ್ದಲ್ಲ, ಕೇವಲ ಸಾಲಮನ್ನಕ್ಕೆ ಹೋರಾಟ ಮಾಡಿ ಕಾಲಹರಣ ಮಾಡುವ ಬದಲು ಕೃಷಿ ಕ್ಷೇತ್ರದಲ್ಲಿನ ಬದಲಾವಣೆಗೆ ರೈತ ಸಂಘ ಹೋರಾಡಬೇಕಿದೆ. ಕೇವಲ ಸಾಲಮನ್ನಾಕ್ಕೆ ರೈತರನ್ನು ಸೀಮಿತಗೊಳಿಸದೇ ಅದರಿಂದಾಚೆ ಇರುವ ಸಾಕಷ್ಟು ರೈತರ ಸಮಸ್ಯೆಗಳನ್ನು ಎದುರಿಸುವ ಶಕ್ತಿಯನ್ನು ತುಂಬುವತ್ತ ರೈತ ಸಂಘ ಸಾಗಬೇಕಿದೆ.

150 ವರ್ಷದಿಂದಲೇ ಸಾಕಷ್ಟು ಚಳುವಳಿ, ಚರ್ಚೆಗಳನ್ನು ಮಾಡಿ ಸಾಕಾಗಿದ್ದು ಒಂದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಿಲ್ಲ. ಮಹಾತ್ಮಗಾಂಧಿ ಅವರನ್ನು ವಿಶ್ವವೇ ಒಪ್ಪಿಕೊಂಡಿದ್ದು, ನಮಲ್ಲೇ ಆದರ್ಶವನ್ನು ಮರೆತಿದ್ದಾರೆ. ರೈತರು ಇಂದು ಭೂಮಿಯನ್ನು ಬಿಟ್ಟು ನಗರಕ್ಕೆ ವಲಸೆ ಬಂದಿದ್ದು, ಕೃಷಿಕರ ಜತೆಗೆ ಬಡಗಿ, ಚಮ್ಮಾರ, ಕುಂಬಾರ, ನೇಕಾರರೂ ಸಹ ವಿದೇಶಿಗರ ಆಕ್ರಮಣಕ್ಕೆ ತುತ್ತಾಗಿ ನೆಲೆ ಕಳೆದುಕೊಂಡಿದ್ದಾರೆ.

Advertisement

ಹೀಗಾಗಿ ಅಂತಹ ನಾಲ್ಕೈದು ಹಳ್ಳಿಗಳ ಮಧ್ಯೆ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕಿದ್ದು, ಕೃಷಿಯ ಉಪ ಕಸುಬು ಸೃಷ್ಟಿಸುವ ನಿಟ್ಟಿನಲ್ಲಿ ರೈತ ಸಂಘ ಆಲೋಚಿಸುವ ಮೂಲಕ ರೈತನನ್ನು ಮತ್ತೂಮ್ಮೆ ಹಳ್ಳಿಯ ಧಣಿಯನ್ನಾಗಿ ಮಾಡಬೇಕಿದೆ ಎಂದರು.

ರಾಯಚೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಪೊ›.ಮುಜಾಫ‌ರ್‌ ಅಸ್ಸಾದಿ, ಗಾಂಧಿವಾದಿ ಪ.ಮಲ್ಲೇಶ್‌, ಸಾಮಾಜಿಕ ಕಾರ್ಯಕರ್ತ ಭಕ್ತ ರಾಮೇಗೌಡ, ರೈತಸಂಘದ ಮುಖಂಡ ಹೊಸಕೋಟೆ ಬಸವರಾಜು ಇನ್ನಿತರರು ಹಾಜರಿದ್ದರು. 

ಕೈಗಾರಿಕೆಯೇ ಶತ್ರುಗಳು: ದೇಶದ ಉದ್ಯೋಗ ಸಮಸ್ಯೆ ನಿವಾರಿಸಲು ನೆಹರು ದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಅವಕಾಶಕೊಟ್ಟರು. ಆದರೆ ಕೈಗಾರಿಕೆ‌ ಸ್ಥಾಪನೆಯಿಂದ ಹೆಚ್ಚಿನ ಲಾಭವೇನೋ ಆಗುತ್ತಿದ್ದು, ಯುವಕರಿಗೆ ಉದ್ಯೋಗ ದೊರೆತಿಲ್ಲ ಎಂಬ ಅಘಾತಕಾರಿ ಅಂಶವನ್ನು ಅವರೇ ನಡೆಸಿದ ಸಮೀಕ್ಷೆ ಹೇಳಿತು.

ಹೀಗಾಗಿ ನಮಗೆ 10 ಮಂದಿಗೆ ಉದ್ಯೋಗ ನೀಡುವ ಕೈಗಾರಿಕೆ ಬೇಕಿದೆ ಹೊರತು, ಕೆಲಸವನ್ನು ಕಿತ್ತುಕೊಳ್ಳುವ ಆಕ್ರಮಣಕಾರಿ ಶತ್ರು ಕೈಗಾರಿಕೆಗಳಿಗೆ ಅನುಮತಿ ನೀಡಬಾರದಿತ್ತು. ಕೈಗಾರಿಕೆಗಳು ನಮ್ಮ ಪೆಟ್ಟಿ ಅಂಗಡಿಗಳನ್ನು ಕಸಿದು ಮಾಲ್‌ಗ‌ಳನ್ನು ನಮ್ಮ ಮೇಲೆ ಹೇರುವ ಸಂಸ್ಕೃತಿಗೆ ಸರ್ಕಾರಗಳೇ ಮಣೆ ಹಾಕುತ್ತಿವೆ.

ಅಂದು ಕಾರ್ಖಾನೆ ಆರಂಭಿಸಲು ಗಾಂಧೀ ಬಿಟ್ಟು ಕೊಡದೇ ಸ್ವದೇಶಿ ಚಳವಳಿ ನಡೆಸಿ ಸ್ವಾತಂತ್ರ್ಯ ತಂದುಕೊಟ್ಟ ದೇಶದಲ್ಲಿ ನಮ್ಮನ್ನು ಇಂದು ವಿದೇಶಿಗಳ ಗುಲಾಮಗಿರಿಗೆ ತಳ್ಳುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಇಂದು ಸರ್ಕಾರಗಳೇ ಕೈಗಾರಿಕೆಗಳನ್ನು ಆಹ್ವಾನಿಸುತ್ತಿದ್ದು, ಇಂತಹ ಕಂಪನಿಗಳ ವಿರುದ್ಧ ಹೋರಾಟ ನಡೆಸಲು ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತಿದೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next