Advertisement

ಶಿಕ್ಷಕರ ಮೇಲಿದೆ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಹೊಣೆ

09:27 AM Feb 01, 2019 | Team Udayavani |

ಬೀದರ: ಶಿಕ್ಷಕರು ಸಾಧನೆ ಮಾಡುತ್ತಿದ್ದಲ್ಲಿ ಅವರು ಸಹಜವಾಗಿ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಮೂಡಿಸಬಹುದು. ಶಿಕ್ಷಕರು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಹೊಣೆ ಹೊತ್ತು ಕಾರ್ಯ ನಿರ್ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ಎಚ್.ಸಿ. ಹೇಳಿದರು.

Advertisement

ನಗರದ ಪ್ರತಾಪ ನಗರದಲ್ಲಿನ ಸರಕಾರಿ ನೌಕರರ ಭವನದಲ್ಲಿ ನಡೆದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಮಾತ್ರ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯೊಂದಿಗೆ ನೈತಿಕ ಶಿಕ್ಷಣ ನೀಡುವುದು ಕೂಡ ಶಿಕ್ಷಕರ ಜವಾಬ್ದಾರಿಯಾಗಿದೆ. ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಸಮಾಜಕ್ಕಾಗಿ ಸಲ್ಲಿಸಿದ ಸೇವೆಯನ್ನು ಮಾದರಿಯಾಗಿ ಇಟ್ಟುಕೊಂಡು ಇಂದಿನ ಶಿಕ್ಷಕರು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೆ ಮುಂದಾಗಬೇಕು. ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪ್ರಾಥಮಿಕ ಶಿಕ್ಷಣದ ಮಹತ್ವ ಹೆಚ್ಚಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳು ಬೆಳೆದು ಉತ್ತಮ ಓದಿನ ಕಡೆಗೆ ಗಮನ ಹರಿಸುತ್ತಾರೆ. ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಮಕ್ಕಳ ಭಾವನೆಗಳನ್ನು ತಿಳಿದುಕೊಂಡು ಓದಿನ ಕಡೆಗೆ ಗಮನ ಸೆಳೆಯುವ ಕಾರ್ಯ ಮಾಡಬೇಕು. ಸಮಾಜ ಬದಲಾವಣೆಯ ಹೊಣೆ ಶಿಕ್ಷಕರಮೇಲಿದ್ದು, ತಮ್ಮ ಕರ್ತವ್ಯವನ್ನು ಸೂಕ್ತವಾಗಿ ನಿಭಾಯಿಸಬೇಕು ಎಂದರು. ಶಿಕ್ಷಣದಲ್ಲಿ ಏಕರೂಪ ಶಿಕ್ಷಣ ಜಾರಿಗೆ ಬರಬೇಕೆಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರೊ| ವಿಠಲದಾಸ ಪ್ಯಾಗೆ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರ ಬದುಕು ಮತ್ತು ಶೈಕ್ಷಣಿಕ ಕೊಡುಗೆ ಕುರಿತು ಮಾತನಾಡಿದರು.

Advertisement

ಇದೇ ವೇಳೆ ತಾಲೂಕಿಗೆ ಒಬ್ಬರಂತೆ ಪ್ರೌಢ ಮತ್ತು ಪ್ರಾಥಮಿಕ 10 ಜನ ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕರ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಮಾಲತೇಶ ಬಬ್ಟಾಜಿ, ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ದೇವಯ್ಯ ಗುತ್ತೇದಾರ, ಗುಲಬರ್ಗಾ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ, ಪಾಂಡುರಂಗ ಬೆಲ್ದಾರ, ವೈಜಿನಾಥ ಸಾಗರ, ಗೋವಿಂದ ಪೂಜಾರಿ, ನಿಲೇಶಕುಮಾರ ಸೋನಿ, ಸುಧಾಕರ ಗಾಯಕವಾಡ, ಮಲ್ಲಿಕಾರ್ಜುನ ಮೇತ್ರೆ, ಮನೋಜ, ರಮೇಶ ಸಿಂಧೆ ಇದ್ದರು. ಶಿವಲಿಂಗಯ್ಯ ಸ್ವಾಮಿ ಸ್ವಾಗತಿಸಿದರು. ರಮೇಶ ಉಮಾಪೂರೆ ನಿರೂಪಿಸಿದರು. ಬಸವಣ್ಣಪ್ಪ ಮಠ ವಂದಿಸಿದರು.

ಕರ್ನಾಟಕ ರಾಜ್ಯ ಶಿಕ್ಷಕರ ಹೋರಾಟ ಸಮಿತಿ, ಪ್ರೌಢ ಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಎಸ್ಸಿ-ಎಸ್ಟಿ ಶಿಕ್ಷಕರ ಸಂಘ ಹಾಗೂ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಎಸ್ಸಿ-ಎಸ್ಟಿ ಶಿಕ್ಷಕರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next