ಮೈಸೂರು: ಪ್ರತಿಯೊಂದು ನದಿಗೂ ತನ್ನದೇ ಆದ ಮಹತ್ವವಿದೆ. ಕಾವೇರಿ – ಕಪಿಲ – ಸ್ಫಟಿಕ ಸರೋವರ ಸಂಗವವಾಗುವ ಈ ಕ್ಷೇತ್ರದಲ್ಲಿ ಮಾಘಮಾಸದಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳೂ ನಾಶವಾಗುತ್ತವೆ ಎಂದು ಮೈಸೂರಿನ ಶ್ರೀಲಗಧಮಹರ್ಷಿ ಜ್ಯೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಬಿ.ಅಮರೇಶ ಶಾಸ್ತ್ರಿ ಹೇಳಿದರು.
ತಿರುಮಕೂಡಲು ನರಸೀಪುರದಲ್ಲಿ ನಡೆಯುತ್ತಿರುವ 11ನೇ ಮಹಾ ಕುಂಭಮೇಳದ ಎರಡನೇ ದಿನವಾದ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾಘ ಸ್ನಾನದ ಮಹತ್ವ ಕುರಿತು ಅವರು ಉಪನ್ಯಾಸ ನೀಡಿದರು.ಕಾರ್ತಿಕ ಮಾಸದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಬರುತ್ತೆ. ಅದಕ್ಕಾಗಿಯೇ ಕಾವೇರಿಯನ್ನು ದಕ್ಷಿಣದ ಗಂಗೆ ಎಂದು ಹೇಳಲಾಗುತ್ತದೆ ಎಂದರು.
ಕಾವೇರಿ ನದಿ ಅತ್ಯಂತ ಶುದ್ಧ-ಪವಿತ್ರ. ಇಲ್ಲಿ ಸ್ನಾನ ಮಾಡುವುದರಿಂದ ಯಾವುದೇ ಕಾಯಿಲೆ, ಚರ್ಮರೋಗಗಳು ಬರುವುದಿಲ್ಲ ಎಂಬ ನಂಬಿಕೆ ಇದೆ. ಆದರೆ, ಚರಂಡಿ ನೀರು ಸೇರ್ಪಡೆ, ಕೃಷಿಗೆ ಬಳಸುವ ರಸಗೊಬ್ಬರ ಮತ್ತು ಕ್ರಿಮಿನಾಶಕಗಳೂ ನದಿಗೆ ಸೇರಿ ಮಲಿನವಾಗುತ್ತಿವೆ. ಜೊತೆಗೆ ಅರೆಬೆಂದ ಹೆಣಗಳನ್ನು ನದಿಗೆ ಎಸೆಯುವುದು, ಪಿಂಡಪ್ರಧಾನ ಮಾಡುವುದರಿಂದಲೂ ನದಿಗಳು ಮಲಿನವಾಗುತ್ತಿದ್ದು, ಇದನ್ನು ತಪ್ಪಿಸಬೇಕಿದೆ ಎಂದು ಹೇಳಿದರು.
ಮಾಘಮಾಸದ ಶುಕ್ಲಪಕ್ಷ, ತ್ರಯೋದಶಿ, ಚತುದರ್ಶಿಯ ಪೌರ್ಣಮಿ ತಿಥಿಯಲ್ಲಿ ಸ್ನಾನ ಮಾಡಿದರೆ ದೇವತೆಗಳ ಆಶೀರ್ವಾದ ಸಿಗುತ್ತೆ. ಮಾಘಮಾಸದ ಪುಣ್ಯಸ್ನಾನಕ್ಕೆ ಮಹತ್ವವಿದ್ದು, ರವಿವಾರ ಪುಣ್ಯಸ್ನಾನ ಮಾಡುವುದು ಇನ್ನೂ ಶ್ರೇಷ್ಠ. ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡಿ, ಸೂರ್ಯ ಹುಟ್ಟಿದ ಮೇಲೆ ಮಂತ್ರ ಹೇಳುತ್ತಾ ಅರ್ಘ್ಯ ಬಿಡಬೇಕು. ಮಾಘಮಾಸದಲ್ಲಿ ನದಿ ಸ್ನಾನ ಮಾಡಿದರೆ ಸಕಲ ಪಾಪಗಳು ನಾಶ ವಾಗುತ್ತವೆ ಎಂದರು.