ಕಾರವಾರ: ರಾಜ್ಯದಲ್ಲಿ ಎರಡನೇ ಹಂತದಲ್ಲಿ ಏ.23ರಂದು ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಮತದಾನ ನಡೆದು, ಒಂದು ತಿಂಗಳ ಅಂತರದಲ್ಲಿ ಮೇ 23ರಂದು ಜಿಲ್ಲೆಯ ಕುಮಾಟಾದ ಡಾ| ಎ.ವಿ. ಬಾಳಿಗಾ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಜಿಲ್ಲೆಯ ಹಳಿಯಾಳ (ಶೇ.73.43), ಕಾರವಾರ (ಶೇ.72.28), ಕುಮಟಾ (ಶೇ.77.12), ಭಟ್ಕಳ(71.79), ಶಿರಸಿ(ಶೇ.78.38), ಯಲ್ಲಾಪುರ (ಶೇ.77.75) ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ (ಶೇ.70.68) ಹಾಗೂ ಕಿತ್ತೂರು (ಶೇ.72.33) ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿವೆ. ಒಟ್ಟು 15,52,134 ಮತದಾರರಿದ್ದು 11,49,609 ಮತದಾರರು ಮತ ಚಲಾಯಿಸಿದ್ದಾರೆ. ಶೇ.74.07ರಷ್ಟು ಮತದಾನವಾಗಿತ್ತು.
ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳಾದ ಬಿಜೆಪಿಯ ಅನಂತಕುಮಾರ್ ಹೆಗಡೆ, ಜೆಡಿಎಸ್‌ನ ಆನಂದ್ ಅಸ್ನೋಟಿಕರ್, ಬಹುಜನ ಸಮಾಜ ಪಕ್ಷದ ಸುಧಾಕರ ಕೀರ ಜೋಗಳೇಕರ್, ನೋಂದಾಯಿತ ರಾಜಕೀಯ ಪಕ್ಷಗಳಾದ ರಾಷ್ಟ್ರೀಯ ಸಮಾಜ ಪಕ್ಷದ ನಾಗರಾಜ ನಾಯ್ಕ, ರಾಷ್ಟ್ರೀಯ ಜನಸಂಭಾವನ ಪಕ್ಷದ ನಾಗರಾಜ್ ಶೇಟ್, ಭಾರತ ಭೂಮಿ ಪಕ್ಷದ ಮಂಜುನಾಥ ಸದಾಶಿವ, ಉತ್ತಮ ಪ್ರಜಾಕೀಯ ಪಕ್ಷದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾದ ಅನಿತಾ ಶೇಟ್, ಕುಂದಬಾಯಿ ಗಣಪತಿ ಪುರಲೇಕರ್, ಚಿದಾನಂದ ಹರಿಜನ, ನಾಗರಾಜ್ ಅನಂತ್ ಶಿರಾಲಿ, ಬಾಲಕೃಷ್ಣ ಪಾಟೀಲ್, ಮೊಹಮದ್ ಝಬರೂದ್ ಖತೀಬ್ ಸೇರಿ ಒಟ್ಟು 13 ಅಭ್ಯರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ.
Advertisement
ಮತದಾರರು ಯಾವ ಪಕ್ಷದ ಅಭ್ಯರ್ಥಿ ಗೆಲ್ಲಬಹುದು ಎಂಬ ಕುತೂಹಲದಲ್ಲಿದ್ದರೆ, ಅಭ್ಯರ್ಥಿಗಳು ನಮಗೆ ಎಷ್ಟು ಮತಗಳು ಬರಬಹುದು ಎಂಬ ಕಾತುರತೆಯಲ್ಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಈ ಸಲದ ಫಲಿತಾಂಶವನ್ನು ಪ್ರತಿಷ್ಠೆಯಾಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಚುನಾವಣಾ ಕಣಕ್ಕೆ ಇಳಿಯದೇ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿತ್ತು.
ಅಧಿಕೃತ ಪ್ರವೇಶ ಪತ್ರ ಕಡ್ಡಾಯ:
ಮತ ಎಣಿಕೆ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಲ್ಲದೆ ಮತ ಎಣಿಕೆ ಕೇಂದ್ರದಲ್ಲಿ ನಾಲ್ಕು ಹಂತದ ತೀವ್ರ ಭದ್ರತೆ ಇರಲಿದ್ದು, ಅಭ್ಯರ್ಥಿ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರು, ಮತ ಎಣಿಕೆ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಇವರೂ ಕೂಡ ಕಡ್ಡಾಯವಾಗಿ ಆಯೋಗದಿಂದ ನೀಡಲಾದ ಅಧಿಕೃತ ಪ್ರವೇಶ ಪತ್ರ ಹೊಂದಿರಬೇಕು. ರಾಜಕೀಯ ಪಕ್ಷಗಳ ಮುಖಂಡರಿಗೆ ಈಗಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತಿಳಿವಳಿಕೆ ನೀಡಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಯಾವುದೇ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು ಅಧಿಕೃತ ವಾಹನಗಳು ಪೊಲೀಸ್ ಇಲಾಖೆಯಿಂದ ನೀಡುವ ಮಾರ್ಗದರ್ಶನದಂತೆ ಪ್ರವೇಶ ಪಡೆಯಬಹುದಾಗಿದೆ. ಉಳಿದಂತೆ ಹೆಗಡೆ ವೃತ್ತದವರೆಗೆ ಮಾತ್ರ ಪ್ರವೇಶವಿರುತ್ತದೆ. ಪೊಲೀಸ್ ಇಲಾಖೆ ನಿಯಮಗಳನ್ನು ಯಾರೂ ಉಲ್ಲಂಘನೆ ಮಾಡದಂತೆ ಹಾಗೂ ಕಡ್ಡಾಯವಾಗಿ ಇಲಾಖೆಯಿಂದ ನೀಡಿರುವ ಪಾಸ್‌ಗಳನ್ನು ಪ್ರದರ್ಶಿಸಬೇಕಿದೆ. ಭದ್ರತೆಗೆ ಜಿಲ್ಲಾ ಪೊಲೀಸ್ ಅಧಿಧೀಕ್ಷಕರು, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಧೀಕ್ಷಕರು, 3 ಡಿವೈಎಸ್‌ಪಿ, 10 ಸಿಪಿಐ, 19 ಪಿಎಸ್‌ಐ, 29 ಎಎಸ್‌ಐ, 680 ಪೊಲೀಸ್ ಸಿಬ್ಬಂದಿ, 2 ಕೆಎಸ್‌ಆರ್‌ಪಿ, 6 ಡಿಎಆರ್, 3 ಸಿಎಪಿಎಫ್ ನಿಯೋಜಿಸಲಾಗಿದೆ.
ಮದ್ಯ ಮಾರಾಟಕ್ಕೂ ಬ್ರೇಕ್:
ಉತ್ತರ ಕನ್ನಡ ಕೋಮು ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಮೇ 22ರ ಮಧ್ಯರಾತ್ರಿಯಿಂದ 24ರ ಮಧ್ಯರಾತ್ರಿವರೆಗೆ 144 ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಜಿಲ್ಲಾದ್ಯಂತ ಮೇ23 ಬೆಳಗ್ಗೆ 6ರಿಂದ 24ರ ಬೆಳಗ್ಗೆ 6ರವರೆಗೆ ಮದ್ಯ ಮಾರಾಟ, ಮದ್ಯ ತಯಾರಿಕಾ ಘಟಕಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ಜಂಗಮವಾಣಿಗೆ ನಿಷೇಧ:
ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ ಎಣಿಕೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ಹಾಗೂ ಮಾಧ್ಯಮ ಕೇಂದ್ರ ಪ್ರವೇಶಿಸುವ ಪತ್ರಕರ್ತರಿಗೆ ಮಾತ್ರ ಮೊಬೈಲ್ಗೆ ವಿನಾಯಿತಿ ಇರಲಿದೆ. ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಡಾ| ಹರೀಶ್‌ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ಪಾಟೀಲ್ ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದರು.