Advertisement

ಷಟ್ಪಥ ವೇಳೆ ಸರಿಯಾಗ್ತದೆ ಎಲ್ಲಾ ನ್ಯೂನತೆ

01:17 PM Jun 01, 2018 | Team Udayavani |

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಷಟ್ಪಥ ನಿರ್ಮಾಣದ ವೇಳೆ ಈ ಹಿಂದೆ ಆದ ಎಲ್ಲಾ ನ್ಯೂನತೆ ಸರಿಪಡಿಸಲು ಕ್ರಮ ವಹಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದ್ದಾರೆ.

Advertisement

ಗುರುವಾರ, ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರಲ್ಲಿ (ಶಿರಮಗೊಂಡನಹಳ್ಳಿ ರಸ್ತೆ) ಕಾಮಗಾರಿ ಪರಿಶೀಲಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-4ಅನ್ನು ಚತುಷ್ಪಥದಿಂದ ಷಟ್ಪಥಕ್ಕೆ ಪರಿವರ್ತಿಸುವ ಕಾಮಗಾರಿ ಭರದಿಂದ ಸಾಗಿದೆ.

ಕಾಮಗಾರಿ ವೇಳೆ ಈಗಿರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು. 2 ವರ್ಷದಲ್ಲಿ ಚಿತ್ರದುರ್ಗದಿಂದ ಹುಬ್ಬಳ್ಳಿಯವರೆಗೆ ಷಟ್ಪಥ ನಿರ್ಮಾಣ ಕಾಮಗಾರಿ ಮುಗಿಯಲಿದೆ ಎಂದರು.

ದಾವಣಗೆರೆಯಿಂದ ಶಿರಮಗೊಂಡನಹಳ್ಳಿಗೆ ತೆರಳುವ ಮಾರ್ಗ ಮಧ್ಯೆ ನಿರ್ಮಿಸಿರುವ ಕೆಳಸೇತುವೆ, ಆನಗೋಡಿನಿಂದ ಅಣಜಿ ಕಡೆ ತೆರಳುವ ರಸ್ತೆ, ರಾಷ್ಟ್ರೀಯ ಹೆದ್ದಾರಿ-4 ಜೋಡಣೆ ಬಳಿ ನಿರ್ಮಾಣ ಮಾಡಿರುವ ಸೇತುವೆ, ದಾವಣಗೆರೆ ಬನಶಂಕರಿ ಬಡಾವಣೆ ಸಂಪರ್ಕದ ಕೆಳ ಸೇತುವೆ, ಕುಂದುವಾಡ ಬಳಿ ಇರುವ ಕೆಳ ಸೇತುವೆ ನ್ಯೂನತೆ ಸರಿಪಡಿಸಲಾಗುವುದು ಎಂದು ಅವರು ಹೇಳಿದರು.

ಆನಗೋಡು ಬಳಿ ಹಾಲಿ ಇರುವ ಬ್ರಿಡ್ಜ್ನ ಎತ್ತರ, ಅಗಲ ಕುರಿತು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ಅದನ್ನು 12 ಮೀಟರ್‌ ಅಗಲ, 4 ಮೀಟರ್‌ ಎತ್ತರ ಮಾಡಲು ಕ್ರಮ ವಹಿಸಲಾಗುತ್ತಿದೆ. ದಾವಣಗೆರೆ ನಗರದಿಂದ ಶಿರಮಗೊಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-4 ಸೇರುವ ಜಾಗದಲ್ಲಿ ಸುಂದರ ವೃತ್ತ ನಿರ್ಮಾಣ ಮಾಡಲಾಗುವುದು. ಹಾಲಿ ಇರುವ ವಕ್ರ ಕೆಳ ಸೇತುವೆ ಜಾಗದಲ್ಲಿ ನೇರ ಸಂರ್ಪಕ ಕಲ್ಪಿಸುವ ರಸ್ತೆ ನಿರ್ಮಿಸಲಾಗುವುದು. ಇದಕ್ಕಾಗಿ ಭದ್ರಾ ನಾಲೆಯ ಮಾರ್ಪಾಟಿಗೂ ಸಹ ಕ್ರಮ ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

Advertisement

ಜೊತೆಗೆ ವಿದ್ಯಾನಗರ ಕಡೆಯಿಂದ ಬನಶಂಕರಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ಗಾತ್ರ ಹೆಚ್ಚಿಸಲಾಗುವುದು. ಕುಂದುವಾಡ ಬಳಿಯ ಕೆಳ ಸೇತುವೆ ಸಾಕಷ್ಟು ಸಮಸ್ಯೆ ಇದೆ ಎಂದು ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ. ಇಲ್ಲಿರುವ ಕೆಳ ಸೇತುವೆ ಮಳೆ ಬಂದ ಕೆಲಸ ದಿನಗಳ ಕಾಲ ಜಲಾವೃತವಾಗುತ್ತದೆ. ಸಂಪರ್ಕ ಕಡಿತ ಆಗುತ್ತದೆ. ಇದನ್ನು ತಪ್ಪಿಸಲು ವ್ಯವಸ್ಥಿತ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ, ಮಾಜಿ ಮೇಯರ್‌ಗಳಾದ ಎಚ್‌.ಎನ್‌. ಗುರುನಾಥ, ಕೆ.ಆರ್‌. ವಸಂತಕುಮಾರ್‌, ಪಾಲಿಕೆ ಮಾಜಿ ಸದಸ್ಯ ಸಂಕೋಳ ಚಂದ್ರಶೇಖರ್‌, ಮುಖಂಡರಾದ ಜಯಪ್ರಕಾಶ್‌ ಕೊಂಡಜ್ಜಿ, ಮಂಜುನಾಥ ಈ ವೇಳೆ ಹಾಜರಿದ್ದರು. 

ಅಧಿಕಾರಿಗಳಿಗೆ ಖಡಕ್‌ ಸೂಚನೆ ಈ ಹಿಂದೆ ರಾಷ್ಟ್ರೀಯ ಹೆದ್ದಾರಿ-ನಾಲ್ಕರಲ್ಲಿ ನಿರ್ಮಿಸಿರುವ ಅಂಡರ್‌ ಬ್ರಿಡ್ಜ್, ಸೇವಾ ರಸ್ತೆ ಕುರಿತು ಸಾಕಷ್ಟು ಟೀಕೆ ವ್ಯಕ್ತವಾಗಿವೆ. ನೇರ ರಸ್ತೆ ನಿರ್ಮಾಣದ ಬದಲು ವಕ್ರ ರಸ್ತೆಗಳನ್ನು ನಿರ್ಮಿಸಲಾಗಿದೆ. ಇಂತಹ ರಸ್ತೆಗಳಿಂದ ಜನರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂಬ ದೂರು ಇವೆ. ಈ ಬಾರಿ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಹೈಟೆನ್ಷನ್‌ ವಿದ್ಯುತ್‌ ಮಾರ್ಗ ಸ್ಥಳಾಂತರ ರಾಷ್ಟ್ರೀಯ ಹೆದ್ದಾರಿ-4ರ ಶಿರಮಗೊಂಡನಹಳ್ಳಿಯಿಂದ ಕುಂಡುವಾಡ ಕಡೆ ತೆರಳುವ ವಿದ್ಯಾನಗರ ಬಳಿ ಇರುವ ಹೈಟೆನ್ಷನ್‌ ವಿದ್ಯುತ್‌ ಕಂಬ ಸ್ಥಳಾಂರಿತರಿಸಲಾಗುವುದು. ಜೊತೆಗೆ ಇಲ್ಲಿರುವ
ಸೇವಾ ರಸ್ತೆಯ ಸಮಸ್ಯೆಯನ್ನೂ ಸಹ ಪರಿಹರಿಸಲಾಗುವುದು. ಅಗತ್ಯವಿರುವ ಸೇವಾ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು.
 ಜಿ.ಎಂ. ಸಿದ್ದೇಶ್ವರ್‌, ಸಂಸದ

300 ಸೀಟ್‌ ಗೆಲ್ತೇವೆ: ಸಂಸದ ಸಿದ್ದೇಶ್ವರ್‌ 
ದಾವಣಗೆರೆ: ದೇಶದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದ್ದರೂ ಸಹ 2019ರಲ್ಲಿ ಲೋಕಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು 300 ಸೀಟು ಗೆಲ್ಲುತ್ತೇವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ರಾಷ್ಟ್ರೀಯ ಹೆದ್ದಾರಿ-4ರ ಷಟ್ಪಥ ಕಾಮಗಾರಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೇಶದ ವಿವಿಧ ಲೋಕಸಭಾ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಇದು 2019ರ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲ್ಲ ಎಂದರು.

ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದಾರೆ. ದೇಶದ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ರೂಪಿಸಿದ್ದಾರೆ. ಇದು ನಮ್ಮ ಕೈ ಹಿಡಿಯಲಿದೆ. ಯಾವುದೇ ಕಾರಣಕ್ಕೂ ಈ ಉಪ ಚುನಾವಣೆ
ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಾರದು. ನಾವು ಈ ಹಿಂದಿನ ಚುನಾವಣೆಯಲ್ಲಿ ಗೆದ್ದ ಸ್ಥಾನಗಳಿಗೂ ಹೆಚ್ಚಿನ ಸ್ಥಾನ ಗೆಲ್ಲುವುದು ಖಚಿತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next