ಯಾದಗಿರಿ: ತಾಲೂಕಿನ ಸುಕ್ಷೇತ್ರ ಅಬ್ಬೆತುಮಕೂರು ವಿಶ್ವಾರಾಧ್ಯರ ಜಾತ್ರೆಗೆ ಸಿದ್ಧತೆ ಭರದಿಂದ ಸಾಗಿದೆ. ಮಾ. 11ರಂದು ಸೋಮವಾರ ಸಂಜೆ 6:30ಕ್ಕೆ ವಿಶ್ವಾರಾಧ್ಯರ ಭವ್ಯ ರಥೋತ್ಸವ ಜರುಗಲಿದ್ದು, ಜಾತ್ರೆಗಾಗಿ ಸುಕ್ಷೇತ್ರ ಅಬ್ಬೆತುಮಕೂರು ಸಜ್ಜುಗೊಳ್ಳುತ್ತಿದೆ. ಮಠದ ಆವರಣದ ತುಂಬ ಬೃಹತ್ ಪೆಂಡಾಲ್ ಹಾಕುವ ಕಾರ್ಯದಲ್ಲಿ ನೂರಾರು ಕಾರ್ಮಿಕರು ತೊಡಗಿದ್ದು, ಅದು ಕೊನೆಯ ಹಂತದಲ್ಲಿದೆ.
ಸಕ್ರೆಪ್ಪಗೌಡ ವೇದಿಕೆಯನ್ನು ಬಣ್ಣ-ಬಣ್ಣದ ಪರದೆಗಳಿಂದ ಅಲಂಕೃತ ಗೊಳಿಸಲಾಗಿದ್ದು, ಮಾನವ ಧರ್ಮ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಶ್ರೀಮಠದ ಪೀಠಾಧಿಪತಿ ಡಾ| ಗಂಗಾಧರ ಮಹಾಸ್ವಾಮೀಜಿ ಜಾತ್ರೆಯ ಸಿದ್ಧತೆಗಳನ್ನು ವೀಕ್ಷಿಸಿ, ಖುದ್ದಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಶ್ರೀ ಮಠದಿಂದ ಪಾದಗಟ್ಟೆಯವರೆಗೂ ಮತ್ತು ಮುದ್ನಾಳ್ ಹಾಗೂ ಯಾದಗಿರಿಯ ಮುಖ್ಯ ರಸ್ತೆಯಲ್ಲಿ ಬೃಹತ್ ಕಮಾನುಗಳನ್ನು ನಿರ್ಮಿಸಿದ್ದು, ಜಾತ್ರೆಗೆ ಭಕ್ತರನ್ನು ಸ್ವಾಗತಿಸುತ್ತಿವೆ. ಶ್ರೀ ಮಠದ ಮುಂಭಾಗ ಮತ್ತು ಅಕ್ಕ ಪಕ್ಕದ ಜಮೀನುಗಳನ್ನು ಶುಚಿಗೊಳಿಸಲಾಗಿದ್ದು, ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಪ್ರತ್ಯೇಕ ನಿಲುಗಡೆಯ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಜಾತ್ರೆ ದಿನ ಗಣನೆಯಲ್ಲಿದ್ದು, ಶ್ರೀಮಠದ ಭಕ್ತರು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಶ್ರೀಗಳ ಮಾರ್ಗ ದರ್ಶನದಲ್ಲಿ ಜಾತ್ರಾ ಮಹೋತ್ಸವದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಜಾತ್ರೆ ಜೋರು ಹೆಚ್ಚಾಗುತ್ತಿದೆ.
ಈ ಸಂದರ್ಭದಲ್ಲಿ ವೆಂಕಟರಡ್ಡಿ ಅಬ್ಬೆತುಮಕೂರು, ಡಾ| ಸುಭಾಶ್ಚಂದ್ರ ಕೌಲಗಿ, ಎಸ್.ಎನ್. ಮಿಂಚನಾಳ, ಶಿವು ದೊಡ್ಮನಿ ಸೇರಿದಂತೆ ಅಬ್ಬೆತುಮಕೂರಿನ ಪ್ರಮುಖರು ಇದ್ದರು. ಯಾದಗಿರಿ ಜಿಲ್ಲೆಯಲ್ಲಿ ಅತ್ಯಂತ ವೈಭವದಿಂದ ನಡೆಯುವ ಅತೀ ಹೆಚ್ಚು ಭಕ್ತರನ್ನೊಂದಿದ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯರ ಜಾತ್ರೆಯ ರಥೋತ್ಸವ ಸೋಮವಾರ ನಡೆಯಲಿದ್ದು, ಜಾತ್ರೆಯ ಸಿದ್ಧತೆ ಅಂತಿಮ ಹಂತದಲ್ಲಿದೆ. ಶ್ರೀ ಮಠದ ಪೀಠಾಧಿ ಪತಿ ಡಾ| ಗಂಗಾಧರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಜಾತ್ರೆಯಲ್ಲಿ ರಥೋತ್ಸವ ನಂತರ ಧರ್ಮಸಭೆ ಹಾಗೂ ನಾಡಿನ ಚಲನಚಿತ್ರ ಖ್ಯಾತ ನಟ, ನಟಿಯರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಡಾ| ಸುಭಾಶ್ಚಂದ್ರ ಕೌಲಗಿ. ಮಠದ ವಕ್ತಾರರು
ಶ್ರೀ ಮಠದ ಆವರಣದಲ್ಲಿ ಈಗಾಗಲೇ ಅನೇಕ ಅಂಗಡಿ ಮಳಿಗೆಗಳು ಸಾಲು ಸಾಲಾಗಿ ಹಾಕಲಾಗುತ್ತಿದ್ದು, ಜಾತ್ರೆಗೆ ಕಳೆ ಕಟ್ಟಿವೆ. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳಿಗೆ ದಾಸೋಹ ಮಹಾ ಮನೆಯಲ್ಲಿ ಮುಂತಾದ ಸಿಹಿ ಪದಾರ್ಥಗಳ ತಯಾರಿಕೆಯಲ್ಲಿ ಬಾಣಸಿಗರು ತೊಡಗಿದ್ದಾರೆ. ಜೋಳದ ರೊಟ್ಟಿ ಮತ್ತು ಸಜ್ಜಿ ರೊಟ್ಟಿಗಳನ್ನು ಭಕ್ತರು ಸ್ವ ಇಚ್ಛೆಯಿಂದ ಸಿದ್ಧಪಡಿಸಿಕೊಂಡು ಬಂದು ದಾಸೋಹ ಮನೆಗೆ ಒಪ್ಪಿಸುತ್ತಿದ್ದಾರೆ