Advertisement

ಪ್ರಥಮ ಪ್ರಜೆಯ ಆಯ್ಕೆಗೆ ಮತದಾನ ಆರಂಭ

04:40 AM Jul 17, 2017 | Karthik A |

ಹೊಸದಿಲ್ಲಿ: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಉತ್ತರಾಧಿಕಾರಿ ಆಯ್ಕೆಗಾಗಿ ಸೋಮವಾರ ಮತದಾನ ನಡೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ರಾಮನಾಥ್‌ ಕೋವಿಂದ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಪಿಎ ಅಭ್ಯರ್ಥಿಯಾಗಿ ಲೋಕಸಭೆಯ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಕಣದಲ್ಲಿದ್ದಾರೆ. ಸದ್ಯದ ಅಂಕಿ ಅಂಶಗಳ ಪ್ರಕಾರ, ಕೋವಿಂದ್‌ ಅವರೇ ಮುಂಚೂಣಿಯಲ್ಲಿದ್ದಾರೆ. ಈ ಚುನಾವಣೆಯ ಫ‌ಲಿತಾಂಶ ಗುರುವಾರ ಪ್ರಕಟವಾಗಲಿದೆ.

Advertisement

ಈ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರು, ಆಯಾ ರಾಜ್ಯಗಳ ಶಾಸಕರು ಮತ ಚಲಾಯಿಸಲಿದ್ದಾರೆ. ಸಂಸದರು ಸಂಸತ್‌ ಅಥವಾ ಆಯಾ ರಾಜ್ಯಗಳ ವಿಧಾನಸಭೆಯಲ್ಲಿ ಮತ ಚಲಾಯಿಸಬಹುದು. ಹಾಗೆಯೇ ಶಾಸಕರು ತಮ್ಮ ತಮ್ಮ ರಾಜ್ಯಗಳ ವಿಧಾನ ಸಭೆಯಲ್ಲಿ ಮತ ಚಲಾಯಿಸಲಿದ್ದಾರೆ. ಈ ಬಾರಿ ಒಟ್ಟು 4,896 ಮತದಾರರು ಮತದಾನ ಮಾಡಲಿದ್ದು, ಇವರಲ್ಲಿ 4,120 ಶಾಸಕರು ಮತ್ತು 776 ಸಂಸದರು ಇದ್ದಾರೆ. ಆದರೆ, ರಾಷ್ಟ್ರಪತಿ ಅವರಿಂದ ನಾಮನಿರ್ದೇಶಿತಗೊಂಡಿರುವವರಿಗೂ ಮತದಾನದ ಹಕ್ಕು ಇಲ್ಲ. ಅಂದರೆ ಸಚಿನ್‌ ಹಾಗೂ ರೇಖಾ ಮತ ಚಲಾವಣೆ ಮಾಡುವಂತಿಲ್ಲ. ರಾಜ್ಯಗಳ ವಿಧಾನಪರಿಷತ್‌ ಸದಸ್ಯರಿಗೆ ಮತದಾನದ ಹಕ್ಕು ಇರುವುದಿಲ್ಲ. ಹಾಗೆಯೇ ಲೋಕಸಭೆ ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿ 13 ಸದಸ್ಯ ಸ್ಥಾನಗಳು ಖಾಲಿಯಿದ್ದು, ಚುನಾವಣೆ ಬಳಿಕವೇ ಸದಸ್ಯರ ಆಯ್ಕೆ ನಡೆಯಲಿದೆ.


ದೇಶಾದ್ಯಂತ 32 ಮತದಾನ ಕೇಂದ್ರಗಳಲ್ಲಿ, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಕಾರ್ಯದರ್ಶಿ ಅವರು ರಿಟರ್ನಿಂಗ್‌ ಆಫೀಸರ್‌ ಆಗಿದ್ದಾರೆ. ಚುನಾವಣೆಗೆ 33 ವೀಕ್ಷಕರನ್ನು ಚುನಾವಣಾ ಆಯೋಗ ನೇಮಿಸಿದೆ. ಇಬ್ಬರು ವೀಕ್ಷಕರು ಲೋಕಸಭೆಯಲ್ಲಿ ಉಪಸ್ಥಿತರಿರಲಿದ್ದು, ವಿಧಾನಸಭೆಗಳಲ್ಲಿ ಒಬ್ಬರು ಉಪಸ್ಥಿತರಿರಲಿದ್ದಾರೆ. ಹಾಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಧಿಕಾರಾವಧಿ ಜು.24ರಂದು ಕೊನೆಗೊಳ್ಳಲಿದ್ದು, ಜು.25ರಂದು ನೂತನ ರಾಷ್ಟ್ರಪತಿ ಅವರಿಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೆಹರ್‌ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.

ವಿಶೇಷ ಪೆನ್‌ ಬಳಕೆ: ಮತದಾನ ಕೇಂದ್ರಕ್ಕೆ ಮತದಾರ ಜನಪ್ರತಿನಿಧಿಗಳು ಪೆನ್ನು ತೆಗೆದುಕೊಂಡು ಹೋಗುವಂತಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಪ್ರಕಟನೆ ಹೊರಡಿಸಿದೆ. ಚುನಾವಣೆಗೆ ಮತಪತ್ರದಲ್ಲಿ ಟಿಕ್‌ ಮಾಡುವ ಮೂಲಕ ಮತ ಹಾಕಬೇಕು. ಇದಕ್ಕೆ ಮತದಾನ ಕೇಂದ್ರದಲ್ಲೇ ನೀಡುವ ವಿಶಿಷ್ಟ ನಮೂನೆಯ ಮಾರ್ಕರ್‌ ಪೆನ್‌ಗಳನ್ನೇ ಬಳಸಬೇಕು. ಮತದಾರರು ತಮ್ಮ ಪೆನ್‌ಗಳಿಂದಲೇ ಟಿಕ್‌ ಮಾಡಿದರೆ ಮತ ಅಸಿಂಧು ಆಗುತ್ತದೆ. ಆದ್ದರಿಂದ ಪೆನ್‌ ಅನ್ನು ನಿಷೇಧಿಸಲಾಗಿದೆ.

ಒಟ್ಟು ಮತಗಳ ಮೌಲ್ಯ – 10,95,519;
ಎನ್‌ಡಿಎ – 6,61,278 – 60.30%;
ಯುಪಿಎ – 4,34,241 – 39.70%

Advertisement
Advertisement

Udayavani is now on Telegram. Click here to join our channel and stay updated with the latest news.

Next