Advertisement

ಮಾ. 1ರಿಂದ ಎಲ್ಲರಿಗೂ ಶಾಲೆ? 6-8 ನೇರ ತರಗತಿ ಆರಂಭ ಇಂದು ನಿರ್ಧಾರ ಸಾಧ್ಯತೆ

02:17 AM Feb 12, 2021 | Team Udayavani |

ಮಂಗಳೂರು/ ಉಡುಪಿ/ ಬೆಂಗಳೂರು: ರಾಜ್ಯದಲ್ಲಿ ಎಲ್ಲ ತರಗತಿಗಳು ಮಾ. 1ರಿಂದ ಆರಂಭ ವಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ಸಂಬಂಧ ಫೆ. 12ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಟಾಸ್ಕ್ಫೋರ್ಸ್‌ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

Advertisement

ಇದರೊಂದಿಗೆ 6ರಿಂದ 8ರ ವಿದ್ಯಾರ್ಥಿಗಳಿಗೆ ಮಾ. 1ಕ್ಕಿಂತ ಮುನ್ನವೇ ತರಗತಿ ಆರಂಭಿಸಬೇಕೇ ಬೇಡವೇ ಎಂಬುದರ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ.

ಪದವಿ, ಪದವಿಪೂರ್ವ, ಎಸೆಸೆಲ್ಸಿ ಮತ್ತು 9ನೇ ವಿದ್ಯಾರ್ಥಿಗಳಿಗೆ ಈಗಾಗಲೇ ನೇರ ತರಗತಿ ಆರಂಭ ವಾಗಿದ್ದು, 6ರಿಂದ 8ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯ ಸಹಕಾರ ಕೋರಿದೆ. ಸದ್ಯ 6ರಿಂದ 8ನೇ ತರಗತಿ ಮಕ್ಕಳಿಗೆ ವಿದ್ಯಾಗಮ ನಡೆಯುತ್ತಿದೆ. ಈ ಕುರಿತ ಪರಾಮರ್ಶನ ಸಭೆ ಶುಕ್ರವಾರ ಆಯೋಜನೆಗೊಂಡಿದೆ.

ವೀಡಿಯೋ ಕಾನ್ಫರೆನ್ಸ್‌
ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ ಎಲ್ಲ ಡಿಡಿಪಿಐ, ಬಿಇಒಗಳ ಜತೆಗೆ ಶಿಕ್ಷಣ ಇಲಾಖೆ ಆಯುಕ್ತರಿಂದ ವೀಡಿಯೋ ಕಾನ್ಫರೆನ್ಸ್‌ ನಡೆದಿದೆ. ಎಷ್ಟು ಹಾಜರಾತಿ ಇದೆ, ಸವಾಲುಗಳು ಏನು ಎಂಬ ವಿಚಾರದಲ್ಲಿ ಅಭಿಪ್ರಾಯ ಆಲಿಸಲಾಗಿದೆ. ವಿದ್ಯಾಗಮ ಸಂದರ್ಭ ಕೊರೊನಾ ಪ್ರಕರಣ ಎದುರಾಗಿಲ್ಲ ಎಂಬ ಅಭಿಪ್ರಾಯ ಈ ಸಂದರ್ಭ ವ್ಯಕ್ತವಾಗಿದೆ. ಸಭೆಯಲ್ಲಿ ವ್ಯಕ್ತವಾದ ಅಂಶಗಳನ್ನು ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಅತಿಥಿ ಶಿಕ್ಷಕರ ನೇಮಕ ಆದೇಶ
ಪ್ರೌಢಶಾಲೆಗಳಲ್ಲಿ ಖಾಲಿ ಇರುವ 3,473 ಅತಿಥಿ ಶಿಕ್ಷಕರ ಹುದ್ದೆ ಗಳ ಭರ್ತಿಗೆ ಶಿಕ್ಷಣ ಇಲಾಖೆ ಆಯುಕ್ತರು ಗುರುವಾರ ಸುತ್ತೋಲೆ ಹೊರಡಿಸಿದ್ದಾರೆ. ಅಗತ್ಯ ಹುದ್ದೆಗಳು ಖಾಲಿ ಇರುವಲ್ಲಿ, ದೈಹಿಕ ಶಿಕ್ಷಣ ಮತ್ತು ವೃತ್ತಿ ಶಿಕ್ಷಕರನ್ನು ಹೊರತು ಪಡಿಸಿ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅನುದಾನಿತ ಶಾಲೆಗಳಲ್ಲಿ ಇರುವ ಹೆಚ್ಚುವರಿ ಶಿಕ್ಷಕರನ್ನು ಕೊರತೆ ಇರುವ ಸರಕಾರಿ ಶಾಲೆಗಳಲ್ಲಿ ಒಒಡಿ ಆಧಾರದ ಮೇಲೆ ಹಂಚಿಕೆ ಮಾಡಲಾಗುವುದು ಎಂದು ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.

Advertisement

ಕರಾವಳಿ: 244 ಅತಿಥಿ ಶಿಕ್ಷಕರು
ದಕ್ಷಿಣ ಕನ್ನಡದಲ್ಲಿ 135 ಮತ್ತು ಉಡುಪಿ ಜಿಲ್ಲೆಯಲ್ಲಿ 109 ಮಂದಿ ಅತಿಥಿ ಶಿಕ್ಷಕರನ್ನು ನೇಮಿಸುವಂತೆ ಆದೇಶ ಹೊರಡಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 109 ಮಂದಿ ಶಿಕ್ಷಕರನ್ನು ನೇಮಿಸುವಂತೆ ಉಡುಪಿ ಶಿಕ್ಷಣ ಇಲಾಖೆ ಬೇಡಿಕೆ ಇರಿಸಿತ್ತು. ಈಗ 86 ಮಂದಿಯನ್ನು ನೇಮಿಸುವಂತೆ ಆದೇಶಿಸಲಾಗಿದೆ. ಬಾಕಿ ಉಳಿದ ಅತಿಥಿ ಶಿಕ್ಷಕರ ನೇಮಕವೂ ಸದ್ಯದಲ್ಲಿಯೇ ನಡೆಯುವ ಸಾಧ್ಯತೆಗಳಿವೆ. ಇವರ ವೇತನವನ್ನು ಫೆಬ್ರವರಿ ತಿಂಗಳಿನಿಂದಲೇ ಪಾವತಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next