ಪಣಂಬೂರು: ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾದ ನವಮಂಗಳೂರು ಬಂದರಿನ ಅಭಿವೃದ್ಧಿಗೆ ಸರ್ವ ರೀತಿಯ ಬೆಂಬಲ ನೀಡಲಾಗುವುದು ಎಂದು ಕೇಂದ್ರ ನೌಕಾಯಾನ, ರಸಗೊಬ್ಬರ ರಾಜ್ಯ ಸಚಿವ ಮನ್ಸುಖ್ ಮಾಂಡವೀಯಾ ಹೇಳಿದರು.
ಬಂದರಿನ ಅಧಿಕಾರಿಗಳು, ಬಂದರು ಮೂಲಕ ವ್ಯವಹಾರ ನಡೆಸುತ್ತಿರುವ ಪ್ರಮುಖ ಉದ್ಯಮ ಪ್ರತಿನಿಧಿಗಳು, ಸ್ಟೀವಡೋರಿಂಗ್ ಸದಸ್ಯರು, ಏಜೆಂಟರು, ಸರಕು ಸಾಗಣೆದಾರರು ಮತ್ತು ಪ್ರಮುಖ ಸಂಬಂಧಿತ ಸರಕಾರಿ ಸಂಸ್ಥೆಗಳಾದ ಕಸ್ಟಮ್ಸ್, ವಲಸೆ ಇಲಾಖೆಗಳ ಅಧಿಕಾರಿಗಳ ಜತೆಗೆ ಶುಕ್ರವಾರ ನವಮಂಗಳೂರು ಬಂದರಿನಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬಂದರು ಮೂಲಕ ವ್ಯಾಪಾರ ವಹಿವಾಟು ಉತ್ತೇಜಿಸಲು ಕೇಂದ್ರ ಸರಕಾರ ವಿಶೇಷ ಯೋಜನೆ ಹಾಕಿ ಕೊಂಡಿದೆ. ಆಮದು ಮತ್ತು ರಫ್ತು ವಹಿವಾಟುದಾರರಿಗೆ ಸಮುದ್ರ ಮೂಲಕ ವ್ಯವಹಾರದಿಂದ ಕಡಿಮೆ ವೆಚ್ಚ, ಸುರಕ್ಷತೆ ಮತ್ತಿತರ ಅನೇಕ ಪ್ರಯೋಜನಗಳಿವೆ. ಹೀಗಾಗಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದವರು ಕರೆ ನೀಡಿದರು.
ಎನ್‌ಎಂಪಿಟಿಯ ಪಾರದರ್ಶಕ ಕಾರ್ಯಚಟುವಟಿಕೆ, ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆ, ಸಿಎಸ್‌ಆರ್ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಮಳೆಗಾಲದಲ್ಲಿ ಹವಾಮಾನ ವೈಪರೀತ್ಯ ಸಂದರ್ಭ ಮೀನುಗಾರರಿಗೆ ಆಶ್ರಯ ಕಲ್ಪಿಸಿದ ಬಂದರಿನ ಸಾಮಾಜಿಕ ಕಳಕಳಿಯನ್ನು ಸಚಿವರು ಶ್ಲಾಘಿಸಿದರು.
ಬಂದರಿನ ಚೇರ್‌ಮನ್ ಎ.ವಿ. ರಮಣ ಅವರು ಬಂದರಿನಲ್ಲಿ ವಹಿವಾಟು ಹೆಚ್ಚಳಕ್ಕೆ ಕೈಗೊಂಡ ನೂತನ ಯೋಜನೆಗಳ ಕುರಿತು ಸಚಿವರಿಗೆ ವಿವರಿಸಿದರು. ಸಂಸದ ನಳಿನ್ ಕುಮಾರ್ ಕಟೀಲು, ಬಂದರಿನ ಹಿರಿಯ ಅಧಿ ಕಾರಿಗಳು, ಕೇಂದ್ರ ಸರಕಾರ ಸ್ವಾಮ್ಯದ ವಿವಿಧ ಸಂಸ್ಥೆಗಳ ಅಧಿ ಕಾರಿಗಳು, ವ್ಯಾಪಾರಿಗಳು ಉಪಸ್ಥಿತರಿದ್ದರು.