Advertisement

ಸರ್ವಾಂಗೀಣ ಪ್ರದರ್ಶನ: ಕಾರ್ತಿಕ್‌ ಪ್ರಶಂಸೆ

02:18 AM Apr 09, 2019 | sudhir |

ಜೈಪುರ: ಆತಿಥೇಯ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ತನ್ನ ತಂಡ ಸರ್ವಾಂಗೀಣ ಪ್ರದರ್ಶನ ತೋರಿ ಗೆದ್ದು ಬಂದಿತು ಎಂಬುದಾಗಿ ಕೋಲ್ಕತಾ ನೈಟ್‌ರೈಡರ್ ನಾಯಕ ದಿನೇಶ್‌ ಕಾರ್ತಿಕ್‌ ಹೇಳಿದ್ದಾರೆ.

Advertisement

“ಇದೊಂದು ಪರಿಪೂರ್ಣ ನಿರ್ವ ಹಣೆಯಾಗಿತ್ತು. ಬೌಲರ್‌ಗಳು ಅಮೋಘ ಬೌಲಿಂಗ್‌ ನಡೆಸಿದರು, ಬ್ಯಾಟ್ಸ್‌ಮನ್‌ಗಳಿಂದಲೂ ಉತ್ತಮ ಪ್ರದರ್ಶನ ಹೊರಹೊಮ್ಮಿತು. ಒಟ್ಟಾರೆಯಾಗಿ ಇದೊಂದು ಸರ್ವಾಂಗೀಣ ಪ್ರದರ್ಶನವಾಗಿತ್ತು’ ಎಂದು ಕಾರ್ತಿಕ್‌ ಹೇಳಿದರು.

ರಾಜಸ್ಥಾನ್‌ ಆಮೆಗತಿ ಆಟ
ರವಿವಾರ ತವರಿನ “ಸವಾಯ್‌ ಮಾನ್‌ಸಿಂಗ್‌ ಸ್ಟೇಡಿಯಂ’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ರಾಜಸ್ಥಾನ್‌ ರಾಯಲ್ಸ್‌ ಗಳಿಸಿದ್ದು 3ಕ್ಕೆ 139 ರನ್‌ ಮಾತ್ರ. ಜವಾಬಿತ್ತ ಕೆಕೆಆರ್‌, ಕ್ರಿಸ್‌ ಲಿನ್‌ (32 ಎಸೆತಗಳಿಂದ 50) ಮತ್ತು ಸುನೀಲ್‌ ನಾರಾಯಣ್‌ (25 ಎಸೆತಗಳಿಂದ 47 ರನ್‌) ಅವರ ಬಿರುಸಿನ ಆಟದಿಂದ ಕೇವಲ 13.5 ಓವರ್‌ಗಳಲ್ಲಿ 2 ವಿಕೆಟಿಗೆ 140 ರನ್‌ ಬಾರಿಸಿ ಗೆದ್ದು ಬಂದಿತು. ಇವರಿಬ್ಬರಿಂದ ಮೊದಲ ವಿಕೆಟಿಗೆ 8.3 ಓವರ್‌ಗಳಲ್ಲಿ 91 ರನ್‌ ಒಟ್ಟುಗೂಡಿತು. ಹೀಗಾಗಿ ರಾಜಸ್ಥಾನ್‌ ಮುಂದೆ ಪಂದ್ಯಕ್ಕೆ ಮರಳುವ ಯಾವ ಅವಕಾಶವೂ ಇರಲಿಲ್ಲ. ರಾಬಿನ್‌ ಉತ್ತಪ್ಪ (26) ಮತ್ತು ಶುಭಮನ್‌ ಗಿಲ್‌ (6) ಔಟಾಗದೆ ಉಳಿದರು. ಎರಡೂ ವಿಕೆಟ್‌ ಶ್ರೇಯಸ್‌ ಗೋಪಾಲ್‌ ಪಾಲಾಯಿತು. ಮೊದಲ ಪಂದ್ಯದಲ್ಲೇ 25 ರನ್ನಿಗೆ 2 ವಿಕೆಟ್‌ ಕಿತ್ತ ಇಂಗ್ಲೆಂಡಿನ ಪೇಸ್‌ ಬೌಲರ್‌ ಹ್ಯಾರಿ ಗರ್ನಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

“ಭಾರತದಲ್ಲಿ ನಿಧಾನ ಗತಿಯ ಟ್ರ್ಯಾಕ್‌ಗಳ ಸಂಖ್ಯೆ ಅಧಿಕ. ಇದಕ್ಕೆ ಕೂಡಲೇ ಹೊಂದಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ನಾವಿಂದು ಹೆಚ್ಚಿನ ಯಶಸ್ಸು ಸಾಧಿಸಿದೆವು’ ಎಂಬುದಾಗಿ ಕಾರ್ತಿಕ್‌ ಹೇಳಿದರು.

ಪಂದ್ಯಶ್ರೇಷ್ಠ ಹ್ಯಾರಿ ಗರ್ನಿ ಕುರಿತು ಮಾತಾಡಿದ ಕಾರ್ತಿಕ್‌, “ಅವರೋರ್ವ ನಿಜವಾದ ವೃತ್ತಿಪರ ಕ್ರಿಕೆಟಿಗ. ವಿಶ್ವದ ಬಹುತೇಕ ಎಲ್ಲ ಲೀಗ್‌ಗಳಲ್ಲೂ ಆಡಿದ್ದಾರೆ. ಇದೀಗ ಐಪಿಎಲ್‌ ಸರದಿ…’ ಎಂದರು.

Advertisement

ಸಂಕ್ಷಿಪ್ತ ಸ್ಕೋರ್‌
ರಾಜಸ್ಥಾನ್‌-3 ವಿಕೆಟಿಗೆ 139. ಕೆಕೆಆರ್‌: 13.5 ಓವರ್‌ಗಳಲ್ಲಿ 2 ವಿಕೆಟಿಗೆ 140 (ಲಿನ್‌ 50, ನಾರಾಯಣ್‌ 47, ಉತ್ತಪ್ಪ ಔಟಾ ಗದೆ 26, ಗೋಪಾಲ್‌ 35ಕ್ಕೆ 2). ಪಂದ್ಯಶ್ರೇಷ್ಠ: ಹ್ಯಾರಿ ಗರ್ನಿ.

ರನ್‌ ಕೊರತೆ ಕಾಡಿತು: ರಹಾನೆ
“ಇದು ನಿಧಾನ ಗತಿಯ ಪಿಚ್‌ ಆಗಿತ್ತಾದರೂ 150-160 ರನ್ನಿಗೇನೂ ಕೊರತೆ ಇರಲಿಲ್ಲ. ಆದರೆ ನಮಗೆ ಈ ಗುರಿ ಸಾಧ್ಯವಾಗಲಿಲ್ಲ. ನಮ್ಮ ಬೌಲಿಂಗ್‌ ಕೂಡ ಯೋಜನೆಗೆ ತಕ್ಕಂತಿರಲಿಲ್ಲ. ಈ ಪಂದ್ಯದಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ. ತಪ್ಪುಗಳಿಂದ ನಾವು ಪಾಠ ಕಲಿಯುವುದು ಅತ್ಯಗತ್ಯ’ ಎಂಬುದಾಗಿ ಪರಾಜಿತ ರಾಜಸ್ಥಾನ್‌ ತಂಡದ ನಾಯಕ ಅಜಿಂಕ್ಯ ರಹಾನೆ ಹೇಳಿದರು.

ಗರ್ನಿ ಸ್ಮರಣೀಯ ಪದಾರ್ಪಣೆ
ಇದು ತನ್ನ ಬೌಲಿಂಗಿಗೆ ಹೇಳಿಸಿದಂಥ ಪಿಚ್‌ ಆಗಿತ್ತು ಎಂಬುದು ಹ್ಯಾರಿ ಗರ್ನಿ ಪ್ರತಿಕ್ರಿಯೆ. “ನನ್ನ ಕಟರ್‌ ಬೌಲಿಂಗ್‌ ಆಯ್ಕೆಗೆ ಈ ಪಿಚ್‌ ಅತ್ಯಂತ ಪ್ರಶಸ್ತವಾಗಿತ್ತು. ಆದರೆ ನನಗೆ ಯಾರ್ಕರ್‌ ಎಸೆತಗಳ ಮೇಲೆ ನಂಬಿಕೆ ಜಾಸ್ತಿ. ಇದರಿಂದ ಎದುರಾಳಿ ಆಟಗಾರರು ಕಷ್ಟಕ್ಕೆ ಒಳಗಾಗುತ್ತಾರೆ. ಆದರೆ ಈ ಪಂದ್ಯದಲ್ಲಿ ನಾನು ಯಾರ್ಕರ್‌ಗಳನ್ನು ಹೆಚ್ಚು ಬಳಸಲಿಲ್ಲ…’ ಎಂದರು.

ಕಾರಿಗೆ ಅಪ್ಪಳಿಸಿದ ಲಿನ್‌ ಸಿಕ್ಸರ್‌!
ರವಿವಾರ ರಾತ್ರಿ ಜೈಪುರದಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕೆಕೆಆರ್‌ನ ಆರಂಭಕಾರ ಕ್ರಿಸ್‌ ಲಿನ್‌ ಭಾರೀ ಜೋಶ್‌ನಲ್ಲಿದ್ದರು. ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗರೆಯುತ್ತ ಆತಿಥೇಯ ಬೌಲರ್‌ಗಳ ಮೇಲೆರಗಿದ್ದರು. ಈ ಸಂದರ್ಭದಲ್ಲಿ ಇವರು ಸಿಕ್ಸರ್‌ ಒಂದನ್ನು ಸಿಡಿಸಿದಾಗ ಚೆಂಡು ನೇರವಾಗಿ ಪ್ರದರ್ಶನ ಕಾರಿನ ಗಾಜಿಗೆ ಹೋಗಿ ಅಪ್ಪಳಿಸಿತು. ಆದರೂ ಕಾರಿನ ಗಾಜು ಪುಡಿಯಾಗಲಿಲ್ಲ. ಹೀಗಾಗಿ ನಷ್ಟ ತಪ್ಪಿತು!

ಈ ಘಟನೆ ಸಂಭವಿಸಿದ್ದು 11ನೇ ಓವರ್‌ನಲ್ಲಿ. ಆಗ ಶ್ರೇಯಸ್‌ ಗೋಪಾಲ್‌ ಬೌಲಿಂಗ್‌ ನಡೆಸುತ್ತಿದ್ದರು. ಈ ಓವರಿನ 2ನೇ ಎಸೆತವನ್ನು ಲಿನ್‌ ಸಿಕ್ಸರ್‌ಗೆ ಅಟ್ಟಿದಾಗ ಕಾರಿಗೆ ಹೋಗಿ ಬಡಿದಿತ್ತು. “ಕ್ರಿಸ್‌ ಲಿನ್‌ ಫೈಂಡ್ಸ್‌ ದ ಕಾರ್‌ ಪಾರ್ಕ್‌’ ಎಂದು ಐಪಿಎಲ್‌ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಈ ಘಟನೆಯನ್ನು ಪೋಸ್ಟ್‌ ಮಾಡಿತ್ತು.

ಈ ಪಂದ್ಯದಲ್ಲಿ ಕ್ರಿಸ್‌ ಲಿನ್‌ ಕೊಡುಗೆ ಭರ್ತಿ 50 ರನ್‌. ಆದರೆ ಇದು ಅದೃಷ್ಟದ ಆಟವಾಗಿತ್ತು. ಇನ್ನಿಂಗ್ಸಿನ 4ನೇ ಓವರಿನಲ್ಲಿ, ವೈಯಕ್ತಿಕ 13 ರನ್‌ ಗಳಿಸಿದ ವೇಳೆ ಲಿನ್‌ಗೆ ಜೀವದಾನವೊಂದು ಲಭಿಸಿತ್ತು.

“ನನ್ನದು ಮತ್ತೆ ಅದೃಷ್ಟದ ಸವಾರಿಯಾಗಿದೆ. ಪವರ್‌ ಪ್ಲೇ ವೇಳೆ ನಾವು ಬಿರುಸಿನ ಬ್ಯಾಟಿಂಗ್‌ ನಡೆಸುವುದು ಅನಿವಾರ್ಯವಾಗಿತ್ತು. ಸುನೀಲ್‌ ನಾರಾಯಣ್‌ ಒಳ್ಳೆಯ ಜೋಶ್‌ನಲ್ಲಿದ್ದರು. ನಿಜಕ್ಕಾದರೆ ನಾನು ನಿಧಾನ ಗತಿಯ ಆರಂಭಕಾರ. ಸುದೀರ್ಘ‌ ಪಂದ್ಯಾವಳಿಯಾದ್ದರಿಂದ ಪ್ರತಿಯೊಂದು ಗೆಲುವು ಕೂಡ ನಮಗೆ ಮಹತ್ವದ್ದಾಗುತ್ತದೆ’ ಎಂದು ಕ್ರಿಸ್‌ ಲಿನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next