ಮೈಸೂರು: ರಸ್ತೆಗುಂಡಿ ದುರಸ್ತಿಗೆ ಹಣದ ಕೊರತೆಯಿಲ್ಲ. ಮಳೆ ಅಡ್ಡಿಯಷ್ಟೇ ಎಂದು ಮೇಯರ್ ಸುನಂದಾ ಫಾಲನೇತ್ರ ಹೇಳಿದರು.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕಾಲಿಕ ಮಳೆಯಿಂದಾಗಿ ಅನೇಕ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಮಳೆ ಸಮಸ್ಯೆಗಳಿಗೆ ಸ್ಪಂದಿಸಲು 24 ಗಂಟೆಯೂ ಸಿದ್ಧವಾಗಿರಲು ಅಭಯ್ ತಂಡ ಹಾಗೂ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಹಣದ ಕೊರತೆಯಿಲ್ಲ: ಪ್ರತಿ ವಾರ್ಡಿನ ರಸ್ತೆ ಗುಂಡಿ ಮುಚ್ಚಲು 10 ಲಕ್ಷ ರೂ. ಬಿಡುಗಡೆಯಾಗಿದ್ದು, ಈಗಾಗಲೇ ಕೆಲವೆಡೆ ಕಾಮಗಾರಿ ನಡೆಯುತ್ತಿದೆ. ಇನ್ನೂ ಹಲವೆಡೆ ಆರಂಭವಾಗಬೇಕಿದೆ. ಪ್ರಮುಖ ರಸ್ತೆಗಳ ದುರಸ್ತಿಗೆ ಕಾಮಗಾರಿ ಆರಂಭಿಸಲಿದೆ. ನಗರದ ಅಭಿವೃದ್ಧಿಗೆ ಯಾವುದೇ ಹಣದ ಕೊರತೆಯಿಲ್ಲ. ಎಸ್‌ಎಫ್ಸಿ, ನಗರೋತ್ಥಾನದ ಅನುದಾನ ಬಂದಿದೆ. ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಸಹ ಬಂದಿದೆ. ಇವೆಲ್ಲವೂ ಚಾಲನೆ ಸಿಗಬೇಕಾದ ವೇಳೆಗೆ ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗಿಲ್ಲ ಎಂದು ವಿವರಿಸಿದರು.
ಸಮಿತಿಯೇ ಅಂತಿಮ ನಿರ್ಣಯ: ವಾಣಿವಿಲಾಸ ಮಾರುಕಟ್ಟೆ ಕಟ್ಟಡ ದುರಸ್ತಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ಹಿಂಭಾಗದಲ್ಲಿ ಕೆಲಸ ಆರಂಭಿಸಿದ್ದೇವೆ. ಉಳಿದ ಕಟ್ಟಡಗಳ ಸಂಬಂಧ ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿ ಅಂತಿಮ ನಿರ್ಣಯ ಕೈಗೊಳ್ಳಬೇಕಿದೆ. ನಗರದಲ್ಲಿ ಒಳಚರಂಡಿ, ಮಳೆ ನೀರು ಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಇದಕ್ಕಾಗಿ ಪ್ರತಿ ತಿಂಗಳು ಪಾಲಿಕೆ ಸದಸ್ಯರಿಗೆ ಒಂದು ಲಕ್ಷ ರೂ. ಬಿಡುಗಡೆಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಚರಂಡಿಯಲ್ಲಿ ಹೂಳೆತ್ತಲು 2 ಮಿನಿ ಎಕ್ಸ್ಲ ವೇಟರ್ ಒಂದು ವಾರದಿಂದ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಅಗತ್ಯವಿರುವ 12 ಜೆಸಿಬಿ ಯಂತ್ರ, 7 ಟಿಪ್ಪರ್, 65 ಆಟೋ ಕೆಲಸ ನಿರ್ವಹಿಸುತ್ತಿದ್ದು, ಇನ್ನೂ 65 ಆಟೋ, 12 ಕಾಂಪ್ಯಾಕ್ಟರ್‌ಗಳು, 5 ಜೆಸಿಬಿ ಯಂತ್ರಗಳು 23ರಿಂದ ಹೊಸದಾಗಿ ಕೆಲಸ ಆರಂಭಿಸಲಿವೆ. ಜತೆಗೆ ಜೂನ್‌ಗೆ ಪ್ರಾರಂಭಗೊಳ್ಳುವ ಮಳೆಗಾಲಕ್ಕೂ ಈಗಲೇ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್, ಎಂ.ಯು.ಸುಬ್ಬಯ್ಯ ಗೋಷ್ಠಿಯಲ್ಲಿದ್ದರು.
ಪ್ರತಾಪ್ ಸಿಂಹ ಓರ್ವ ದುರಂಹಕಾರಿ ಸಂಸದ : ಸಂಸದ ಪ್ರತಾಪ್‌ಸಿಂಹ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಗರಪಾಲಿಕೆ ಜೆಡಿಎಸ್ ಸದಸ್ಯ ಎಂ.ಡಿ.ನಾಗರಾಜ್, ಪ್ರತಾಪ್‌ಸಿಂಹ ಓರ್ವ ದುರಂಹಕಾರಿ ಎಂದು ಹೇಳಿದರು. ಈ ಸಂಬಂಧ ನಗರಪಾಲಿಕೆ ಸದಸ್ಯೆ ಶೋಭಾ ಮೋಹನ್ ಅವರ ಕಚೇರಿಯಲ್ಲಿ ಸಭೆ ನಡೆಸಿದ ಜಾ.ದಳ ಸದಸ್ಯರು, ಪ್ರತಾಪಸಿಂಹ ಅವರ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಿದರು. ಪ್ರತಾಪಸಿಂಹ ಸಿಂಹ ಅವರು ಮೈಸೂರಿಗೆ ಎಂಪಿ ಆಗಿದ್ದಾರೆ. ಅವರಿಗೂ ಮುಂಚೆ ರಾಜವಂಶಸ್ಥರು ಈ ನಗರದ ಎಂಪಿ ಆಗಿದ್ದರೂ ಅನಂತರ ಹಲವಾರು ಗಣ್ಯರು ಸಂಸತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಯಾರೂ ಕೂಡ ಪ್ರತಾಪಸಿಂಹ ಅವರ ರೀತಿ ಉದ್ಧಟತನದಿಂದ ಮಾತನಾಡಿಲ್ಲ ಎಂದು ಕಿಡಿಕಾರಿದರು.