ದೇವನಹಳ್ಳಿ: ಜಿಲ್ಲೆಯ ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವುದರಿಂದ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಚುನಾವಣಾ ಪ್ರಕ್ರಿಯೆ ಮುಗಿಯುವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಜಿಲಾಧಿಕಾರಿ ಎನ್. ರವೀಂದ್ರ ತಿಳಿಸಿದರು. ತಾಲೂಕಿನ ಚಪ್ಪರದ ಕಲ್ಲು ಸರ್ಕಲ್ ಬಳಿ ಇರುವ ಜಿಲ್ಲಾ ಸಂಕೀರ್ಣದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧಿಸಿದಂತೆ ರಾಜಕೀಯ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.
ಅ.21ಕ್ಕೆ ಮತದಾನ: ಸೆ.23ಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಸೆ.30 ನಾಮ ಪತ್ರ ಸ್ವೀಕರಿಸಲು ಕೊನೆಯ ದಿನವಾಗಿದೆ. ಅ.1 ರಂದು ನಾಮ ಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಅ.3 ಕೊನೆಯ ದಿನವಾಗಿದ್ದು, ಅ.21 ರಂದು ಮತದಾನ ನಡೆಯಲಿದೆ. ಅ.24ಕ್ಕೆ ಮತ ಎಣಿಕೆ ನಡೆಯಲಿದೆ. ಬೆಂ.ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿದೇಶಕ ಹನುಮಂತ ರಾಯಪ್ಪ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಯಾಗಿ ಹೊಸಕೋಟೆ ತಾಲೂಕಿನ ತಹಶೀಲ್ದಾರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
286 ಮತಗಟ್ಟೆ ಸ್ಥಾಪನೆ: ಚುನಾವಣಾಧಿಕಾರಿ ಅವರ ಕೇಂದ್ರ ಕಚೇರಿ ಕಾರ್ಯ ಸ್ಥಳ, ನಾಮ ಪತ್ರ ಇತ್ಯಾದಿ ಪ್ರಕ್ರಿಯೆಗಳು ಹೊಸಕೋಟೆ ಮಿನಿ ವಿಧಾನ ಸೌಧ ಕಟ್ಟಡ , ತಾಲೂಕು ಕಚೇರಿ ಆಗಿರುತ್ತದೆ. ಹೊಸಕೋಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 1,07,766 ಪುರುಷರು, 1,04,954 ಮಹಿಳೆಯರು, 26 ಇತರರು ಸೇರಿ ಒಟ್ಟು 2,12,748 ,ಮತದಾರರು ಇದ್ದಾರೆ. ಉಪ ಚುನಾವಣೆಯಲ್ಲಿ 286 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಗ್ರಾಮಾಂತರ ವ್ಯಾಪ್ತಿಯಲ್ಲಿ 237, ನಗರ ವ್ಯಾಪ್ತಿಯಲ್ಲಿ 49 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾನಕ್ಕೆ ಬಿ ಇಎಲ್ ಸಂಸ್ಥೆಯು ಎಮ್ 03 ಮಾದರಿಯ ಇವಿಎಮ್‌ಗಳನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಟ್ಟು ನಿಟ್ಟಿನ ಕ್ರಮ: ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಬೂತ್ ಮಟ್ಟದ ಪದಾಧಿಕಾರಿಗಳ ಪಟ್ಟಿಗಳನ್ನು ನೀಡಬೇಕು. ವಾಹನಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕು. ಹೊಸಕೋಟೆ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯ ವಾಣಿ ಕೇಂದ್ರಗಳನ್ನು ತೆರೆಯಲಾಗುವುದು. ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರ ವಿವಿಧ ಕಾರ್ಯಕ್ರಮಗಳ ಬ್ಯಾಂನರ್, ಪೋಸ್ಟರ್‌ಗಳನ್ನು ತೆಗೆಯಬೇಕು. ಯಾವುದೇ ಟೆಂಡರ್ ಪ್ರಕ್ರಿಯೆ ಮಾಡಬಾರದು.
ಪ್ರವಾಸಿ ಮಂದಿರಕ್ಕೆ ರಾಜಕೀಯ ವ್ಯಕ್ತಿಗಳು ಬರದಂತೆ ನಿಷೇಧ ಮಾಡಲಾಗುತ್ತಿದೆ. ಜಿಲ್ಲೆಯ ಅಧಿಕಾರಿಗಳು ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ ಎಂದು ಸೂಚನೆ ನೀಡಿದರು. ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಅಭ್ಯರ್ಥಿಯ ಚುನಾವಣಾ ವೆಚ್ಚವನ್ನು 28 ಲಕ್ಷ ರೂ.ಗಳಿಗೆ ಸೀಮಿತ ಗೊಳಿಸಲಾಗಿದೆ. ಸಾರ್ವತ್ರಿಕ ಚುನಾವಣೆ ನೀತಿಯಂತೆ ಉಪ ಚುನಾವಣೆಗೂ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿ ಕಾರ್ಯೋನ್ಮುಖ ಗೊಳಿಸಲಾಗುವುದು ಎಂದು ಹೇಳಿದರು.
ಎಸ್ಪಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಹೊಸಕೋಟೆ ವಿಧಾನ ಸಭಾ ಕ್ಷೇತ್ರದ 5 ಕಡೆ ಚೆಕ್‌ಪೋಸ್ಟ್ ನಿರ್ಮಿಸಲಾಗುತ್ತದೆ. 491 ಪರವಾನಗಿ ಗನ್‌ಗಳನ್ನು ಆಯಾ ಪೋಲೀಸ್ ಠಾಣೆಗಳಲ್ಲಿ ಠೇವಣಿ ಇರಿಸಲಾಗಿದೆ. 469 ರೌಡಿ ಶೀಟರ್‌ಗಳನ್ನು ಗುರುತಿ ಅವರ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ ನಾಯ್ಕ , ಉಪ ವಿಭಾಗಾಧಿಕಾರಿ ಮಂಜುನಾಥ್, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
* ಒಟ್ಟು ಮತದಾರರು 2,12,748
* ಪುರುಷರು 1,07,766
* ಮಹಿಳೆಯರು 1,04,954
* ಇತರರು 26