ಹುಬ್ಬಳ್ಳಿ: ನಾಗರಿಕರು ಕೈಜೋಡಿಸಿದರೆ ನಗರದ ಜನರು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ ಹೇಳಿದರು.
ಇಂದಿರಾ ಗಾಜಿನಮನೆಯಲ್ಲಿ ರವಿವಾರ ಸಿಟಿಜನ್ಸ್ ಲೀಡ್ ಹುಬ್ಬಳ್ಳಿ-ಧಾರವಾಡ ಆಯೋಜಿಸಿದ್ದ ಎಡಬ್ಲ್ಯೂಇ-ಎಚ್‌ಡಿ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಸಮಸ್ಯೆಗಳನ್ನು ಸರಕಾರವೇ ಬಗೆಹರಿಸಬೇಕೆಂದು ನಿರೀಕ್ಷಿಸುವುದುಸರಿಯಲ್ಲ. ನಾಗರಿಕರು ಕೈಜೋಡಿಸಿದರೆ ಎಂಥದೇ ಸಮಸ್ಯೆಗಳಿದ್ದರೂ ಪರಿಹರಿಸಬಹುದಾಗಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದು ಮನವರಿಕೆಯಾಗಬೇಕು ಎಂದರು.
ಅರಣ್ಯ ಇಲಾಖೆ ಅಧಿಕಾರಿ ಮಹೇಶಕುಮಾರ ಮಾತನಾಡಿ, ಸಸಿಗಳ ರಕ್ಷಣೆ ಕೇವಲ ಅರಣ್ಯ ಇಲಾಖೆ ಕೆಲಸವಲ್ಲ, ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು. ಎಲ್ಲ ಗಿಡ-ಮರಗಳನ್ನು ಸಂರಕ್ಷಣೆ ಮಾಡುವುದು ಅರಣ್ಯ ಸಿಬ್ಬಂದಿಯಿಂದ ಸಾಧ್ಯವಿಲ್ಲ. ಮರಗಳನ್ನು ಕಡಿಯದಂತೆ ನೋಡಿಕೊಳ್ಳಬೇಕು. ಹೆಚ್ಚೆಚ್ಚು ಜನರು ನಗರವನ್ನು ಹಸಿರುಗೊಳಿಸುವ ಕಾರ್ಯದಲ್ಲಿ ಕೈಜೋಡಿಸುವುದು ಅವಶ್ಯಕ ಎಂದು ಹೇಳಿದರು.
ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ ಪವಾರ ಮಾತನಾಡಿ, ಹುಬ್ಬಳ್ಳಿ ನಗರವನ್ನು ಮಾದರಿ ದ್ವಿತೀಯ ಸ್ತರದ ನಗರವನ್ನಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಮರ್ಪಕವಾಗಿ ಉಸಿರಾಡಲು, ವಾತಾವರಣ ಉತ್ತಮವಾಗಿರಲು ಪ್ರತಿಯೊಬ್ಬ ವ್ಯಕ್ತಿಗೆ 40 ಗಿಡಗಳಾದರೂ ಇರಬೇಕು. ಆದರೆ ಸದ್ಯ ಅವಳಿ ನಗರದಲ್ಲಿ ಪ್ರತಿ ವ್ಯಕ್ತಿಗೆ 28 ಗಿಡಗಳಿವೆ. ವರ್ಷಕ್ಕೆ 2 ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ಅತ್ಯವಶ್ಯಕ ಎಂದರು. ಅವಳಿನಗರದಲ್ಲಿ ಸಹಸ್ರಾರು ಸಸಿಗಳನ್ನು ನೆಟ್ಟು ಪೋಷಿಸುತ್ತಿರುವ ಡಾ| ಮಹಾಂತೇಶ ತಪಶೆಟ್ಟಿ ಅವರಿಗೆ ಜೀವನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ವಿಜೇತರು: ಫೆಸ್ಟ್ ನಿಮಿತ್ತ ಇಕೋ ಮಾಡೆಲ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಯಿತು. ಕೆಎಲ್‌ಇ ಎಂ.ಆರ್. ಸಾಖರೆ ಸಿಬಿಎಸ್‌ಇ ಶಾಲೆಯ ಪ್ರಣಿತಾ ಹಾಗೂ ಗೌರಿ ಪ್ರಥಮ; ಬೆಂಗೇರಿ ರೋಟರಿ ಪ್ರಾಥಮಿಕ ಶಾಲೆಯ ರತನ್ ಗೌಡ ಹಾಗೂ ಪ್ರಥಮ ಅವಾಜಿ ದ್ವಿತೀಯ; ಚಿನ್ಮಯ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಭರತ್ ನಾಯ್ಕ ಹಾಗೂ ಸುಜನ್‌ರಾಜ್ ತೃತೀಯ ಸ್ಥಾನ ಪಡೆದರು. ವಾಸುಕಿ ಜಿ.ಎಸ್., ಜಯಶ್ರೀ ದೇಶಪಾಂಡೆ, ತಿಲಕ್ ವಿಕಂಶಿ, ಪಿ.ವಿ. ಹಿರೇಮಠ, ಡಾ| ಬಬಿತಾ ಆರ್., ಡಾ| ಸತೀಶ ಇರಕಲ್, ಡಾ| ಚೇತನ್, ಪ್ರಕಾಶ ಕರಿಗೌಡರ ಇದ್ದರು.