ಕನಕಪುರ: ಕೋವಿಡ್‌ನಿಂದ ಎರಡು ವರ್ಷದ ಬಳಿಕ ತಾಲೂಕಿನಲ್ಲಿ ಜ.11ರಿಂದ 15ರವರೆಗೂ ಕನಕೋತ್ಸವ ಆರಂಭವಾಗಲಿದ್ದು, ಕನಕೋತ್ಸವದಲ್ಲಿ ಸಾಧಕರಿಗೆ ಪುರಸ್ಕಾರ, ಗ್ರಾಮದೇವತೆಗಳ ಉತ್ಸವ, ಜಾನಪದ ಸಾಂಸ್ಕೃತಿಕ ಸೌರಭ, ಕ್ರೀಡಾ ಸ್ಪರ್ಧೆ, ಯೋಗ, ಪ್ರತಿಭಾ ಪುರಸ್ಕಾರ, ನೌಕರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್‌ನಿಂದ ಮುಂದೂಡಿದ ಕನಕೋತ್ಸವ ಕಾರ್ಯಕ್ರಮ ಆರಂಭವಾಗಲಿದೆ. ಈಗಾಗಲೇ ಕಳೆದೆರಡು ತಿಂಗಳಿಂದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಾಂಸ್ಕೃತಿಕ ಕ್ರೀಡೆ ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸುವಂತಹ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಡೆದಿವೆ. ಅಂತಿಮವಾಗಿ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಂದರು.
ಗ್ರಾಮದೇವತೆ ಉತ್ಸವ ಮೆರವಣಿಗೆ: ಐದು ದಿನಗಳ ಕಾಲ ನಡೆಯುವ ಕಾರ್ಯಕ್ರಮವನ್ನು ದೇಗುಲ ಮಠ, ಮರಳೆ ಗವಿಮಠ, ಶಿವಗಿರಿ ಕ್ಷೇತ್ರದ ಸ್ವಾಮೀಜಿಗಳು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜನವರಿ 11ರಂದು ಬೆಳಗ್ಗೆ 5ಗಂಟೆಗೆ ಕಾರ್ಯಕ್ರಮ ಪ್ರಾರಂಭವಾ ಗಲಿದೆ. ಯೋಗಾಸನದ ಜೊತೆಗೆ ಮೂರು ದಿನಗಳ ಕಾಲ ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಿಂದ ವಿಜ್ಞಾನ ಮೇಳ ಆಯೋಜಿಸಲಾಗಿದೆ. ಮೊದಲನೇ ದಿನ ಮಹಿಳೆಯರಿಗೆ ಉತ್ತೇಜನ ನೀಡಲು ರಂಗೋಲಿ ಸ್ಪರ್ಧೆ, ವಾಯ್ಸ್ ಆಫ್ ಕನಕಕೋತ್ಸವ, 180ಕ್ಕೂ ಹೆಚ್ಚು ಗ್ರಾಮದೇವತೆಗಳು ಮತ್ತು ಕಲಾತಂಡಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಅದೇ ದಿನ ಸಂಜೆ ಯುವಕರಿಗೆ ವೇಷಭೂಷಣ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಲಾವಿದರಿಂದ ರಸಸಂಜೆ ಕಾರ್ಯಕ್ರಮ: ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ನೇತೃತ್ವದಲ್ಲಿ ಕಾಂತಾರಾ ಸಿನಿಮಾದ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಜ.15ರಂದು ಭಾನುವಾರ ತಾಲೂಕಿನಿಂದ ಬೇರೆಡೆಗೆ ವಲಸೆ ಹೋಗಿರುವ 15ರಿಂದ 20 ಸಾವಿರ ಜನರಿಗೆ ಸಾಧಕರ ಸಮಾವೇಶ ನಡೆಯಲಿದ್ದು, ಸಮಾರೋಪ ಸಮಾರಂಭದಲ್ಲಿ ಹಿರಿಯ ನಟ ಶಿವರಾಜ್‌ಕುಮಾರ್, ನವೀನ್ ಸಜ್ಜು, ವಾಸುಕಿ ವೈಭವ ತಂಡ ನಡೆಸಿ ಕೊಡಲಿದೆ. ಕಾರ್ಯಕ್ರಮದ ಮಧ್ಯೆ ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಶಟಲ್ ಬ್ಯಾಡ್ಮಿಂಟನ್, ಟೆನ್ನಿಸ್ ಮತ್ತು ಕುಸ್ತಿ ಫೈನಲ್ ಪಂದ್ಯಾವಳಿ ನಡೆಯಲಿದೆ ಎಂದು ಹೇಳಿದರು.
ಕನಕೋತ್ಸವ ಯಶಸ್ವಿಗೊಳಿಸಬೇಕು: ಕೋವಿಡ್ ಸಂದರ್ಭದಲ್ಲಿ ಮತ್ತು ಮೇಕೆದಾಟು ಹೋರಾಟದ ಸಂದರ್ಭದಲ್ಲಿ ಸಹಕಾರ ಕೊಟ್ಟ ಎಲ್ಲರನ್ನು ಗೌರವಿಸಲಾಗುವುದು. ತಾಲೂಕುಮಟ್ಟದ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ 34 ಸಾವಿರ ಸ್ಪರ್ಧಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕನಕೋತ್ಸವ ಯಶಸ್ವಿಗೊಳಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ, ನಗರಸಭೆ ಅಧ್ಯಕ್ಷ ಕೆ.ಟಿ.ಕಿರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ದೇವ್, ದಿಲೀಪ್, ರಾಯಸಂದ್ರ ರವಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ್, ರಾಜೇಂದ್ರ, ಏಳಗಳ್ಳಿ ರವಿ, ಯೂಥ್ ಕಾಂಗ್ರೆಸ್ ಅನಿಲ್ ಕುಮಾರ್, ಭೂಹಳ್ಳಿ ಉಮೇಶ್ ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಎರಡನೇ ದಿನ ಮ್ಯಾರಥಾನ್ ಓಟ, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ರಂಗಗೀತೆಗಳು ಮತ್ತು ಜಾನಪದ ಅಥವಾ ದೇಶಭಕ್ತಿ ಗೀತೆಗಳ ಸಮೂಹ ನೃತ್ಯ ಸ್ಪರ್ಧೆ, ಮೂರನೇ ದಿನ ಕಳೆದ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ 60ಕ್ಕಿಂತ ಹೆಚ್ಚು ಅಂಕ ಪಡೆದ 19 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ದೇಹದಾಡ್ಯ ಸ್ಪರ್ಧೆ, ಚಲನಚಿತ್ರ ಗೀತೆಗಳ ಸಮೂಹ ನೃತ್ಯ ಸ್ಪರ್ಧೆ, ನಾಲ್ಕನೇ ದಿನ ಶನಿವಾರ ತಾಲೂಕಿನ ಎಲ್ಲ ನೌಕರರ ಸಮಾವೇಶ ನಡೆಯಲಿದ್ದು, ಕೇಶ ವಿನ್ಯಾಸ ಸ್ಪರ್ಧೆ, ದಂಪತಿಗಳಿಗೆ ಭಾರತೀಯ ಸಂಪ್ರದಾಯಕ ಉಡುಗೆ-ತೊಡುಗೆಗಳ ಸ್ಪರ್ಧೆ ನಡೆಯಲಿದೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.