Advertisement
ಮುಂದಿನ ವಾರ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಲೋಕಸಭೆ ಚುನಾವಣೆ ಕುರಿತಂತೆಮೈತ್ರಿ ಮಾತುಕತೆ ನಡೆಯಲಿದ್ದು, ಬಹುತೇಕ ಈ ಮಾಸಾಂತ್ಯಕ್ಕೆ ಸೀಟು ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ. ಬಿಜೆಪಿ ಸಹ ಈಗಾಗಲೇ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಪ್ರವಾಸ ಕೈಗೊಂಡು ಕಾರ್ಯಕರ್ತರು, ಮುಖಂಡರಲ್ಲಿ ಉತ್ಸಾಹ ತುಂಬಿ ಹೋಗಿದ್ದಾರೆ. ಮೊದಲ ಹಂತದ ಲೋಕಸಭಾ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಣೆ ಸಭೆಯನ್ನೂ ನಡೆಸಿರುವ ಬಿಜೆಪಿ, ಸ್ಥಳೀಯ ಮುಖಂಡರ ಸಲಹೆ-ಸೂಚನೆ ಪಡೆದಿದೆ.ಮಾರ್ಚ್ ಮೊದಲ ವಾರದಲ್ಲಿ ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡುವ ನಿರೀಕ್ಷೆ ಇರುವುದರಿಂದ ಮೂರೂ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿವೆ. ಆಪರೇಷನ್ ಕಮಲದ ಗುಂಗಿನಲ್ಲಿದ್ದ ಬಿಜೆಪಿ, ಅಧಿವೇಶನದಲ್ಲಿ ಆಡಿಯೋ ಬಾಂಬ್ ಬಿಡುಗಡೆ ನಂತರ ಥಂಡಾ ಹೊಡೆದಿದ್ದು, ತಕ್ಷಣಕ್ಕೆ ಲೋಕಸಭೆ ಚುನಾವಣೆಯತ್ತ ಮುಖ ಮಾಡಿದೆ.
Related Articles
Advertisement
ಮಂಡ್ಯ, ಹಾಸನದ ಜತೆಗೆ ಬಿಜೆಪಿ ಗೆಲುವು ಸಾಧಿಸಿರುವ ಶಿವಮೊಗ್ಗ, ಮೈಸೂರು, ಬೆಂಗಳೂರು ಉತ್ತರವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲು ಕಾಂಗ್ರೆಸ್ ಸಹ ಮನಸ್ಸು ಮಾಡಬಹುದು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ರಾಯಚೂರು ಪೈಕಿ ಎರಡು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಿ ಎಂಬ ವಾದ ಜೆಡಿಎಸ್‌ನದ್ದಾಗಿದೆ. ಕಾಂಗ್ರೆಸ್‌ನ ಹಾಲಿ ಸಂಸದರು ಇರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಹಠ. ಹೀಗಾಗಿ, ದೇವೇಗೌಡ ಹಾಗೂ ರಾಹುಲ್‌ಗಾಂಧಿಯವರ ಜತೆಗಿನ ಮಾತುಕತೆ ನಂತರವಷ್ಟೇ ಅಂತಿಮ ಚಿತ್ರಣ ಸಿಗಲಿದೆ.
ಈ ಮಧ್ಯೆ, ಮಂಡ್ಯದಲ್ಲಿ ಸುಮಲತಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿಸುವ ಯತ್ನವೂ ಇದ್ದು, ಅದಕ್ಕೆ ಖುದ್ದು ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿಯವರ ವಿರೋಧವಿದೆ. ನಿಖೀಲ್ ಅಲ್ಲಿ ಕಣಕ್ಕಿಳಿಯಲು ಬಯಸಿದ್ದಾರೆ. ಸುಮಲತಾ ಹೆಸರು ಕೇಳಿ ಬರುತ್ತಿರುವುದರಿಂದ ಸಹಜವಾಗಿಯೇ ಜೆಡಿಎಸ್ ನಾಯಕರು ಗರಂ ಆಗಿದ್ದಾರೆ. ಹೀಗಾಗಿ, ಸೀಟು ಹಂಚಿಕೆಕಾಂಗ್ರೆಸ್-ಜೆಡಿಎಸ್ ನಡುವೆ ಕಗ್ಗಂಟಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಕ್ಷೇತ್ರವಾರು ಸಭೆಗಳ ನಿಗದಿ ಸಮ್ಮಿಶ್ರ ಸರ್ಕಾರದ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾರ್ಚ್ ಮೊದಲ ವಾರದೊಳಗೆ ಪ್ರಮುಖ ಯೋಜನೆ ಉದ್ಘಾಟನೆ, ಕ್ಷೇತ್ರಗಳಲ್ಲಿನ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮುಗಿಸಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಹಿಂದಿನ ಬಜೆಟ್‌ನಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳಿಗೂ ಹಣ ಹೊಂದಾಣಿಕೆಗೆ ಹಣಕಾಸು ಇಲಾಖೆಗೂ ನಿರ್ದೇಶನ ನೀಡಲಾಗಿದೆ. ಇದರ ಜತೆಯಲ್ಲೇ ಕಾಂಗ್ರೆಸ್-ಜೆಡಿಎಸ್ ನಾಯಕರು ಕ್ಷೇತ್ರವಾರು ಸಭೆಗಳನ್ನು ನಿಗದಿಪಡಿಸಿಕೊಂಡಿದ್ದಾರೆ. ಬಿಜೆಪಿಯೂ ಅದೇ ಕಾರ್ಯದಲ್ಲಿ ತೊಡಗಿದೆ.
ಎಸ್ ಲಕ್ಷ್ಮೀ ನಾರಾಯಣ