ದಾವಣಗೆರೆ: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಮಾ. 27 ರಿಂದ ಏ.19ರ ವರೆಗೆ ಜಿಲ್ಲೆಯಲ್ಲಿ ನಾಲ್ಕು ಪ್ರಮುಖ ಪಕ್ಷಗಳು ವಿವಿಧ ಪ್ರಚಾರ ಕಾರ್ಯಕ್ಕೆ 19.58 ಲಕ್ಷ ವೆಚ್ಚ ಮಾಡಿವೆ ಎಂದು ಚುನಾವಣಾ ವೆಚ್ಚ ಸಮಿತಿ ನೋಡಲ್ ಅಧಿಕಾರಿ ಆಂಜನೇಯ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ವೀಕ್ಷಕರು ಹಾಗೂ ಜಿಲ್ಲಾ ಚುನಾವಣಾ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಈ ಮಾಹಿತಿ ನೀಡಿದ ಅವರು, ಜೆಡಿಎಸ್ 6,00,247 ರೂಪಾಯಿ, ಕಾಂಗ್ರೆಸ್ 6,08,639 ರೂಪಾಯಿ, ಬಿಜೆಪಿ 6,57,771 ರೂಪಾಯಿ, ಜೆಡಿಯು 91,720 ರೂಪಾಯಿ ವೆಚ್ಚ ಮಾಡಿದೆ. ಈವರೆಗೆ ಚುನಾವಣಾ ವೆಚ್ಚವನ್ನು ಪಕ್ಷದ ಹೆಸರಿಗೆ ಸೇರಿಸಲಾಗಿದೆ.
ನಾಮಪತ್ರ ಸಲ್ಲಿಸಿದ ನಂತರ ಸಂಬಂಧಿಸಿದ ಅಭ್ಯರ್ಥಿಗಳ ಹೆಸರಿಗೆ ಸೇರಿಸಲಾಗುವುದು. ಪ್ರತಿ ಅಭ್ಯರ್ಥಿಗಳ ವೆಚ್ಚವನ್ನು ಪ್ರತ್ಯೇಕ ರಿಜಿಸ್ಟರ್‌ಗಳಲ್ಲಿ ನಮೂದಿಸಲಾಗುವುದು ಎಂದು ತಿಳಿಸಿದರು.
ಆದಾಯ ತೆರಿಗೆ ಇಲಾಖೆ ನೋಡಲ್ ಅಧಿಕಾರಿ ಅಶೋಕ್ ತಲ್ವಾರ್ ಮಾತನಾಡಿ, 10 ಲಕ್ಷಕ್ಕಿಂತಲೂ ಹೆಚ್ಚಿನ ಮಟ್ಟದ ವಸ್ತುಗಳನ್ನು ನಮ್ಮ ಇಲಾಖೆ ವಶಪಡಿಸಿಕೊಳ್ಳುತ್ತದೆ. ಯಾವುದೇ ದೂರು ಬಂದ ತಕ್ಷಣ ಕಾರ್ಯಪ್ರವೃತ್ತರಾಗಲು ಜಿಲ್ಲಾ ಮಟ್ಟದಲ್ಲಿ ಸಹಾಯಕ ನಿರ್ದೇಶಕರ ದರ್ಜೆಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಪ್ರತಿದಿನ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗುತ್ತದೆ. ಸಂಬಂಧಿಸಿದ ವರದಿಯನ್ನು ಜಿಲ್ಲಾ ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು. ದಾವಣಗೆರೆ ವಿಭಾಗಕ್ಕೆ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ ಸೇರಿ 5 ಜಿಲ್ಲೆಗಳು ಒಳಪಡಲಿವೆ ಎಂದು ಮಾಹಿತಿ ನೀಡಿದರು.
ಅಬಕಾರಿ ಉಪ ಆಯುಕ್ತ ವೈ.ಆರ್. ಮೋಹನ್ ಮಾತನಾಡಿ, ನೀತಿ ಸಂಹಿತೆ ಜಾರಿಯಾದಗಿನಿಂದ ಇಂದಿನವರೆಗೆ 38 ಮೊಕದ್ದಮೆ ದಾಖಲಿಸಿ, 22 ಜನ ಆರೋಪಿಗಳ ಬಂಧಿ ಸಲಾಗಿದೆ. 9247 ಲೀಟರ್ ದೇಶೀಯ ಮದ್ಯ, 9 ಲೀಟರ್ ಗೋವಾ ಮದ್ಯ, 1009 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು 19 ವಾಹನಗಳ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.
ಮಾಧ್ಯಮ ಪ್ರಮಾಣೀಕರಣ ಸಮಿತಿಯ ನೋಡಲ್ ಅಧಿಕಾರಿ ಸೈಯದ್ ಮನ್ಸೂರ್, ಈವರೆಗೆ ವಿವಿಧ ಪತ್ರಿಕೆಗಳಲ್ಲಿ 16 ಜಾಹೀರಾತು ಪ್ರಕಟವಾಗಿದ್ದು, ಅವುಗಳ ವಾರ್ತಾ ಇಲಾಖೆಯ ನಿಗದಿತ ಒಟ್ಟಾರೆ ಮೊತ್ತ 5,27,311 ರೂಪಾಯಿ ಎಂದು ಮಾಹಿತಿ ನೀಡಿದರು.
ಜಿಲ್ಲಾ ಚುನಾವಣಾಧಿಕಾರಿ ಡಿ.ಎಸ್. ರಮೇಶ್, ಚುನಾವಣಾ ವೆಚ್ಚ ವೀಕ್ಷಕರಾದ ನಿರಂಜನ್‌ಕುಮಾರ್, ಅಭಿನವ್ ಪಂಚೋಲಿ, ಎನ್. ದಿನಕರನ್, ಡಾ| ಎಸ್. ಕೆ. ಭದ್ರಾ, ಅಲೋಕ್ ಶ್ರೀವಾಸ್ತವ, ಅಮರ್‌ನಾಥ್ ಕೇಸರಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಹೆಚ್ಚುವರಿ ವರಿಷ್ಟಾಧಿಕಾರಿ ಉದೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಷಡಕ್ಷರಪ್ಪ ಇತರರು ಇದ್ದರು.