Advertisement
ಪಾಕ್-ಅಮೆರಿಕ ಸಂಬಂಧ ಮುಂದುವರಿಕೆ: ಉಗ್ರರನ್ನು ಪೋಷಿಸುತ್ತಿರುವುದರ ಬಗ್ಗೆ ಟೀಕೆ ಹಾಗೂ ಆರ್ಥಿಕ ಅನುದಾನ ಸ್ಥಗಿತದಂತಹ ಕಠಿಣ ಕ್ರಮಗಳನ್ನು ಕೈಗೊಂಡಿರುವ ಮಧ್ಯೆಯೂ ಪಾಕ್ ಹಾಗೂ ಅಮೆರಿಕದ ಸಂಬಂಧ ಹಿಂದಿನಂತೆಯೇ ಮುಂದುವರಿಯಲಿದೆ ಎಂದು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಹೇಳಿದ್ದಾರೆ. ಅಮೆರಿಕ ವಿಶ್ವದ ಬೃಹತ್ ಆರ್ಥಿಕತೆಯಾಗಿದ್ದು, ಈ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದೆ. ಹೀಗಾಗಿ ನಾವು ಅವರೊಂದಿಗೆ ಹಿಂದಿನಂತೆಯೇ ಮಾತುಕತೆ ಹಾಗೂ ಸಹಭಾಗಿತ್ವವನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಹಣಕಾಸು ಪೂರೈಸಿದ ಆರೋಪಕ್ಕೆ ಸಂಬಂಧಿಸಿ ಎನ್‌ಐಎ ಇದೇ ತಿಂಗಳಲ್ಲಿ ಹುರಿಯತ್ ನಾಯಕರ ವಿರುದ್ಧ ಆರೋಪಪಟ್ಟಿ ದಾಖಲಿಸಲಿದೆ. ಈಗಾಗಲೇ ಸಂಸ್ಥೆಯು ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮತಿ ಕೋರಿದೆ. ಆರೋಪಪಟ್ಟಿಯಲ್ಲಿ ಹುರಿಯತ್ ನಾಯಕರಾದ ನಯೀಂ ಖಾನ್, ಜೆಕೆಎಲ್‌ಎಫ್ ನಾಯಕ ಫಾರೂಕ್ ಅಹ್ಮದ್ ದರ್, ಮಿರ್ವೇಜ್ ಉಮರ್ ಫಾರೂಕ್‌ನ ಆಪ್ತ ಸಹಚರ ಅಫ್ತಾಬ್ ಹಿಲಾಲಿ ಶಾ, ಗಿಲಾನಿಯ ಅಳಿಯ ಅಲ್ತಾಫ್ ಅಹ್ಮದ್, ತೆಹ್ರೀಕ್-ಇ-ಹುರಿಯತ್ ವಕ್ತಾರ ಆಯಾಜ್ ಖಾನ್ ಸೇರಿದಂತೆ ಅನೇಕರ ಹೆಸರುಗಳಿವೆ. ಕಣಿವೆ ರಾಜ್ಯದಲ್ಲಿ ಉಗ್ರರಿಗೆ ಹಣಕಾಸು ಪೂರೈಸಿದ, ವಿಧ್ವಂಸಕ ಕೃತ್ಯ ಎಸಗಿದ ಆರೋಪ ಇವರ ಮೇಲೆ ಹೊರಿಸಲಾಗಿದೆ. ಇದೇ ವೇಳೆ, ಭಾರತ-ಪಾಕ್ ನಡುವೆ ಉತ್ತಮ ಬಾಂಧವ್ಯ ಏರ್ಪಡುವ ನಿಟ್ಟಿನಲ್ಲಿ ಎರಡೂ ದೇಶಗಳ ನಾಯಕರು ಹೆಜ್ಜೆಯಿಡಬೇಕು ಎಂದು ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಹೇಳಿದ್ದಾರೆ.