Advertisement

ಡಾ.ರಾಜ್‌ಕುಮಾರ್‌ ಅಪಹರಣಕಾರರ ಬಿಡುಗಡೆ

06:00 AM Sep 26, 2018 | |

ಬೆಂಗಳೂರು: ಹದಿನೆಂಟು ವರ್ಷಗಳ ಹಿಂದೆ ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡುಗಳ್ಳ ವೀರಪ್ಪನ್‌ ಬದುಕಿರುವ ಸಹಚರರ ಬಿಡುಗಡೆಯಾಗಿದೆ. ವೀರಪ್ಪನ್‌ ಮತ್ತು ಆತನ ಸಹಚರರೇ ಅಪಹರಿಸಿ ಹಣಕ್ಕೆ ಬೇಡಿಕೆ ಯಿಟ್ಟಿದ್ದರು. ಕೆಲವರು ಸಂಧಾನಕಾರರಾಗಿ ತೆರಳಿ ಡಾ.ರಾಜ್‌ ಬಿಡುಗಡೆಗೆ ಸಹಾಯ ಮಾಡಿದ್ದರು. ಇದೆಲ್ಲವೂ ಲೋಕಕ್ಕೆ ಗೊತ್ತಿದ್ದ ಸತ್ಯ. ರಾಜ್ಯ
ಸರ್ಕಾರವೇ ಮುಂದೆ ನಿಂತು, ತಮಿಳುನಾಡು ಸರ್ಕಾರದ ಸಹಾಯದೊಂದಿಗೆ ಡಾ.ರಾಜ್‌ರನ್ನು ಬಿಡುಗಡೆ ಮಾಡಿಸಲು ಪ್ರಯತ್ನ ನಡೆಸಿದ ಬಗ್ಗೆಯೂ ದಾಖಲೆಗಳಿವೆ. ಆದರೆ, ಇದೀಗ ಇವರ ವಿರುದಟಛಿದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫ‌ಲವಾಗಿದೆ ಎಂಬ ಕಾರಣಕ್ಕೆ ಡಾ.ರಾಜ್‌ ಅಪಹರಣ ಪ್ರಕರಣದಲ್ಲಿ ವೀರಪ್ಪನ್‌ ಸಹಚರರಾಗಿ ಕೆಲಸ ಮಾಡಿದ್ದ ಐದು ಮಂದಿಯನ್ನು ಈರೋಡ್‌ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ನ್ಯಾಯಾಲಯ ಆರೋಪಮುಕ್ತಗೊಳಿಸಿದ್ದು, ಅವರ ಬಿಡುಗಡೆಗೆ ಆದೇಶಿಸಿದೆ.

Advertisement

ಅದು 2000ನೇ ಇಸವಿಯ ಜುಲೈ 30ರ ಭಾನುವಾರ. ವರನಟ ಡಾ.ರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮಿಳುನಾಡಿನ ತಾಳವಾಡಿಗೆ ತೆರಳಿದ್ದರು. ರಾತ್ರಿ ತೋಟದ ಮನೆಯಲ್ಲಿ ತಂಗಿದ್ದರು. ರಾತ್ರಿ ಊಟದ ಬಳಿಕ ಸುಮಾರು 9.30ರ ವೇಳೆಗೆ ರಾಜ್‌
ಕುಮಾರ್‌ ಟಿ.ವಿ.ನೋಡುತ್ತಿದ್ದಾಗ ಏಕಾಏಕಿ ತೋಟದ ಮನೆಗೆ ಮುತ್ತಿಗೆ ಹಾಕಿದ ಶಸ್ತ್ರ ಸಜ್ಜಿತ ಕಾಡುಗಳ್ಳ ವೀರಪ್ಪನ್‌ ಮತ್ತು ಆತನ ಸಹಚರರು ಡಾ.ರಾಜ್‌, ಅವರ ಅಳಿಯ ಎಸ್‌.ಎ. ಗೋವಿಂದರಾಜ್‌, ಸಂಬಂಧಿ ನಾಗೇಶ್‌ ಮತ್ತು ನಾಗಪ್ಪ ಮಾರಡಗಿ ಅವರನ್ನು ಅಪಹರಿಸಿದರು. ಈ ಸುದ್ದಿ ರಾಜ್ಯದ ಜನತೆಗೆ ದೊಡ್ಡ ಆಘಾತ ತಂದೊಡ್ಡಿತ್ತು. ಇದಾದ ಸ್ವಲ್ಪ ಸಮಯದ ಬಳಿಕ ವೀರಪ್ಪನ್‌ ತನ್ನ ಬೇಡಿಕೆಗಳ ಕುರಿತಾದ ಕ್ಯಾಸೆಟ್‌ ಒಂದನ್ನು ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಕಳುಹಿಸಿಕೊಟ್ಟು, ಅದನ್ನು ರಾಜ್ಯದ ಮುಖ್ಯಮಂತ್ರಿಗೆ ನೀಡುವಂತೆ ಹೇಳಿದ್ದ. ಅಲ್ಲದೆ, ಅದರಲ್ಲಿರುವ ಬೇಡಿಕೆಗಳನ್ನು ಈಡೇರಿಸಿದರೆ ಡಾ.ರಾಜ್‌ ಅವರನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದ. ತಕ್ಷಣ ಪಾರ್ವತಮ್ಮ ಅವರು ದೂರವಾಣಿ ಮೂಲಕ ಆಗ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ.ಕೃಷ್ಣ ಅವರಿಗೆ ವಿಷಯ ತಿಳಿಸಿದ್ದಲ್ಲದೆ, ವೀರಪ್ಪನ್‌ ಕಳುಹಿಸಿದ್ದ ಕ್ಯಾಸೆಟ್‌ ಜತೆ ನೇರವಾಗಿ ಮುಖ್ಯಮಂತ್ರಿಗಳನ್ನು
ಭೇಟಿಯಾದರು.

ಪಾರ್ವತಮ್ಮ ತಮ್ಮನ್ನು ಭೇಟಿಯಾಗಿ ವಿವರವಾದ ಮಾಹಿತಿ ನೀಡಿದ ಬೆನ್ನಲ್ಲೇ ತಮಿಳು ನಾಡಿನ ಆಗಿನ ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಸಂಪರ್ಕಿಸಿದ ಎಸ್‌.ಎಂ.ಕೃಷ್ಣ ಪ್ರಕರಣದ ಕುರಿತು ವಿವರ ನೀಡಿದರಲ್ಲದೆ, ಮುಖತಃ ಮಾತುಕತೆ ನಡೆಸಲು ಚೆನ್ನೈಗೆ ತೆರಳಿದ್ದರು. ಅವರೊಂದಿಗೆ ಪಾರ್ವತಮ್ಮ ಮತ್ತು ಅವರ ಇಬ್ಬರು ಪುತ್ರರೂ ಚೆನ್ನೈಗೆ ತೆರಳಿದ್ದರು. ಈ ಮಧ್ಯೆ ರಾಜ್‌ ಅಪಹರಣ ಖಂಡಿಸಿ ಮತ್ತು ಅವರನ್ನು ವೀರಪ್ಪನ್‌ನಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ, ಹೋರಾಟಗಳು ನಡೆದವು. ಹಿಂಸಾಚಾರವೂ ನಡೆಯಿತು. ರಾಜ್‌ ವೀರಪ್ಪನ್‌ ವಶದಲ್ಲಿದ್ದಷ್ಟೂ ದಿನ ರಾಜ್ಯದಲ್ಲಿ ಇನ್ನೊಂದೆಡೆ ವೀರಪ್ಪನ್‌ ಜತೆ ಸಂಧಾನ ನಡೆಸಿ ಡಾ.ರಾಜ್‌ ಬಿಡುಗಡೆ ಪ್ರಯತ್ನವೂ ಮುಂದುವರಿದಿತ್ತು. ತಮಿಳುನಾಡಿನ ನಕ್ಕೀರನ್‌ ಪತ್ರಿಕೆ ಸಂಪಾದಕ ಗೋಪಾಲ್‌ ಮತ್ತು ನೆಡುಮಾರನ್‌ ಅವರು ಮಾತುಕತೆಯ ನೇತೃತ್ವ ವಹಿಸಿದ್ದರು. ಇದರ ನಡುವೆಯೇ ಡಾ.ರಾಜ್‌ ಅವರು ತಾವು ವೀರಪ್ಪನ್‌ ಬಂಧನದಲ್ಲಿ ಕ್ಷೇಮವಾಗಿರುವುದಾಗಿ ಸಂದೇಶವನ್ನೂ ಕಳುಹಿಸಿದ್ದರು. ಈ ಮಧ್ಯೆ ಅವರ ಆರೋಗ್ಯ ತಪಾಸಣೆಗಾಗಿ ಡಾ.ಭಾನು ಎಂಬುವರು ತೆರಳಿದ್ದರು. ಕೊನೆಗೂ ಸಂಧಾನ ಯಶಸ್ವಿಯಾಗಿ 108 ದಿನಗಳ ಬಳಿಕ ಅಂದರೆ ನವೆಂಬರ್‌ 15ರಂದು ಡಾ.ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಬಿಡುಗಡೆ ಮಾಡಿದ್ದ. ಅಪಹರಣಕ್ಕೆ ಸಂಬಂಧಿಸಿದಂತೆ ವೀರಪ್ಪನ್‌, ಆತನ ಸಹಚರರಾದ ಸೇತುಕುಳಿ ಗೋವಿಂದನ್‌, ರಂಗಸ್ವಾಮಿ, ಆಂಡ್ರಿಲ್‌ ಎಳುಮಲೈ, ಕುಪ್ಪುಸ್ವಾಮಿ ಸೇರಿ ಎಂಟು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಈ ಪೈಕಿ ವೀರಪ್ಪನ್‌, ಗೋವಿಂ ದನ್‌, ರಂಗಸ್ವಾಮಿ ವಿಚಾರಣೆ ವೇಳೆ ಸಾವನ್ನಪ್ಪಿ ದ್ದರು. ಉಳಿದ ಐವರು ಜೈಲು ಸೇರಿದ್ದರು.

ವಿವಾದ ಕೆರಳಿಸಿದ ಪುಸ್ತಕ
ಡಾ.ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ್ದ ಸಂದರ್ಭದಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿದ್ದವರು ಸಿ.ದಿನಕರ್‌. ತಮ್ಮ ನಿವೃತ್ತಿ ನಂತರ ಈ ಪ್ರಕರಣ ಕುರಿತಂತೆ “ವೀರಪ್ಪನ್ಸ್‌ ಪ್ರೈಸ್‌ ಕ್ಯಾಚ್‌- ಡಾ.ರಾಜ್‌ಕುಮಾರ್‌’ ಎಂಬ ಪುಸ್ತಕ ಬರೆದಿದ್ದರು. ಅದರಲ್ಲಿ ರಾಜ್‌ ಬಿಡುಗಡೆಗಾಗಿ ವೀರಪ್ಪನ್‌ಗೆ ಕಂತುಗಳ ಮೂಲಕ 20 ಕೋಟಿ ರೂ. ಪಾವತಿಸಿದ್ದಾಗಿ ತಿಳಿಸಿದ್ದರು. ಅಲ್ಲದೆ, ರಾಜ್‌. ಅಪಹರಣದ ವೇಳೆ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರು ಎರಡು ಬಾರಿ ವೀರಪ್ಪನ್‌ ಜತೆ ಮಾತುಕತೆ ನಡೆಸಿರುವುದಾಗಿಯೂ ಅದರಲ್ಲಿ ಬರೆದಿದ್ದರು. ಇಂತಹ ಅನೇಕ ವಿವಾದಾತ್ಮಕ ಅಂಶಗಳು ಪುಸ್ತಕದಲ್ಲಿದ್ದು ದರಿಂದ ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪುಸ್ತಕ ನಿಷೇಧಿಸುವಂತೆಯೂ ಒತ್ತಾಯ ಕೇಳಿ ಬಂದಿತ್ತು. 

ರಾಜ್‌ಕುಮಾರ್‌ ಅಪಹರಣ ಪ್ರಕರಣದಲ್ಲಿ ಎಲ್ಲೋ ಒಂದು ಕಡೆ ಪೊಲೀಸರ ವೈಫ‌ಲ್ಯ ಎದ್ದು ಕಾಣುತ್ತದೆ. ಅವರು ಅಪಹರಣದಲ್ಲಿ ಭಾಗಿಯಾಗಿದ್ದು ಇಡೀ ದೇಶಕ್ಕೇ ಗೊತ್ತು. ಆದರೆ, ಆ ಕುರಿತು ಸರಿಯಾದ ಸಾಕ್ಷ್ಯಾಧಾರವನ್ನು ಒದಗಿಸಲು ಪೊಲೀಸರು ವಿಫ‌ಲರಾಗಿ ದ್ದಾರೆ. ಬೇಸರದಿಂದವಾದರೂ ಕೋರ್ಟ್‌ ತೀರ್ಪು ಒಪ್ಪಲೇಬೇಕು. 
● ಸಾ.ರಾ.ಗೋವಿಂದು, ಅಧ್ಯಕ್ಷರು, ಡಾ.ರಾಜಕುಮಾರ್‌ ಅಭಿಮಾನಿ ಸಂಘ, ಕನ್ನಡ ಪರ ಹೋರಾಟಗಾರ

Advertisement

ನ್ಯಾಯಾಲಯ ಈಗ ತೀರ್ಪು ನೀಡಿದೆ. ಅದಕ್ಕೆ ನಾವೆಲ್ಲ ತಲೆಬಾಗಬೇಕು. ನಾವು ಸಹ ಸಾಕಷ್ಟು ಸಲ ನ್ಯಾಯಾಲಯಕ್ಕೆ ಹೋಗಿ ನಮ್ಮ ಹೇಳಿಕೆ ನೀಡಿದ್ದೆವು. ಸತ್ಯವಾಗಿ ನೋಡಿದ್ದನ್ನು ವಿವರಿಸಿದ್ದೆವು. ಆದರೆ, ತೀರ್ಪು ಈ ರೀತಿ ಬರುತ್ತದೆ ಎಂದುಕೊಂಡಿರಲಿಲ್ಲ. ಆರೋಪಿಗಳಿಗೆ ಶಿಕ್ಷೆ ಆಗಬೇಕಿತ್ತು.
● ಎಸ್‌.ಎ.ಗೋವಿಂದರಾಜ್‌, ಡಾ.ರಾಜ್‌ ಸಂಬಂಧಿ

Advertisement

Udayavani is now on Telegram. Click here to join our channel and stay updated with the latest news.

Next