Advertisement

ಹೂಳೆತ್ತುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಿ

11:14 AM Jun 15, 2019 | Suhan S |

ಕೊಪ್ಪಳ: ಶಿವಪೂರ ಗ್ರಾಮದ ರೈತರೇ ಸ್ವಯಂ ಪ್ರೇರಿತರಾಗಿ, ಯುವಕರೊಟ್ಟಿಗೆ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಕೈ ಜೋಡಿಸಿರುವುದು ನಿಜಕ್ಕೂ ಸಂತಸದ ವಿಷಯ. ಪ್ರತಿಯೊಬ್ಬರು ಈ ಕಾರ್ಯಕ್ಕೆ ಕೈ ಜೋಡಿಸಬೇಕು. ಸರ್ಕಾರವೂ ಕೆರೆ ಹೂಳೆತ್ತುವ ಕಾರ್ಯದಲ್ಲಿ ತನ್ನಿಂದ ತಾನೇ ಭಾಗಿಯಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ತಾಲೂಕಿನ ಶಿವಪೂರ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮದ ಮಂಜುನಾಥ ಅವರು ಎಲ್ಲರೊಂದಿಗೆ ಚರ್ಚೆ ನಡೆಸಿ ಈ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ. ನಾನೂ ಸಹಿತ ಜಿಪಂ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ ಹೂಳೆತ್ತುವ ಕಾರ್ಯಕ್ಕೆ ಸಹಕಾರ ನೀಡುವಂತೆ ಸೂಚಿಸುವೆ. ಇಲ್ಲಿನ ಹೂಳನ್ನು ರೈತರು ತಮ್ಮ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳಬಹುದು. ಇಂದು ರಸಾಯನಿಕ ಬಳಕೆ ಮಾಡುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ. ಕೆರೆಯ ಮಣ್ಣು ಬಳಕೆ ಮಾಡಿದರೆ ಉತ್ತಮ ಫಸಲು ಬರಲಿದೆ ಎಂದರು. ಈ ಕೆರೆ ಹೂಳೆತ್ತುವುದರಿಂದ ಸುತ್ತಲಿನ ರೈತರಿಗೆ ತುಂಬ ಅನುಕೂಲವಾಗಲಿದೆ. ನಾನು ಮೊದಲು ಶಾಸಕನಾಗಿದ್ದ ವೇಳೆ ಈ ಭಾಗವನ್ನು ನೀರಾವರಿ ಮಾಡುವಂತೆ ಪ್ರಸ್ತಾವನೆ ನಮಗೆ ಸಲ್ಲಿಕೆಯಾಗಿತ್ತು. ಇಲ್ಲಿನ ಕೆರೆಗೆ ನೀರು ತುಂಬಿಸಿದರೆ, ಮುಂದಿನ ಹಳ್ಳಿಗಳಿಗೆ ನೀರು ತಗೆದುಕೊಂಡು ಹೋಗಲು ಅನುಕೂಲವಾಗಲಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಈ ಬಗ್ಗೆ ಕಾಳಜಿ ವಹಿಸಬೇಕು. ಜೊತೆಗೆ ಗಂಗಾವತಿ ಶಾಸಕ ಪರಣ್ಣ ಮನುವಳ್ಳಿ ಅವರು ಜೊತೆಗೂ ಮಾತನಾಡುವೆ ಎಂದರು.

ಮಳೆ ಬರುವವರೆಗೂ ಇಲ್ಲಿನ ರೈತರು ಹೂಳೆತ್ತುವ ಕೆಲಸ ನಿಲ್ಲಬಾರದು. ನಾನು ವೈಯಕ್ತಿಕ 25 ಸಾವಿರ ರೂ. ದೇಣಿಗೆ ಕೊಡುವೆ. ಪ್ರತಿಯೊಬ್ಬರೂ ಇದಕ್ಕೆ ಸಹಕಾರ ನೀಡಿದಾಗ ಮಾತ್ರ ಬರದ ಪರಿಸ್ಥಿತಿ ದೂರ ಮಾಡಲು ಸಾಧ್ಯವಿದೆ. ಕೆರೆ ಹೂಳೆತ್ತುವುದರಿಂದ ನಮಗೆ ಎರಡು ರೀತಿಯಲ್ಲಿ ಲಾಭವಾಗಲಿವೆ. ಒಂದು ಅಂತರ್ಜಲ ಮಟ್ಟ ಹೆಚ್ಚಳವಾಗುವುದು. ಇನ್ನೊಂದು ಇಲ್ಲಿನ ಮಣ್ಣು ರೈತರ ಜಮೀನಿಗೆ ಬಳಕೆಯಾದರೆ ಮಣ್ಣಿನ ಫಲವತ್ತತೆ ಹೆಚ್ಚು ಮಾಡಲಿದೆ ಎಂದರು.

ಶರಣಬಸವ ಮಹಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆ. ರಾಮರಾವ್‌, ಮಂಜುನಾಥ, ಎಚ್. ದಿವಾಕರ, ಚನ್ನಪ್ಪ ಗೌಡರ, ನರಸಿಂಹಲು, ಹನುಮಪ್ಪ ಗೌಡರ, ನಿಂಗಪ್ಪ ಬಂಡಿಹರ್ಲಾಪೂರ, ಪರಶುರಾಮ ಹುಲಗಿ, ವೀರಭದ್ರಯ್ಯಸ್ವಾಮಿ, ಬಸವನಗೌಡ, ಶಂಕ್ರಯ್ಯ, ಪ್ರಕಾಶ ಅಗಳಕೇರಾ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next