ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ಫೆಬ್ರುವರಿ 14ರಂದು ನಡೆಸಿದ್ದ ದಾಳಿಯಲ್ಲಿ ಶಾಮೀಲಾಗಿದ್ದ ಜೈಶ್ ಎ ಮೊಹಮ್ಮದ್(ಜೆಇಎಂ) ಸಂಘಟನೆಯ ಎಲ್ಲಾ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಭದ್ರತಾ ಪಡೆಗಳು ನಡೆಸಿದ್ದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಬೆಂಬಲಿತ ಸುಮಾರು 66 ಉಗ್ರರನ್ನು ಹತ್ಯೆಗೈದಿರುವುದಾಗಿ ಮೂಲಗಳು ಹೇಳಿರುವುದಾಗಿ ಎಎನ್ ಐ ವರದಿ ವಿವರಿಸಿದೆ.
ಈ ವರ್ಷದಲ್ಲಿ ಒಟ್ಟು 66 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಇದರಲ್ಲಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್(ಜೆಇಎಂ) ಸಂಘಟನೆಯ 27 ಉಗ್ರರು ಸೇರಿರುವುದಾಗಿ ವರದಿ ತಿಳಿಸಿದೆ.
ಪುಲ್ವಾಮಾ ದಾಳಿ ನಡೆದ ಬಳಿಕ ತರಬೇತಿ ಪಡೆಯುತ್ತಿದ್ದ 19 ಮಂದಿ ಜೈಶ್ ಎ ಮೊಹಮ್ಮದ್ ಉಗ್ರರನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು. ಮೂಲಗಳ ಪ್ರಕಾರ, ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಎಲ್ಲಾ ಉಗ್ರರನ್ನು ಸಂಪೂರ್ಣವಾಗಿ ಹತ್ಯೆಗೈಯಲಾಗಿದೆ ಎಂದು ಹೇಳಿದೆ.