ಮುಂಬಯಿ: ಆಲ್ ಇಂಡಿಯಾ ಸಾರಸ್ವತ್ ಕಲ್ಚರಲ್ ಆರ್ಗನೈಜೇಷನ್ ಮತ್ತು ಆಲ್ ಇಂಡಿಯಾ ಸಾರಸ್ವತ್ ಫೌಂಡೇಷನ್ ಜಂಟಿ ಆಯೋಜನೆಯಲ್ಲಿ ಅಖೀಲ ಭಾರತೀಯ ಸಾರಸ್ವತ ಸಮ್ಮೇಳನ-2019 ಸಂಭ್ರಮವು ಜ. 19 ಮತ್ತು ಜ. 20 ರಂದು ಎರಡು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ದಾದರ್ ಹಿಂದೂ ಕಾಲನಿಯಲ್ಲಿರುವ ರಾಜಾ ಶಿವಾಜಿ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಸಾರಸ್ವತ್ ಆ್ಯಂಡ್ ಬಿಯಾಂಡ್ ಎಂಬ ಘೋಷಣೆಯೊಂದಿಗೆ ನಡೆದ ಸಮ್ಮೇಳನದಲ್ಲಿ ಸಾರಸ್ವತ ಸಮಾಜದ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಸಾಧನೆಗಳನ್ನು ಮೆಲುಕು ಹಾಕಲಾಯಿತು. ಸಮಾರಂಭದಲ್ಲಿ ಸಾರಸ್ವತ ಸಮಾಜದ ಮಠಾಧೀಪತಿಗಳಾದ ಕೈವಲ್ಯ ಮಠದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ, ಚಿತ್ರಾಪುರ ಮಠದ ಶ್ರೀಮದ್ ಸದ್ಯೋಜಾತ ಸ್ವಾಮೀಜಿ, ಶಂಕರಾಶ್ರಮ ಶ್ರೀಗಳು, ಶ್ರೀಮದ್ ಸಂಮ್ಯಮೀಂದ್ರ ತೀರ್ಥ ಸ್ವಾಮೀಜಿಯವರು ದೀಪಪ್ರಜ್ವಲಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು.
ಬೆಳಗ್ಗೆ 9 ರಿಂದ ಸಮ್ಮೇಳನವು ಪ್ರಾರಂಭ ಗೊಂಡಿದ್ದು, ಇದೇ ಸಂದರ್ಭದಲ್ಲಿ ಮಠಾಧೀಪತಿಗಳಿಂದ ಆಶೀರ್ವಚನ ನಡೆಯಿತು. ಶ್ರೀಗಳು ಸಮಾಜ ಬಾಂಧವರು ಪೂರ್ಣ ಕುಂಭ ಸಹಿತ ಸ್ವಾಗತಿಸಿದರು. ವೇದಮೂರ್ತಿ ಸುಧಾಮ ಭಟ್ ಮತ್ತು ಅನಂತ ಭಟ್ ಅವರಿಂದ ವೇದಘೋಷ ನಡೆಯಿತು. ಸಂಸ್ಥೆಯ ಅಧ್ಯಕ್ಷ ಡಾ| ಅಜಿತ್, ಉಪಾಧ್ಯಕ್ಷರುಗಳಾದ ಸುಭಾಶ್ ಸರಾಫ್, ಕಿಶೋರ್ ಮಸೂರ್ಕರ್, ಉದಯ ರೆಡ್ಕರ್, ಸ್ವಪ್ನಿಲ್ ಪಂಡಿತ್, ರಾಜೇಂದ್ರ ಪೈ, ದೀಪಕ್ ಪಂಡಿತ್, ಅವರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಉಪಾಧ್ಯಕ್ಷರುಗಳಾದ ಸುಭಾಶ್ ಸರಾಫ್ ಹಾಗೂ ಉಲ್ಲಾಸ್ ಕಾಮತ್ ಸ್ವಾಮೀಜಿಗಳನ್ನು ಗೌರವಿಸಿದರು.
ಅಧ್ಯಕ್ಷ ಅಜಿತ್ ಗುಂಜೀಕರ್ ಸ್ವಾಗತಿಸಿ ಸಮ್ಮೇಳನದ ಉದ್ಧೇಶವನ್ನು ವಿವರಿಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಅಪರಾಹ್ನ 2 ರಿಂದ ವಿವಿಧ ಗೋಷ್ಠಿ, ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಜ. 20 ರಂದು ದಿನಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ರಾತ್ರಿ ಸಮ್ಮೇಳನವು ಸಮಾರೋಪಗೊಂಡಿತು.
ಸಮ್ಮೇಳನದಲ್ಲಿ ಕರ್ನಾಟಕ, ಗೋವಾ, ರಾಜಸ್ತಾನ, ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಶ್ರೀಗಳು ಸಾರಸ್ವತ ಸಮಾಜದ ಸಂಸ್ಕೃತಿ, ಕಲೆಯನ್ನು ಬಿಂಬಿಸುವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು. ಕುಂಬ್ಳೆ ನರಸಿಂಹ ಪ್ರಭು ಮತ್ತು ಶೈಲಜಾ ಗಂಗೊಳ್ಳಿ ಉದ್ಘಾಟನಾ ಕಾರ್ಯಕ್ರಮ ನಿರ್ವಹಿಸಿದರು.
ಆಯೋಜಕರುಗಳಾದ ಸಾರಸ್ವತ ಬ್ಯಾಂಕಿನ ಎಂಡಿ ಸಾಖಳ್ಕರ್, ನಿವೃತ್ತ ಅಧಿಕಾರಿ ಪ್ರವೀಣ್ ಕಡ್ಲೆ, ಪ್ರದೀಪ್ ಪೈ, ನಾಗೇಶ್ ಪೊವಳ್ಕರ್, ಚಿಂತಾಮಣಿ ನಾಡಕರ್ಣಿ, ರಾಜನ್ ಭಟ್, ಲಕ್ಷ್ಮೀಕಾಂತ್ ಪ್ರಭು, ಉದಯಕುಮಾರ್ ಗುರ್ಕರ್, ಸಿ. ಪಿ. ಜೋಶಿ ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯಮಿಗಳು, ಗಣ್ಯರು ಉಪಸ್ಥಿತರಿದ್ದರು. ಜಿಎಸ್‌ಬಿ ಸೇವಾ ಮಂಡಳದ ಸತೀಶ್ ನಾಯಕ್, ಹಾಗೂ ನಗರದ ಸಾರಸ್ವತ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಶ್ರೀಗಳು ಗೌರವಿಸಿದರು.
ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಪರಿಚಯಿಸ ಲಾಯಿತು. ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ರಂಗಗಳಲ್ಲಿ ಸರ್ವತೋಮುಖ ಏಳ್ಗೆಯ ಕುರಿತು ಚರ್ಚೆ, ಸಮಾಜದ ಗಣ್ಯರು-ತಜ್ಞರಿಂದ ಮಾರ್ಗದರ್ಶನ, ಸಾರಸ್ವತ ಸಮಾಜದ ಜಾನಪದ ಕಲೆ, ನಾಟಕ, ಸಂಗೀತ ವಿವಿಧ ಪ್ರಕಾರಗಳ ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. ಭಾಷೆ, ಸಾಹಿತ್ಯ, ಸಂಸ್ಕೃತಿ, ಸಾರಸ್ವತ ಸಂಘ-ಸಂಸ್ಥೆಗಳ ಕುರಿತು ವಿಚಾರ ವಿನಿಮಯ, ಸಾರಸ್ವತ ತಿಂಡಿ-ತಿನಿಸುಗಳು ಪ್ರದರ್ಶನ ಇನ್ನಿತರ ಕಾರ್ಯಕ್ರಮಗಳು ನಡೆದವು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದರು.