Advertisement

ಅಖೀಲ ಭಾರತ ಕಿಸಾನ್‌ ಸಭಾ ಪ್ರತಿಭಟನೆ

11:51 AM Dec 01, 2018 | Team Udayavani |

ಬೀದರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖೀಲ ಭಾರತ ಕಿಸಾನ್‌ ಸಭಾ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ದೇಶದಲ್ಲಿ ಶೇ.60ರಷ್ಟು ಜನರು ಕೃಷಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೃಷಿ ಬಿಕ್ಕಟ್ಟಿಗೆ ಪರಿಹಾರ ಒದಗಿಸುವಲ್ಲಿ ಸರ್ಕಾರಗಳು ಮುಂದಾಗಿಲ್ಲ. 1991ರಿಂದ ಹೊಸ ಆರ್ಥಿಕ ನೀತಿ ಹೆಸರಿನಲ್ಲಿ ಕೃಷಿಯನ್ನು ಕಾರ್ಪೋರೇಟ್‌ ಮನೆತನಗಳಿಗೆ ಸೇರಿಸಿರುವುದು ಮತ್ತು ಗುತ್ತಿಗೆ ಕೃಷಿಯನ್ನು ಪ್ರೋತ್ಸಾಹಿಸುತ್ತಿರುವುದರಿಂದ ಕೃಷಿ ಬಿಕ್ಕಟ್ಟು ಮುಂದುವರಿಯುತ್ತಿದೆ. ಕಾರಣ ದೇಶದಲ್ಲಿ 1991ರಿಂದ ಇಲ್ಲಿಯ ವರೆಗೆ ಸುಮಾರು 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಸ್ವಾಮಿನಾಥನ್‌ ಆಯೋಗದ ವರದಿ ಜಾರಿಗೊಳಿಸಲು ನಿರಾಸಕ್ತಿ ತೋರುತ್ತಿದ್ದು, ಸದ್ಯ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಡಾ| ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸಿನಂತೆ ಇಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
 
ಶಾಸಕರು ಹಾಗೂ ಸಂಸದರ ನಿವೃತ್ತಿ ವೇತನದಂತೆ ರೈತರಿಗೂ ಕೂಡ ಗೌರವ ಧನವೆಂದು ತಿಂಗಳಿಗೆ ಆರು ಸಾವಿರ ನೀಡಬೇಕು. ಬಗರ ಹುಕಂ ಸಾಗುವಳಿಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಎಲ್ಲ ತಾಲೂಕಿನಲ್ಲಿ ಭೂ ಮಂಡಳಿಗಳನ್ನು ರಚಿಸಬೇಕು. ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು.

ಹಿರಿಯ ನಾಗರಿಕರಿಗೆ ಮತ್ತು ವಿಧವೆ, ಅಂಗವಿಲಕರಿಗೆ ತಿಂಗಳಿಗೆ ಆರು ಸಾವಿರ ಮಾಸಾಶನ ನೀಡಬೇಕು. ಆಹಾರ ಭದ್ರತೆ ಕಾಯ್ದೆಯಂತೆ ಪ್ರತಿ ಕುಟುಂಬಕ್ಕೆ 35 ಕೆ.ಜಿ. ಆಹಾರ ಧ್ಯಾನ್ಯ ವಿತರಣೆ ಮಾಡಬೇಕು. ಪಡಿತರ ಚೀಟಿ ನೀಡುವ ಸಂದರ್ಭದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಬರ ಕಾಮಗಾರಿಗಳನ್ನು ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಸಂಘಟನೆಯ ಮುಖಂಡರಾದ ಬಾಬುರಾವ್‌ ಹೊನ್ನಾ, ಮುನಿರೋದ್ದಿನ್‌, ಪ್ರಭು ಹೊಚಕನಳ್ಳಿ, ಜಗನಾಥ ಮಹಾರಾಜ, ಶಂಕರರಾವ್‌ ಕಮಠಾಣಾ, ನಜೀರ್‌ ಅಹ್ಮದ್‌ ಚೊಂಡಿ, ಗುರುಪಾದಯ್ನಾ ಸ್ವಾಮಿ, ಖದೀರ್‌ ಸಾಬ್‌, ಬಾಬುವಾರ ವಾಡೇಕರ್‌, ಪ್ರಭು ಟಿ. ಹಾಗೂ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next