Advertisement

ಸಾಹಿತ್ಯ ಜಾತ್ರೆಗೆ ಬಂದೋರಿಗೆ ಖಡಕ್‌ ರೊಟ್ಟಿ, ಗೋಧಿ ಹುಗ್ಗಿ 

06:05 AM Dec 08, 2018 | |

ಧಾರವಾಡ: ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ, ಖಡಕ್‌ ರೊಟ್ಟಿ ಪುಂಡಿ ಪಲ್ಯ, ಗೋಧಿ ಹುಗ್ಗಿ ಕಡಬು-ಹೋಳಗಿ ಹಾಗೂ ಧಾರವಾಡ ಪೇಡೆ ಸವಿಯುವ ಆಸೆ ಇದೆಯೇ?

Advertisement

ಹಾಗಾದರೆ ಮುಂಬರುವ ಜ.4ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬನ್ನಿ.

ಹೌದು. ಈ ಸಮ್ಮೇಳನಕ್ಕೆ ಆಗಮಿಸುವವರಿಗೆ ಸಾಹಿತ್ಯದ ದಾಸೋಹ ಮಾತ್ರವಲ್ಲ, ಉತ್ತರ ಕರ್ನಾಟಕದ ಅದರಲ್ಲೂ ಧಾರವಾಡ ನೆಲದ ದೇಸಿ ಶೈಲಿಯ ಮೃಷ್ಠಾನ್ನ ಭೋಜನ ಬಡಿಸಲು ಸಿದ್ಧತೆ ನಡೆದಿದೆ. ಈ ನಿಟ್ಟಿನಲ್ಲಿ  ಆಹಾರ ಸಮಿತಿ ಈಗಾಗಲೇ ಎರಡು ಬಾರಿ ಸಭೆ ಸೇರಿ ಊಟದ ವ್ಯವಸ್ಥೆ ಸಿದ್ಧತೆ ಕುರಿತು ಗಂಭೀರ ಚರ್ಚೆ ನಡೆಸಿದೆ.

ಆರು ದಶಕಗಳ ಬಳಿಕ ಧಾರವಾಡದಲ್ಲಿ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾಗಿಯಾಗುವ ಸಾಹಿತ್ಯಾಸಕ್ತರಿಗೆ ಧಾರವಾಡದ ಅಡುಗೆ ರುಚಿ ತೋರಿಸಲು ನಿರ್ಧರಿಸಲಾಗಿದೆ. ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಚಟ್ನಿ, ಅಗಸಿ ಹಿಂಡಿ, ಶೇಂಗಾಚೆಟ್ನಿ, ಕೆಂಪು ಖಾರಾ, ರೊಟ್ಟಿ ಜತೆ ಉಳ್ಳಾಗಡ್ಡಿ ಇತರೇ ತಪ್ಪಲು ಪಲ್ಯ ಜತೆಗೆ ದಿನದಲ್ಲಿ ಒಂದು ಹೊತ್ತು ಸಾಮಾನ್ಯ ಊಟ ಅಂದರೆ ಚಪಾತಿ, ಬಾಜಿ, ಅನ್ನಸಾರು, ಪಲ್ಯ ಕೂಡ ಇರಲಿದೆ.

ಸಿಹಿ ಪದಾರ್ಥದಲ್ಲಿ ಗೋಧಿಹುಗ್ಗಿ, ಹೋಳಿಗೆ ಅಥವಾ ಕಡಬು ಕೂಡ ಸಾಹಿತ್ಯಾಸಕ್ತರ ರುಚಿ ತಣಿಸಲಿವೆ. ಸಮ್ಮೇಳನದ ಮೊದಲ ದಿನ ಅಥವಾ ಕೊನೆಯ ದಿನ ಊಟದ ಸಂದರ್ಭದಲ್ಲಿಯೇ ಎಲ್ಲರ ಬಾಯಿ ಸಿಹಿ ಮಾಡಲು ಧಾರವಾಡ ಪೇಡಾ ನೀಡಲು ನಿರ್ಧರಿಸಲಾಗಿದೆ. ಸಂಜೆ ಹೊತ್ತಿನ ಚಹಾದ ಜತೆ ಮಂಡಕ್ಕಿ, ಮಿರ್ಚಿಗೂ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಮೂರು ದಿನಗಳಲ್ಲಿ 25ಕ್ಕೂ ಹೆಚ್ಚು ಬಗೆಯ ಆಹಾರ ಖಾದ್ಯಗಳು ಸಾಹಿತ್ಯಾಸಕ್ತರ ರುಚಿ ತಣಿಸಲಿವೆ.

Advertisement

ಸಮ್ಮೇಳನದಲ್ಲಿ ಕನಿಷ್ಠ ಒಂದೂವರೆ ಲಕ್ಷ ಜನರು ಹೊರ ಜಿಲ್ಲೆಗಳಿಂದ ಬರುವ ನಿರೀಕ್ಷೆಯಿದ್ದು, ಸ್ಥಳೀಯವಾಗಿ ಒಂದೂವರೆ ಲಕ್ಷ ಜನರು ಪಾಲ್ಗೊಳ್ಳುವ ಅಂದಾಜಿದೆ. ಪ್ರತಿ ದಿನ ಮೂರು ಲಕ್ಷ ಜನರಿಗೆ ಊಟದ ಸಿದ್ಧತೆ ಮಾಡುವ ಜವಾಬ್ದಾರಿ ಜಿಲ್ಲಾಡಳಿತ ಮತ್ತು ಆಹಾರ ಸಮಿತಿ ಮೇಲಿದೆ.

1,500 ಬಾಣಸಿಗರು: ಕಳೆದ ಸಾಹಿತ್ಯ ಸಮ್ಮೇಳನದಲ್ಲಿ 120 ಊಟದ ಕೌಂಟರ್‌ಗಳನ್ನು ಮಾಡಲಾಗಿತ್ತು. ಆದರೆ ಈ ವರ್ಷ 140-150ಕ್ಕೆ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಅದಕ್ಕಾಗಿಯೇ ಕೃಷಿ ವಿವಿಯ ಆವರಣದ ಉತ್ತರ ಭಾಗಕ್ಕಿರುವ ದೊಡ್ಡ  ಜಾಗದಲ್ಲಿ ಊಟದ ಪ್ರತ್ಯೇಕ ಪೆಂಡಾಲ್‌ ಸಜ್ಜುಗೊಳಿಸಲಾಗುತ್ತಿದೆ.

ಸುಮಾರು 1,500 ಜನ ಬಾಣಸಿಗರ ತಂಡ ಅಡುಗೆ ತಯಾರಿಸಲಿದೆ. ಈಗಾಗಲೇ ಧಾರವಾಡದ ಕೃಷಿ ವಿವಿ ಆವರಣಕ್ಕೆ ಎರಡು ಬಾರಿ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ ಬಾಣಸಿಗರ ತಂಡ ಅಗತ್ಯ ನೀರು, ಬೆಳಕಿನ ವ್ಯವಸ್ಥೆ ಕುರಿತು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದೆ. ಇನ್ನು ದಿನಸಿ ವಸ್ತುಗಳ ಪೂರೈಕೆ, ಊಟಕ್ಕೆ ಪರಿಸರ ಸ್ನೇಹಿ ಅಡಕೆ ಪ್ಲೇಟ್‌ಗಳನ್ನು ಬಳಕೆ ಮಾಡುವ ಕುರಿತು ಕೂಡ ಚರ್ಚಿಸಲಾಗಿದೆ.

ಮೂರು ದಿನಗಳ ಕಾಲ ಅಪ್ಪಟ ಧಾರವಾಡದ ದೇಸಿ ಆಹಾರಪದ್ಧತಿಯ ಭೋಜನವನ್ನೇ ಸಾಹಿತ್ಯಾಸಕ್ತರಿಗೆ ಉಣಬಡಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಈ ಕುರಿತು ಸಭೆ ನಡೆಸಿ ಚರ್ಚಿಸಲಾಗಿದೆ. ಉತ್ತರ ಕರ್ನಾಟಕದ ತಿಂಡಿ, ತಿನಿಸುಗಳನ್ನು ಸಹ ನೀಡಲಾಗುವುದು.
– ಅರವಿಂದ ಬೆಲ್ಲದ, ಶಾಸಕರು ಮತ್ತು ಆಹಾರ ಸಮಿತಿ ಅಧ್ಯಕ್ಷ

ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಊಟ ನೀಡಲು ನಿರ್ಧರಿಸಲಾಗಿದೆ. ಜತೆಗೆ ಪರಿಸರ ಸ್ನೇಹಿ ಅಡಕೆ ತಟ್ಟೆಗಳನ್ನೇ ಬಳಸುತ್ತಿದ್ದೇವೆ. ಪ್ಲಾಸ್ಟಿಕ್‌ ತಟ್ಟೆಗೆ ಸಮ್ಮೇಳನದಲ್ಲಿ ಅವಕಾಶವೇ ಇಲ್ಲ.
– ದೀಪಾ ಚೋಳನ್‌,ಜಿಲ್ಲಾಧಿಕಾರಿ, ಧಾರವಾಡ

– ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next