Advertisement

ಅಖೀಲ ಭಾರತ ಕನ್ನಡ ಸಮ್ಮೇಳನ ಕಲಬುರಗಿಯಲ್ಲಾಗಲಿ

10:22 AM Nov 11, 2018 | Team Udayavani |

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಲ್ಲಿನ ಗ್ರಂಥಾಲಯಕ್ಕೆ ಪುಸ್ತಕಗಳ ಖರೀದಿಗೆ ಸಂಸದರ ನಿಧಿ ಯಿಂದ ಐದು ಲಕ್ಷ ರೂ. ಅನುದಾನ ನೀಡುವುದಾಗಿ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 50ನೇ ವರ್ಷಾಚರಣೆ ನಿಮಿತ್ತ ಸುವರ್ಣ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಾಪುಗೌಡ ದರ್ಶನಾಪುರ ರಂಗಮಂದಿರದ ಕೆಲಸ ಇನ್ನೂ ಆಗಬೇಕಾಗಿದ್ದು, ಅದಕ್ಕಾಗಿ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.

ರಂಗಮಂದಿರದ ಒಳಾಂಗಣವು ಅಸ್ತವ್ಯಸ್ತವಾಗಿದೆ. ಅಲಂಕಾರವು ಅಗತ್ಯವಾಗಿದೆ. ಅದಕ್ಕಾಗಿ ಬೇಕಾಗುವ ವೆಚ್ಚಗಳನ್ನು ಭರಿಸಲು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಕನ್ನಡ ಸಾಹಿತ್ಯಕ್ಕೆ ಈ ಭಾಗದ ಕೊಡುಗೆ ಅಪಾರವಾಗಿದೆ. ಇಲ್ಲಿನ ಸಾಹಿತ್ಯ ಮತ್ತು ಸಂಸ್ಕೃತಿ ತನ್ನದೇ ಆದ ಉನ್ನತ ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯದ ಪ್ರಥಮ ಕೃತಿ ಕವಿರಾಜಮಾರ್ಗ ಮಾನ್ಯಖೇಟ್‌ದಿಂದಲೇ ಬಂದಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯದ ಕೊಡುಗೆಯೂ ಈ ಭಾಗದ್ದೇ ಆಗಿದೆ ಎಂದು ಹೇಳಿದರು.

ಉನ್ನತ ಸಾಹಿತ್ಯ, ಸಂಸ್ಕೃತಿಯನ್ನು ಹೊಂದಿರುವ ನಾಡಿನಲ್ಲಿ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಬೇಕಿತ್ತು. ಇಲ್ಲಿಯವರೆಗೆ ಆಗಿಲ್ಲ. ಮುಂಬರುವ ಸಮ್ಮೇಳನವನ್ನು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಿ ಎನ್ನುವ ಆಶಯ ವ್ಯಕ್ತಪಡಿಸಿದರು. 

Advertisement

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಮನು ಬಳಿಗಾರ ಮಾತನಾಡಿ, ಸುವರ್ಣ ಭವನವು ಅತ್ಯಾಕರ್ಷಕವಾಗಿದೆ. ಸಭಾ ಭವನಕ್ಕೆ ಪರಿಷತ್‌ ವತಿಯಿಂದ ಇನ್ನೂ ಐದು ಲಕ್ಷ ರೂ. ನೀಡುವುದಾಗಿ ವಾಗ್ಧಾನ ಮಾಡಿದರು.

ಪರಿಷತ್‌ ಕನ್ನಡಪರ ಚಟುವಟಿಕೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕೈಗೊಂಡಿದೆ. ದಾಸ ಸಾಹಿತ್ಯ, ವಚನ ಸಾಹಿತ್ಯ ಸಂಪುಟಗಳ ಮಾದರಿಯಲ್ಲಿಯೇ ದಲಿತ ಸಾಹಿತ್ಯ ಸಂಪುಟ ಹೊರತರಲು ಪರಿಷತ್‌ ನಿರ್ಧರಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಹತ್ತು ಸಂಪುಟಗಳು ಹೊರಬರಲಿವೆ ಎಂದರು.

ಕನ್ನಡದ 50 ಶ್ರೇಷ್ಠ ಕವಿಗಳ ಕವನಗಳನ್ನು ನೇಪಾಳಿ ಭಾಷೆಗೆ ಹಾಗೂ ನೇಪಾಳಿಯ 50 ಜನ ಶ್ರೇಷ್ಠ ಕವಿಗಳ ಕವನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯವನ್ನು ಆರಂಭಿಸಲಾಗಿದೆ ಎಂದರು.

ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ರಾಜ್ಯ ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೀರಭದ್ರ ಸಿಂಪಿ, ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಗೌರವ ಕೋಶಾಧ್ಯಕ್ಷ ದೌಲತರಾವ ಪಾಟೀಲ, ಮಹಿಳಾ ಪ್ರತಿನಿಧಿ ಡಾ| ಸುಜಾತಾ ಬಂಡೇಶರೆಡ್ಡಿ, ಶಿವನಗೌಡ ಪಾಟೀಲ ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next