Advertisement

30ಕ್ಕೆ ಅಖಿಲ ಭಾರತ ಗಜಲ್‌ ಸಾಹಿತ್ಯ ಸಮ್ಮೇಳನ

04:38 PM Oct 26, 2022 | Team Udayavani |

ನರಗುಂದ: ದಲಿತ ಸಾಹಿತ್ಯ ಪರಿಷತ್‌ ಬೆಳ್ಳಿ ಸಂಭ್ರಮ ಹಾಗೂ 9ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ನಿಮಿತ್ತ ಅಖಿಲ ಭಾರತ ಗಜಲ್‌ ಸಾಹಿತ್ಯ ಸಮ್ಮೇಳನವನ್ನು ಅ.30ರಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ|ಅರ್ಜುನ ಗೊಳಸಂಗಿ ಹೇಳಿದರು.

Advertisement

ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಜಿಲ್ಲಾ ಘಟಕಗಳನ್ನು ಹೊಂದಿರುವ ಪರಿಷತ್ತು ಪ್ರಕಾಶನ ಆರಂಭಿಸಿ ಈವರೆಗೆ 60ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದೆ. ದಲಿತ ಸಾಹಿತ್ಯ ಪರಿಷತ್ತು 28ನೇ ವರ್ಷದಲ್ಲಿ ಮುನ್ನಡೆಯುತ್ತಿದೆ ಎಂದರು.

ಕೊರೊನಾ ನಂತರ ಬೆಳ್ಳಿ ಸಂಭ್ರಮ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಈಗಾಗಲೇ ಗದಗ, ರಾಯಚೂರ, ವಿಜಯಪುರ ಜಿಲ್ಲೆಗಳಲ್ಲಿ ಬೆಳ್ಳಿ ಹಬ್ಬ ಕಾರ್ಯಕ್ರಮ ಅರ್ಥಪೂರ್ಣವಾಗಿ ಮಾಡಲಾಗಿದೆ. 2008ರಲ್ಲಿ ಬಿಜಾಪೂರ, 2009ರಲ್ಲಿ ಬೀದರ, 2011ರಲ್ಲಿ ಕೊಪ್ಪಳ, 2012ರಲ್ಲಿ ಬೆಳಗಾವಿ, 2014 ಮೈಸೂರ, 2015ರಲ್ಲಿ ಬಾಗಲಕೋಟೆಯಲ್ಲಿ ಆರನೇ ಅಖೀಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಚರಿಸಲಾಯಿತು. 2018ರಲ್ಲಿ ಧಾರವಾಡದಲ್ಲಿ ಏಳನೇ ಸಮ್ಮೇಳನ ಅಖಿಲ ಭಾರತ ದಲಿತ ಯುವ ಸಾಹಿತ್ಯ ಸಮ್ಮೇಳವನ್ನಾಗಿ ನಡೆಸಲಾಯಿತು ಎಂದರು.

ಈಗ ದಸಾಪ ಬೆಳ್ಳಿ ಸಂಭ್ರಮ ಅಂಗವಾಗಿ ಅಖೀಲ ಭಾರತ ಗಜಲ್‌ ಸಾಹಿತ್ಯ ಸಮ್ಮೇಳನ ಅ.30ರಂದು ದೊರೆಸ್ವಾಮಿ ವಿರಕ್ತಮಠದ ಆವರಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ನಡೆಯಲಿದೆ ಎಂದು ಹೇಳಿದರು.

ಸಮ್ಮೇಳನದ ಸ್ವರೂಪ: ಒಂದು ದಿನದ ಈ ಸಮ್ಮೇಳನದಲ್ಲಿ ರಾಜ್ಯದ ಮೂವತ್ತು ಜಿಲ್ಲೆಗಳಿಂದ ಗಜಲ್‌ ಕಾವ್ಯ ರಚನೆಯಲ್ಲಿ ತೊಡಗಿದ ನೂರಾರು ಹಿರಿಯ ಮತ್ತು ಯುವ ಗಜಲ್‌ ಸಾಹಿತಿಗಳು, ಸ್ಥಳೀಯ ಸಾಹಿತಿಗಳು, ಜನಪ್ರತಿನಿಧಿಗಳು ಭಾಗವಹಿಸುವರು. 25 ಜನ ಗಜಲ್‌ ಸಾಹಿತಿಗಳಿಗೆ “ಬೆಳ್ಳಿ ಸಂಭ್ರಮ’ ಗಜಲ್‌ ಕಾವ್ಯ ಪ್ರಶಸ್ತಿ ಪ್ರದಾನ ಹಾಗೂ ಗಜಲ್‌ ಕಾವ್ಯಮೇಳ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ಹಾಗೂ ಗಜಲ್‌ ಪುಸ್ತಕ ಪ್ರದರ್ಶನ, ಮಾರಾಟ ವ್ಯವಸ್ಥೆ
ಮಾಡಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಾಡಿನ ಪ್ರಖ್ಯಾತ ಗಜಲ್‌ ಕವಿ ಕನಕಗಿರಿಯ ಅಲ್ಲಾಗಿರಿರಾಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಸಮ್ಮೇಳನವನ್ನು ಅಣ್ಣಿಗೇರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಬ್ದುಲ್‌ ಖಾದರ್‌ ನಡಕಟ್ಟಿನ ಉದ್ಘಾಟಿಸುವರು. ಬೆಳ್ಳಿ ಸಂಭ್ರಮ ಗಜಲ್‌ ಕಾವ್ಯ ಪ್ರಶಸ್ತಿಯನ್ನು ಹಂಪಿ ಕನ್ನಡ ವಿವಿ ಚಿಂತಕ ಡಾ|ಎನ್‌.ಚಿನ್ನಸ್ವಾಮಿ ಸೋಸಲೆ ಅವರು ಪ್ರದಾನ ಮಾಡಲಿದ್ದಾರೆ ಎಂದು ವಿವರಿಸಿದರು. ಸಾನ್ನಿಧ್ಯ ವಹಿಸಿದ್ದ ಶ್ರೀ ಶಾಂತಲಿಂಗ ಸ್ವಾಮಿಗಳು ಮಾತನಾಡಿ,ನಾಡಿನಲ್ಲಿ ಇದು ಪ್ರಥಮ ಗಜಲ್‌ ಸಮ್ಮೇಳನವಾಗಿದೆ. ಸಂತ ಶಿಶುನಾಳ ಶರೀಫರು ಗಜಲ್‌ ಸಾಹಿತ್ಯದೊಂದಿಗೆ ತತ್ವಪದ ರಚಿಸಿದರು. ಗಜಲ್‌ ಸಾಹಿತ್ಯ ಬೆಳಕಿಗೆ ಬರುತ್ತಿದೆ. ರವೀಂದ್ರ ಹಂದಿಗನೂರ ಅವರು ಹೊರ ದೇಶಗಳಲ್ಲಿ ಕೂಡ ಗಜಲ್‌ ಗೀತಗಾಯನ ಮಾಡಿದರು. ಅದಕ್ಕೆ ಗದುಗಿನ ತೋಂಟದ ಶ್ರೀಗಳು ಪ್ರೋತ್ಸಾಹಿಸಿದರು ಎಂದು ಸ್ಮರಿಸಿದರು.

ಈ ವೇಳೆ ಪರಿಷತ್‌ ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಹೊದ್ಲೂರ, ಉಪಾಧ್ಯಕ್ಷ ಡಾ. ವೈ.ಎಂ. ಭಜಂತ್ರಿ, ಖಜಾಂಚಿ ಡಾ.ಎಚ್‌.ಬಿ. ಕೋಲ್ಕಾರ, ಜಿಲ್ಲಾ ಅಧ್ಯಕ್ಷ ಎಚ್‌.ಎಮ್‌. ದೊಡ್ಡಮನಿ, ಕಸಾಪ ತಾಲೂಕು ಅಧ್ಯಕ್ಷ ಪ್ರೊ.ಬಿ.ಸಿ.ಹನಮಂತಗೌಡ್ರ, ಪ್ರೊ.ಪಿ.ಎಸ್‌. ಅಣ್ಣಿಗೇರಿ, ಮಹಾಂತೇಶ ಹಿರೇಮಠ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next