Advertisement

ದೇಶಿ ಕ್ರಿಕೆಟ್‌ನಲ್ಲಿ ಒಂದೇ ದಿನ ಅಪ್ಪ-ಮಗನ ಅರ್ಧ ಶತಕ

12:00 PM Mar 13, 2017 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ಇಲ್ಲಿನ “ಸಬೀನಾ ಪಾರ್ಕ್‌ ಕ್ರೀಡಾಂಗಣ’ದಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ಆಯೋಜಿಸಿದ 4 ದಿನದ ವೃತ್ತಿಪರ ದೇಶಿ ಕ್ರಿಕೆಟ್‌ ಲೀಗ್‌ನಲ್ಲಿ ಒಂದೇ ದಿನ ಅಪ್ಪ-ಮಗ ಇಬ್ಬರೂ ಅರ್ಧ ಶತಕ ದಾಖಲಿಸಿದ ಅಪರೂಪದ ಘಟನೆ ನಡೆದಿದೆ. ಅದೇ ಒಂದೇ ತಂಡದ ಪರವಾಗಿ ಎನ್ನುವುದು ಇನ್ನೂ ವಿಶೇಷ!

Advertisement

ಹೌದು, ಒಂದು ಕಾಲದಲ್ಲಿ ವೆಸ್ಟ್‌ ಇಂಡೀಸ್‌ ತಂಡದ ಆಧಾರಸ್ತಂಭವಾಗಿದ್ದ,  ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ವಿಂಡೀಸ್‌ ಮಾಜಿ ಕ್ರಿಕೆಟಿಗ ಶಿವನಾರಾಯಣ್‌ ಚಂದರ್‌ಪಾಲ್‌ ಇಂದು ತನ್ನ ಪುತ್ರನ ಜತೆಗೆ ಆಡುತ್ತ ಬ್ಯಾಟಿಂಗ್‌ ಸಂಭ್ರಮವನ್ನು ಆಚರಿಸಿದ್ದಾರೆ. 

ಆರಂಭಿಕನಾಗಿ ಕಣಕ್ಕಿಳಿದ ಪುತ್ರ ತೇಜ್‌ನಾರಾಯಣ್‌ ಚಂದರ್‌ಪಾಲ್‌ 58 ರನ್‌ ಗಳಿಸಿ ತಂದೆಗೆ ತಕ್ಕ ಮಗ ಎನಿಸಿಕೊಂಡರು. ಅನಂತರ ಬ್ಯಾಟಿಂಗ್‌ಗೆ ಇಳಿದ ಅಪ್ಪ ಕೂಡ ಅರ್ಧ ಶತಕ ಬಾರಿಸಿದರು (57). ಇದು ಕ್ರೀಡಾಂಗಣದಲ್ಲಿ ನೆರೆದಿದ್ದ ನೋಡುಗರ ಕಣ್ಮನ ಸೆಳೆಯಿತು.

ಅಪ್ಪ-ಮಗನ ಅಪರೂಪದ ಆಟ
ಇದು 4 ದಿನಗಳ ದೇಶಿ ಪಂದ್ಯ. ಇಲ್ಲಿ ಜಮೈಕಾ-ಗಯಾನಾ ತಂಡಗಳು ಪರಸ್ಪರ ಮುಖಾಮುಖೀಯಾಗಿದ್ದವು. ಶಿವ ನಾರಾಯಣ್‌ ಮತ್ತು ತೇಜ್‌ನಾರಾಯಣ್‌ ಗಯಾನ ತಂಡ ಪ್ರತಿನಿಧಿಸಿದ್ದರು. ಶುಕ್ರವಾರ ಮೊದಲು ಬ್ಯಾಟಿಂಗ್‌ ಮಾಡಿದ ಜಮೈಕಾ ಮೊದಲ ಇನ್ನಿಂಗ್ಸ್‌ನಲ್ಲಿ 255 ರನ್‌ ಗಳಿಸಿ ಆಲೌಟಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ ಗಯಾನ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ತೇಜ್‌ನಾರಾಯಣ್‌ ಅರ್ಧ ಶತಕ ಗಳಿಸಿ ನೆರವಾದರು.  4ನೇ ವಿಕೆಟಿಗೆ ಬಂದ ಶಿವನಾರಾಯಣ್‌ ಚಂದರ್‌ಪಾಲ್‌ ಅರ್ಧ ಶತಕ ಗಳಿಸಿ ಮಗನಿಗಿಂತ ಒಂದು ರನ್‌ ಕಡಿಮೆ ಮಾಡಿ ಔಟಾದರು.

ಅಪ್ಪನಿಗೆ 42,  ಮಗನಿಗೆ 20 ವರ್ಷ!
ಶಿವನಾರಾಯಣ್‌ ಚಂದರ್‌ಪಾಲ್‌ಗೆ ಈಗ 42 ವರ್ಷ. ಮಗ ತೇಜ್‌ನಾರಾಯಣ್‌ಗೆ 20 ವರ್ಷ. ಇವರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 22 ವರ್ಷ! ತೇಜ್‌ನಾರಾಯಣ್‌ ಇದುವರೆಗೆ 15 ಪ್ರಥ‚ಮ ದರ್ಜೆ, 4 ಲಿಸ್ಟ್‌ “ಎ’ ಪಂದ್ಯಗಳನ್ನು ಆಡಿದ್ದಾರೆ. 2 ಅರ್ಧ ಶತಕ ಒಳಗೊಂಡ 698 ರನ್‌ ಗಳಿಸಿದ್ದಾರೆ.

Advertisement

ಒಟ್ಟಾರೆ 21 ವರ್ಷ ಸುದೀರ್ಘ‌ವಾಗಿ  ವಿಂಡೀಸ್‌ ತಂಡ ವನ್ನು ಶಿವನಾರಾಯಣ್‌ ಚಂದರ್‌ಪಾಲ್‌ ಪ್ರತಿನಿಧಿಸಿದ್ದರು. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಸ್ವಾರಸ್ಯವೆಂದರೆ, ಮಗನ ವಯಸ್ಸು ಶಿವನಾರಾಯಣ್‌ ಚಂದರ್‌ಪಾಲ್‌ ಅವರ ಒಟ್ಟಾರೆ ವೃತ್ತಿ ಜೀವನದಷ್ಟು ಆಗಿರುವುದು!  
ಶಿವನಾರಾಯಣ್‌ ವಿಂಡೀಸ್‌ ಪರ 164 ಟೆಸ್ಟ್‌ ಆಡಿ ದ್ದಾರೆ. 30 ಶತಕ, 66 ಅರ್ಧ ಶತಕದೊಂದಿಗೆ ಒಟ್ಟು 11,867 ರನ್‌ ಗಳಿಸಿದ್ದಾರೆ. 268 ಏಕದಿನ ಪಂದ್ಯ ವನ್ನಾಡಿರುವ ಶಿವನಾರಾಯಣ್‌ 11 ಶತಕ, 59 ಅರ್ಧ ಶತಕ ಹೊಡೆದಿದ್ದಾರೆ.  ಅಲ್ಲದೆ 22 ಟಿ-20 ಪಂದ್ಯಗಳಲ್ಲೂ ಬ್ಯಾಟ್‌ ಬೀಸಿರುವ ಅವರು ಒಟ್ಟಾರೆ 343 ರನ್‌ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next