Advertisement

ಸಮಸ್ತ ಮಾನವ ಕುಲದ ವಿನಾಶ ಪ್ರಾರಂಭ: ಡಾ|ಚೆನ್ನಿ ಆತಂಕ

03:49 PM Sep 17, 2018 | |

ದಾವಣಗೆರೆ: ವಸುದೈವ ಕುಟುಂಬಕಂ… ಎಂಬ ಪರಿಕಲ್ಪನೆ ದೂರವಾಗುತ್ತಾ ಮನುಷ್ಯನೇ ವಿಶ್ವದ ಕೇಂದ್ರ. ಇನ್ನುಳಿದ ಎಲ್ಲವೂ ಅವನ ಸೇವೆಗಾಗಿ ಇರುವುದು ಎಂಬ ಭಾವನೆ ಬೇರೂರುತ್ತಿರುವ ಮೂಲಕ ಮನುಷ್ಯ ಕುಲದ ವಿನಾಶ ಆರಂಭವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ| ರಾಜೇಂದ್ರ ಚೆನ್ನಿ ಕಳವಳ ವ್ಯಕ್ತಪಡಿಸಿದರು.

Advertisement

ಭಾನುವಾರ ಗ್ರಾಮ ಸೇವಾ ಸಂಘಟನೆ ಹಾಗೂ ಕರುಣಾ ಜೀವಾ ಕಲ್ಯಾಣ ಟ್ರಸ್ಟ್‌ ಸಂಯುಕ್ತಾಶ್ರಯದಲ್ಲಿ ರೋಟರಿ
ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ವಿಶ್ವದ ಪ್ರತಿಯೊಂದು ಜೀವಿಗಳ ನಡುವೆ ಒಂದಲ್ಲ ಒಂದು ರೀತಿ ಸಂಬಂಧವಿದೆ ಎಂಬುದನ್ನು ವಿಜ್ಞಾನ ಸಾಬೀತು ಪಡಿಸಿದೆ. ಸಕಲ ಜೀವಿ ರಾಶಿಯೂ ಒಂದು ಕುಟುಂಬದ ಭಾಗವಾಗಿದೆ. ಹಾಗಾಗಿಯೇ ವಸುದೈವ ಕುಟುಂಬಕಂ… ಎಂಬ ಪರಿಕಲ್ಪನೆ ಸಂವಿಧಾನದ ಆಶಯವಾಗಬೇಕು ಎಂಬ ನಿಲುವು ಕೈಗೊಳ್ಳಲಾಗಿದೆ ಎಂದರು. 

ದೇಶದ ಅರ್ಥ ವ್ಯವಸ್ಥೆ, ಜನರ ದೇಶಿಯ ಕುಲ ಕಸುಬನ್ನು ಬ್ರಿಟಿಷ್‌ ವಸಾಹತುಶಾಹಿ ವ್ಯವಸ್ಥೆ ಕಸಿಯುವ ಪ್ರಯತ್ನ ಮಾಡಿದಾಗ ಗಾಂಧೀಜಿ ನಮಗಿಂದು ರಾಷ್ಟ್ರದ ಪರಿಕಲ್ಪನೆಗಿಂತ ಮುಖ್ಯವಾಗಿ ಗ್ರಾಮೀಣದ ಪರಿಕಲ್ಪನೆ ಬೇಕೆಂಬ ಸದಾಶಯ ಹೊಂದಿದ್ದರು ಎಂದು ತಿಳಿಸಿದರು.

ವಸುದೈವ ಕುಟುಂಬಕಂ..
ಪರಿಕಲ್ಪನೆ ಬಂದಲ್ಲಿ ವಿಕೃತವಾದ ರಾಷ್ಟ್ರವಾದ ಕೊನೆಯಾಗಲಿದೆ ಎಂದ ಅವರು ಇಂದು
ಇಡೀ ವಿಶ್ವದಲ್ಲಿ ಬಲಪಂಥಿಯ, ಮನುಷ್ಯ ವಿರೋಧಿ ಚಿಂತನೆ ನಡೆಯುತ್ತಿದೆ. ಅದಕ್ಕೆ ರಾಜಕೀಯ ಪ್ರೋತ್ಸಾಹ ಸಹ ದೊರಕುತ್ತಿದೆ ಎಂದರು. ದೇಶದ ಇತಿಹಾಸದ ಪರಂಪರೆಯಲ್ಲಿ ಯಾವ ಧರ್ಮದಲ್ಲೂ ಉಗ್ರ ಸ್ವರೂಪವಿಲ್ಲ. ಅವೆಲ್ಲವೂ ಸ್ವಾರ್ಥದ ಅಧಿಕಾರಕ್ಕಾಗಿ ನಡೆದಿರುವ ಹುನ್ನಾರವಷ್ಟೇ. ಬಸವಧರ್ಮ, ವಚನ ಸೇರಿದಂತೆ ಎಲ್ಲಾ ಸಾಹಿತ್ಯವನ್ನು ಯಾವತ್ತಿಗೂ ಒಂದು ಜಾತಿಗೆ ಸೀಮಿತ ಮಾಡಬಾರದು. ನಮ್ಮದು, ತಮ್ಮದು ಎಂಬ ಭಾವನೆಯ ಹಿನ್ನೆಲೆಯೊಳಗೆ ಸ್ವಾಗತಿಸಬೇಕು. ಇಂದಿನ ದಿನಗಳಲ್ಲಿ ಸಾಹಿತಿಗಳು ಮುಖ್ಯವಾಗಿ ಸತ್ಯಾಸತ್ಯತೆ ಉಳಿಸುವ ಪ್ರಯತ್ನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು. ಶಿವನಕೆರೆ ಬಸವಲಿಂಗಪ್ಪ, ಜಾನಪದ ತಜ್ಞ ಎಂ.ಜಿ. ಈಶ್ವರಪ್ಪ, ಸಾಹಿತಿ ಭಿಕ್ಷಾವರ್ತಿಮಠ, ಧಾರವಾಡದ ಬಸವಪ್ರಭು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾದಮಣಿ ನಾಲ್ಕೂರು ತತ್ವಪದ ಹಾಗೂ ಐರಣಿ ಚಂದ್ರು ಕ್ರಾಂತಿಗೀತೆ ಹಾಡಿದರು. ಅಭಿಲಾಷ್‌ ಸ್ವಾಗತಿಸಿದರು. ನೀಲಗುಂದ ಚಂದ್ರಪ್ಪ ನಿರೂಪಿಸಿದರು.

Advertisement

ಪುನಶ್ಚೇತನಗೊಳ್ಳಬೇಕಿದೆ…
ಎಡಪಂಥೀಯ ಸಂಘಟನೆಗಳು ಪುನಶ್ಚೇತನಗೊಳ್ಳಬೇಕಿದೆ. ಹಳ್ಳಿಗಳಲ್ಲಿ ಖಾಲಿ ಉಳಿದಿರುವ ಶೇ. 80ರಷ್ಟು ಯುವಕರ
ಮನ ಮುಟ್ಟಲು ಹಳ್ಳಿಗಳತ್ತ ಮುಖ ಮಾಡಬೇಕಿದೆ. ಯುವಕರನ್ನು ರಚನಾತ್ಮಕವಾಗಿ ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ.
 ಶಂಕರ ಹಲಗತ್ತಿ, ಮಕ್ಕಳ ಸಾಹಿತಿ

ಧೈರ್ಯದ ಹತ್ಯೆ….
ಧರ್ಮ ಮತ್ತು ಆಧ್ಯಾತ್ಮವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಪರಸ್ಪರ ಬಾಂಧವ್ಯ ಬೆಳೆಯಲು ಸಾಧ್ಯ. ಪರಿಸರ ಸಂರಕ್ಷಣೆ, ಲಿಂಗ ಸಮಾನತೆ, ಧರ್ಮ ಮತ್ತು ಆಧ್ಯಾತ್ಮವನ್ನು ಬೆಸೆಯುವ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಿದೆ. ಕನ್ನಡದ ಸಾಹಿತಿಗಳು ಪರಿಸರದಲ್ಲಿ ಉಂಟಾಗುತ್ತಿರುವ ನೋವನ್ನು ಸಾಹಿತ್ಯದ ಮೂಲಕ ಹೊರಹಾಕಲು ಮುಂದಾಗುತ್ತಿಲ್ಲ. ಜೀವನ ಶೈಲಿ ಅಳವಡಿಸಿಕೊಳ್ಳಲು ಕೂಡ ಧೈರ್ಯವನ್ನು ಕೊಲ್ಲುತ್ತಿರುವುದು ನಿಜಕ್ಕೂ ದುರಂತ.
 ಡಾ| ಸಂಜೀವ ರೆಡ್ಡಿ

ಧರ್ಮ-ಸಾಹಿತ್ಯದ ಅಂತರ್‌ ಸಂಬಂಧ ಅಗತ್ಯ
 ದಾವಣಗೆರೆ: ಧರ್ಮಕ್ಕೂ, ಸಾಹಿತ್ಯಕ್ಕೂ ಇರುವ ಅಂತರ್‌ ಸಂಬಂಧವನ್ನು ಇಂದು ಕಾಪಾಡಿಕೊಳ್ಳಬೇಕಿದೆ ಎಂದು
ರಂಗಕರ್ಮಿ ಪ್ರಸನ್ನ ತಿಳಿಸಿದರು. ಭಾನುವಾರ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಸಹಿಷ್ಣುತೆಗಾಗಿ ಸಾಹಿತ್ಯ
ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಾಭಾರತ, ವಚನ ಸಾಹಿತ್ಯ ಇವೆಲ್ಲ ಧಾರ್ಮಿಕ ಕೃತಿ ಹೌದು. ಆದರೆ ಸಾಹಿತ್ಯ, ಧರ್ಮ ಪ್ರತ್ಯೇಕ ಎಂಬ ಭಾವನೆ ಈಚೆಗೆ ವ್ಯಕ್ತವಾಗುತ್ತಿದ್ದು, ದೇಶದ ಪರಂಪರೆಯನ್ನು ಸಾಹಿತ್ಯದ ಜೊತೆಗೆ ಮುನ್ನಡೆಸಬೇಕಿದೆ ಎಂದರು.

ಯಾವುದೇ ಸಾಹಿತ್ಯಕ್ಕಾದರೂ ಪ್ರತಿಕ್ರಿಯೆ, ವಿರೋಧ ವ್ಯಕ್ತವಾಗು ವುದು ಸಹಜ. ಎಲ್ಲದಕ್ಕೂ ತಲೆ ಯಾಡಿಸುವಂತದ್ದು ಕೃತಿ ಆಗಲ್ಲ. ಸಾಹಿತ್ಯ ಎನ್ನುವಂತದ್ದು ವಿಮರ್ಶೆಗೆ ಒಳಪಡಿಸುವಂತಹ ಪ್ರಕ್ರಿಯೆ. ಅಲ್ಲಿ ರಾಜಕಾರಣ
ಮಾಡದೇ ಸೂಕ್ತ ವೇದಿಕೆ ಕಲ್ಪಿಸಬೇಕಿದೆ ಎಂದು ಹೇಳಿದರು. ಧಾರ್ಮಿಕ ಉಗ್ರವಾದದಲ್ಲಿ ಧಾರ್ಮಿಕ, ಆರ್ಥಿಕ ಅಸಹಿಷ್ಣುತೆ ಎಂಬ ಎರಡು ಮುಖಗಳಿದ್ದು, ದೇಶದಲ್ಲಿ ಆರ್ಥಿಕ ಅಸಹಿಷ್ಣುತೆ ಹೆಚ್ಚಾದ ಮೇಲೆಯೇ ಅಸಹಿಷ್ಣುತೆ ಉಂಟಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮೋದಿಯವರು ಈ ನಾಡಿನ ಶ್ರಮಜೀವಿಗಳ ಕೈ ಉತ್ಪನ್ನಗಳಿಗೆ ಜಿಎಸ್‌ಟಿ ತೆರಿಗೆ ವಿಧಿಸುವುದಿಲ್ಲ ಎಂದು ಸಹಮತ ವ್ಯಕ್ತಪಡಿಸಿದ್ದರು. ಆದರೆ ಆದ್ಯಾವುದನ್ನೂ ವಿತ್ತ ಸಚಿವರು ಒಳಗೊಂಡಂತೆ ಯಾರೂ ಮಾಡಲಿಲ್ಲ. 29 ಉತ್ಪನ್ನಗಳಿಗೆ ತೆರಿಗೆ ಶೂನ್ಯ ಮಾಡುವ ಮಾತು ಹುಸಿಯಾಗಿಯೇ ಉಳಿದಿದೆ. ಆದರೆ, ಬಂಡವಾಳಶಾಹಿಗಳಿಗೆ ಹೊಸ ಕಂಪನಿಗಳನ್ನು ತೆರೆಯಲು ಅವಕಾಶ ಮಾಡಿಕೊಡುತ್ತಾ ದಲಿತರ, ರೈತರ, ಕಾರ್ಮಿಕರ ವಿರೋಧ ನೀತಿಗಳನ್ನು ಜಾರಿಗೆ ತರುತ್ತಿರುವುದು ಸರಿಯಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next