ದಿನದಿಂದ ದಿನಕ್ಕೆ ಮನೆಯೊಳಗಿದ್ದ ಜೇನುಗೂಡು ಬೆಳೆಯುತ್ತಾ ಹೋಯಿತು. ಆಶ್ಚರ್ಯ ಎಂದರೆ ಜೇನುನೊಣಗಳು ಯಾರಿಗೂ ತೊಂದರೆ ಕೊಡದೇ ಇದ್ದುದು. ಸ್ನಾನಕ್ಕೆ ನೀರು ಕಾಯಿಸಲು ಬೆಂಕಿ ಹಾಕಿದಾಗಲೂ ಜೇನುನೊಣಗಳು ಕಾಲೆ¤ಗೆಯಲಿಲ್ಲ.
ಬೀಳಗಿಯ ಯಂಕಪ್ಪ, ದನಗಾಹಿಯಾಗಿದ್ದ. ಮನೆಯಲ್ಲಿ ತುಂಬಾ ಬಡತನ. ಹೆಂಡತಿ ಹಾಗೂ ಮಗಳೊಂದಿಗೆ ಜೀವನ ನಡೆಸುತ್ತಿದ್ದ. ಜಾನುವಾರುಗಳಿಂದ ಬರುತ್ತಿದ್ದ ಆದಾಯವಲ್ಲದೆ, ಊರಿನ ಜನ ವರ್ಷಕ್ಕೊಮ್ಮೆ ನೀಡುತ್ತಿದ್ದ ಜೋಳ, ಕಾಳುಕಡ್ಡಿ, ಅಲ್ಪ ಮೊತ್ತದ ಹಣ ಅವನ ಸಂಸಾರ ನಡೆಯಬೇಕಾಗಿದ್ದಿತು. ಬೆಳಗಿನ ಜಾವ ಊರ ಹೊರ ಬಯಲಿನಲ್ಲಿ ದನಗಳನ್ನು ಮೇಯಲು ಬಿಟ್ಟು, ಸಿದ್ಧೇಶ್ವರ ದೇವಸ್ಥಾನದ ಕಾಡಿಗೆ ಕರೆದೊಯ್ಯುತ್ತಿದ್ದ. ಮಧ್ಯಾಹ್ನದ ಸಮಯದಲ್ಲಿ, ದನಗಳು ಗಿಡಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.
ಆ ಸಮಯದಲ್ಲಿ ಯಂಕಪ್ಪ ಹಾಗೂ ಅವನ ಗೆಳೆಯ ಗಂಗಪ್ಪ ಇಬ್ಬರೂ ಸೇರಿ, ತಾವು ತಂದ ಬುತ್ತಿಯನ್ನು ಹಂಚಿಕೊಂಡು ಊಟ ಮಾಡುತ್ತಿದ್ದರು. ಯಂಕಪ್ಪನಿಗೊಂದು ವಿಶಿಷ್ಟ ಹವ್ಯಾಸವಿತ್ತು. ಊಟವಾದ ನಂತರ ಅವನು ಬೆಲ್ಲ ತಿನ್ನುತ್ತಿದ್ದ. ಬೆಲ್ಲಕ್ಕೆ ಜೇನುನೊಣಗಳು ಮುತ್ತಿಗೆ ಹಾಕುವುದನ್ನು ನೋಡಿ ಸಂತೋಷಪಡುತ್ತಿದ್ದ. ನಂತರ ಜೇನುನೊಣಗಳಿಗಾಗಿಯೇ ಬೆಲ್ಲದ ನೀರನ್ನು ಬಟ್ಟಲಿನಲ್ಲಿ ಇಡಲು ಶುರು ಮಾಡಿದ. ಬಹಳ ಸಂಖ್ಯೆಯಲ್ಲಿ ಜೇನು ನೊಣಗಳು ಸಿಹಿ ನೀರಿಗೆ ಮುತ್ತಿಗೆ ಹಾಕಿ ಪಾಕವನ್ನು ಹೀರಿಕೊಂಡು ಗುಂಯುಟ್ಟುವ ಸದ್ದು ಕೇಳಿ ಸಂತೋಷಪಡುತ್ತಿದ್ದ.
ಯಂಕಪ್ಪನ ಈ ವಿಚಿತ್ರ ಹವ್ಯಾಸದ ನಡವಳಿಕೆಯು ಗಂಗಪ್ಪನಿಗೆ ಸೋಜಿಗೆ ತಂದಿತ್ತು. ಒಂದು ದಿನ ಅವನು “ಏಕೆ? ಈ ಕೀಟಗಳ ಬಗ್ಗೆ ಇಷ್ಟೊಂದು ಪ್ರೀತಿ?’ ಎಂದು ಕೇಳಿದ. “ಯಾಕೊ ಏನೋ, ಅವು ಕಷ್ಟಪಟ್ಟು ಊರೆಲ್ಲಾ ಅಲೆದು ಎಲ್ಲಾ ಹೂಗಳ ಮಕರಂದ ಹೀರಿ ಜೇನು ತಯಾರಿಸುತ್ತವೆ. ಆದರೆ ಇನ್ನೇನು ಕುಡಿಯಬೇಕು ಎನ್ನುವಷ್ಟರಲ್ಲಿ ನಮ್ಮಂಥ ಜನರ ಪಾಲಾಗುತ್ತದೆ. ಯಾರದೋ ಶ್ರಮ ಯಾರಿಗೋ ಸುಖ’ ಎಂದು ಮರುಕಪಟ್ಟಿದ್ದ. ಒಂದು ಮಧ್ಯಾಹ್ನ ಊಟಕ್ಕೆ ಕುಳಿತಾಗ ಗಂಗಪ್ಪ ಕೇಳಿದ, “ನಿನ್ನ ಮಗಳ ಮದುವೆ ವಿಚಾರ ಏನಾಯಿತು?’.
“ಯಾಕೋ ಏನೋ, ನೋಡಲು ಬಂದ ವರಗಳೆಲ್ಲಾ ನಿಲ್ಲುತ್ತಿಲ್ಲ. ಗ್ರಹಗತಿ ಸರಿ ಇಲ್ಲಾ ಅಂತಾ ಮಠದ ಆಚಾರಿಯವರು ಹೇಳ್ಯಾರ, ಎಲ್ಲಾ ದೇವರಿಗೆ ಬಿಟ್ಟಿದ್ದು’ ಎಂದು ನಿಟ್ಟುಸಿರು ಬಿಟ್ಟ ಯಂಕಪ್ಪ. ಹಾಗೆ ಹೇಳುತ್ತಿದ್ದಂತೆ ಜೇನುನೊಣಗಳಿಗೆ ಬೆಲ್ಲದ ನೀರು ಇಟ್ಟಿದ್ದ. ಇದಾದ ಒಂದು ವಾರಕ್ಕೆ ಯಂಕಪ್ಪನ ಬಚ್ಚಲು ಮನೆಯಲ್ಲಿ ಜೇನು ನೊಣಗಳು ಸೇರಿಕೊಳ್ಳತೊಡಗಿದವು. ಯಂಕಪ್ಪನ ಬಚ್ಚಲ ಮನೆಯಲ್ಲಿ ಜೇನುಗಳು ಗೂಡು ಕಟ್ಟಿದ ಸುದ್ದಿ ಇಡೀ ಊರಿಗೆ ಹಬ್ಬಿತು.
ಹಲವರು, “ಹುಷಾರು, ಹುಳಗಳು ಕಚ್ಚಿ ಬಿಟ್ಟಾವು, ಬಿಡಿಸುವುದು ಉತ್ತಮ’ ಎಂದರು. ಇನ್ನು ಕೆಲವರು ಇದು ಶುಭ ಶಕುನ ಎಂದರು. ಆಚಾರಿಯವರನ್ನು ಭೇಟಿ ಮಾಡಿದಾಗ “ಜೇನಿನ ತಂಟೆಗೆ ಹೋಗದೆ ಇರುವುದೇ ವಾಸಿ’ ಎಂದುಬಿಟ್ಟರು. ದಿನದಿಂದ ದಿನಕ್ಕೆ ಜೇನುಗೂಡು ಬೆಳೆಯುತ್ತಾ ಹೋಯಿತು. ಆಶ್ಚರ್ಯ ಎಂದರೆ ಜೇನುನೊಣಗಳು ಯಾರಿಗೂ ತೊಂದರೆ ಕೊಡದೇ ಇದ್ದುದು. ಸ್ನಾನಕ್ಕೆ ನೀರು ಕಾಯಿಸಲು ಬೆಂಕಿ ಹಾಕಿದಾಗಲೂ ಜೇನುನೊಣಗಳು ಕಾಲ್ತೆಗೆಯಲಿಲ್ಲ.
ಬರಬರುತ್ತಾ ಗೂಡಿನ ತುಂಬಾ ಜೇನುತುಪ್ಪ ಭರ್ತಿಯಾಯಿತು. ರುಚಿಕರ ಜೇನುತುಪ್ಪದ ಆಸೆಗೆ ಬಹಳಷ್ಟು ಜನರು ಜೇನು ಬಿಡಿಸಲು ಹಠ ಹಿಡಿದರು. ಆದರೆ ಯಂಕಪ್ಪ ಒಪ್ಪಲಿಲ್ಲ. ಕೆಲವೇ ದಿನಗಳಲ್ಲಿ ಪಕ್ಕದ ಸೊನ್ನದ ಊರಿನ ತಿಪ್ಪಣ್ಣನ ಜೊತೆಗೆ ಯಂಕಪ್ಪನ ಮಗಳ ನಿಶ್ಚಯವು ಆಯಿತು. ಸರಳ ರೀತಿಯಲ್ಲಿ ಮದುವೆಯೂ ಆಯಿತು. ಯಂಕಪ್ಪ ಮನದಲ್ಲಿಯೇ ಜೇನುಹುಳುಗಳನ್ನು ಸ್ಮರಿಸಿದ.
* ಪುರುಷೋತ್ತಮ್