ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಎಲ್ಲಾ ರೈತ ಮುಖಂಡರು ಡಿಸೆಂಬರ್ 14 ರಂದು ದೆಹಲಿಯ ಸಿಂಘು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರೈತ ಮುಖಂಡರೊಬ್ಬರ ಹೇಳಿಕೆಯನ್ನು ಆಧರಿಸಿ ಸುದ್ದಿ ಸಂಸ್ಥೆ ಪಿಟಿಐ ಶನಿವಾರ ವರದಿ ಮಾಡಿದೆ.
ತಮ್ಮ ಬೇಡಿಕೆಗಳಿಗೆ ಈಡೇರಿಕೆಗಾಗಿ ಆಗ್ರಹಿಸಿರುವ ರೈತರು ಸರ್ಕಾರ ಮಾತುಕತೆ ನಡೆಸಲು ಬಯಸಿದರೆ, ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಆದರೇ, ಮೂರು ಕೃಷಿ ಸಂಬಂಧಿತ ಕಾಯ್ದೆಗಳನ್ನು ರದ್ದು ಮಾಡುವ ಕುರಿತು ಮೊದಲು ಚರ್ಚಿಸಬೇಕು ಎಂದು ತಿಳಿಸಿದ್ದಾರೆ. ಇದು ಸಾಧ್ಯವಾಗದಿದ್ದಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗವುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿದ ರೈತ ಮುಖಂಡ ಕಮಲ್ ಪ್ರೀತ್ ಸಿಂಗ್, ರಾಜಸ್ಥಾನದ ಶಹಜಾನ್ ಪುರದಿಂದ ಜೈಪುರ – ದೆಹಲಿ ಹೆದ್ದಾರಿಯಲ್ಲಿ ನಾಳೆ (ಡಿ. 13) ಬೆಳಗ್ಗೆ 11 ಗಂಟೆಗೆ ಸಾವಿರಾರರು ರೈತರು ಟ್ರ್ಯಾಕ್ಟರ್ ಮೂಲಕ ದೆಹಲಿ ಚಲೋ ಮೆರವಣಿಗೆಯನ್ನು ಆರಂಭಿಸಲಿದ್ದಾರೆ. ಆ ಮೂಲಕ ಪ್ರತಿಭಟನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು.
ಈ ವೇಳೆ ಡಿಸೆಂಬರ್ 14ರಂದು ರೈತ ಮುಖಂಡರು ಬೆಳಗ್ಗೆ 8 ರಿಂದ ಸಂಜೆ 5 ರವರೆಗೂ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಕಮಲ್ ಪ್ರೀತ್ ಸಿಂಗ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಕಳೆದ 17 ದಿನಗಳಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.