ಪಾಟ್ನಾ:ಕೇಂದ್ರದಲ್ಲಿ ಸರಕಾರ ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಎನ್ ಡಿಎ ಮಿತ್ರ ಪಕ್ಷ ಜೆಡಿಯು ನಾಯಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಇಂಡಿಯಾ ಮೈತ್ರಿಕೂಟದ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಚುನಾವಣ ಫಲಿತಾಂಶ ಪ್ರಕಟವಾದ ಮರುದಿನ ಬುಧವಾರ ಒಂದೇ ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸಿರುವುದು ಭಾರೀ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರು ನಾವು ನಿತೀಶ್ ಕುಮಾರ್ ಮತ್ತು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ.
10.20 ಕ್ಕೆ ಪಾಟ್ನಾದಿಂದ ಹೋರಟ ವಿಸ್ತಾರ ವಿಮಾನದಲ್ಲಿ ಇಬ್ಬರೂ ಒಟ್ಟಿಗೆ ದೆಹಲಿಯತ್ತ ಪ್ರಯಾಣಿಸಿದ್ದಾರೆ. ನಿತೀಶ್ ಕುಮಾರ್ ಅವರು ಎನ್ ಡಿಎ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾರೆ ಎನ್ನಲಾಗಿದ್ದು, ಇದೆ ವೇಳೆ ತೇಜಸ್ವಿ ಅವರು ಇಂಡಿಯಾ ಮೈತ್ರಿಕೂಟ ಕರೆದಿರುವ ಸಭೆಯಲ್ಲಿ ಭಾಗಿಯಾಗಲು ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಜೆಡಿಯು 12 ಸಂಸದರನ್ನು ಹೊಂದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆದಿರುವ ಮಹತ್ವದ ಸಭೆಯಲ್ಲಿ ನಿತೀಶ್ ಕುಮಾರ್ ಅವರೊಂದಿಗೆ ಎಲ್ ಜೆಪಿ(ರಾಮ್ ವಿಲಾಸ್ ಪಾಸ್ವಾನ್) ನಾಯಕ ಚಿರಾಗ್ ಮತ್ತು ಹಿಂದುಸ್ಥಾನ್ ಅವಾಮ್ ಮೋರ್ಚಾದ ಏಕೈಕ ಸಂಸದ (ಗಯಾ ಮೀಸಲು ಕ್ಷೇತ್ರ) ಜೀತನ್ ರಾಮ್ ಮಾಂಝಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಎಲ್ ಜೆಪಿ 5 ಸಂಸದರನ್ನು ಹೊಂದಿದ್ದು ಅವರ ಬೆಂಬಲವೂ ನಿರ್ಣಾಯಕವಾಗಿದೆ.
ಇಂಡಿಯಾ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಾಗ ನಿತೀಶ್ ಕುಮಾರ್ ಮುಂಚೂಣಿ ನಾಯಕರಾಗಿದ್ದರು. ಆ ಬಳಿಕ ಚುನಾವಣೆಗೂ ಮುನ್ನ ಎನ್ ಡಿಎ ಪಾಳಯಕ್ಕೆ ಜಿಗಿದಿದ್ದರು.
ಬಿಹಾರದ ಪೂರ್ನಿಯ ಕ್ಷೇತ್ರದಲ್ಲಿ ಪಕ್ಷೇತರರಾಗಿ ಪಪ್ಪು ಯಾದವ್ ಅವರು ಆಯ್ಕೆಯಾಗಿದ್ದಾರೆ.