ಬೆಂಗಳೂರು: ಬಸವರಾಜ್ ಬೊಮ್ಮಾಯಿಯವರ ಬಗ್ಗೆ ನನಗೆ ಕೆಲವು ನಿರೀಕ್ಷೆಗಳಿದ್ದವು. ನಮ್ಮ ಜೊತೆ ಬೆಳೆದ ಮನುಷ್ಯ. ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದನೆಗೊಂಡ ಮನುಷ್ಯರಲ್ಲ. ನಿಜ ಮತ್ತು ನೈತಿಕತೆಯ ಆಧಾರದ ಮೇಲೆ ಆಡಳಿತ ನಡೆಸಬಹುದು, ನಮ್ಮ ಸರ್ಕಾರದ ಅವಧಿ ಮುಗಿದಾಗ ಅಭಿವೃದ್ಧಿ ಕೆಲಸಗಳು ಯಾವ ಹಂತದಲ್ಲಿದ್ದವೋ ಅಲ್ಲಿಂದ ಮುಂದಕ್ಕೆ ಕೊಂಡೊಯ್ಯುವ ಕಾಳಜಿಯನ್ನು ಬೊಮ್ಮಾಯಿಯವರು ತೋರಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ನಮ್ಮ ನಿರೀಕ್ಷೆಗಳನ್ನೆಲ್ಲ ಸುಳ್ಳು ಮಾಡಿ ಬಿಜೆಪಿಯ ಬಹಳ ದೊಡ್ಡ ಸುಳ್ಳುಗಾರರಾಗಿ ಹೊರ ಹೊಮ್ಮುತ್ತಿರುವುದನ್ನು ನೋಡಿದರೆ, ಬೊಮ್ಮಾಯಿಯವರು ಕೆಲವೇ ದಿನಗಳಲ್ಲಿ ಜನರಿಂದ ಗೇಲಿಗೆ ಒಳಗಾಗುತ್ತಾರೆ ಎನ್ನಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ, ಚುನಾವಣಾ ಪ್ರಚಾರ ಸಭೆಗಳಲ್ಲಿ ನಿರಂತರ ಸುಳ್ಳು ಹೇಳುವ ಮೂಲಕ ಮುಖ್ಯಮಂತ್ರಿ ಬಿಜೆಪಿ ಪಕ್ಷದ ಮೂಲ ತತ್ವವನ್ನು ಎತ್ತಿ ಹಿಡಿದಿದ್ದಾರೆ. ನೂರು ಬಾರಿ ಸುಳ್ಳು ಹೇಳಿ ಅದನ್ನೆ ಸತ್ಯವೆಂದು ನಂಬಿಸುವುದು ಬಿಜೆಪಿಯವರ ಹುಟ್ಟುಗುಣವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾದ ಮನೆಗಳ ಬಗ್ಗೆ ಆಗಾಗ್ಗೆ ಪ್ರಶ್ನೆ ಕೇಳುವ, ಸುಳ್ಳು ಹೇಳುವ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಿದ್ದು ಮಾಹಿತಿ ತರಿಸಿಕೊಳ್ಳಲು ಕಷ್ಟವಾಗುತ್ತಿದೆಯೇ ಅಥವಾ ಮುಖ್ಯಮಂತ್ರಿ ಕೇಳಿದರೂ ಇಲಾಖೆಗಳು ಮಾಹಿತಿ ನೀಡುತ್ತಿಲ್ಲವೇ ಎಂದು ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ ರಾಜಕೀಯವಾಗಿ ವೀಕ್ ಆಗಿದ್ದಾರೆ: ಡಿ.ಕೆ.ಶಿವಕುಮಾರ್
ಸುಳ್ಳು ಹೇಳುವುದರ ಮೂಲಕ ಸತ್ಯವನ್ನು ಮುಚ್ಚಿಡಲಾಗುವುದಿಲ್ಲ. ಬೊಮ್ಮಾಯಿಯವರು ನಿನ್ನೆ ಆನೇಕಲ್ ಮತ್ತು ಬೀದರ್‌ಗಳಲ್ಲಿ ಹಲವಾರು ಸುಳ್ಳುಗಳನ್ನು ಹೇಳಿದ್ದಾರೆ. ಕಾಂಗ್ರೆಸ್‌ನವರು ಮನೆಗಳನ್ನೆ ನೀಡಿರಲಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. 2017ರಲ್ಲಿ ಚುನಾವಣೆಗಳು ಮೂರು ತಿಂಗಳು ಇರುವಾಗ ಒಂದು ಲಕ್ಷ ಮನೆಗಳನ್ನು ಘೋಷಿಸಿದರು ಎಂದು ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದಿದ್ದರೆ ಆ ಯೋಜನೆಯನ್ನು ಪೂರ್ಣಗೊಳಿಸಿ ಮತ್ತೆ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೆವು. ಮುಂದೆ ಅಧಿಕಾರಕ್ಕೆ ಬಂದು ಅದನ್ನು ಮಾಡಿಯೇ ತೀರುತ್ತೇವೆ. ಬಿಜೆಪಿಯವರು ಅಧಿಕಾರಕ್ಕೆ ಬಂದು ಮೂರೂವರೆ ವರ್ಷಗಳಾದರೂ ಆ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.