ಲಂಡನ್: ಇತ್ತೀಚೆಗೆ ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಗಿದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪಂದ್ಯಾವಳಿ ದೊಡ್ಡ ಆತಂಕಕ್ಕೆ ಸಿಲುಕಿದೆ. ಈ ಕೂಟದ ವೇಳೆ ಕಾಣಿಸಿಕೊಂಡಿದ್ದ ತೈವಾನಿನ 10 ವರ್ಷದ ಕ್ರೀಡಾ ವಿದ್ಯಾರ್ಥಿನಿಗೆ ಕೋವಿಡ್ 19 ಅಂಟಿರುವುದು ದೃಢಪಟ್ಟಿದೆ. ಇದರಿಂದ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡ ಸಿಂಧು, ಸೈನಾ ನೆಹ್ವಾಲ್ ಸಹಿತ ವಿಶ್ವದ ಇತರ ಆಟಗಾರರಿಗೆ ಆತಂಕ ಶುರುವಾಗಿದೆ.
ತೈವಾನ್ ತಂಡದ ಜತೆ ಅಭ್ಯಾಸ ನಡೆಸುತ್ತಿದ್ದ ಈ ಆ್ಯತ್ಲೀಟ್‌ಗೆ
ಕೋವಿಡ್ 19 ತಗಲಿದೆ ಎಂಬ ತೈವಾನ್ ಮಾಧ್ಯಮದ ವರದಿಯೊಂದನ್ನು ಡೆನ್ಮಾರ್ಕ್ ಶಟ್ಲರ್ ಹಾನ್ಸ್- ಕ್ರಿಸ್ಟಿಯನ್ ವಿಟ್ಟಿಂಗಸ್ ಶೇರ್ ಮಾಡಿಕೊಂಡಿದ್ದಾರೆ. ಆಕೆ ತೈವಾನ್ ಆಟಗಾರರ ಬಸ್ಸಿನಲ್ಲೂ ಸಂಚರಿಸಿದ್ದಾಗಿ ವರದಿ ಹೇಳಿದೆ. ಜತೆಗೆ 3 ಪ್ರೇಕ್ಷಕರಿಗೂ ಕೋವಿಡ್ 19 ಅಂಟಿರುವುದು ಖಚಿತಗೊಂಡಿದೆ. ಇದರಿಂದ ಕೂಟದಲ್ಲಿ ಪಾಲ್ಗೊಂಡ ಎಲ್ಲ ಆಟಗಾರರಿಗೂ ಭಯ ಎದುರಾಗಿದೆ.
ಇದನ್ನು ಕೇಳಿ ಆತಂಕಕ್ಕೊಳಗಾಗಿದ್ದೇನೆ ಎಂದು ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿದ್ದಾರೆ. ಇದೊಂದು ಆಘಾತಕಾರಿ ಸಂಗತಿ ಎಂಬುದಾಗಿ ಸಿಂಧು ಹೇಳಿದ್ದಾರೆ. ಆದರೆ ಕೋವಿಡ್ 19 ಭೀತಿಯಿಂದ ಭಾರತದ ಇತರ ಪ್ರಮುಖ ಆಟಗಾರರಾದ ಎಚ್.ಎಸ್. ಪ್ರಣಯ್, ಸಮೀರ್ ವರ್ಮ, ಸೌರಭ್ ವರ್ಮ, ಚಿರಾಗ ಶೆಟ್ಟಿ, ರಾಂಕಿ ರೆಡ್ಡಿ, ಮನು ಅತ್ರಿ, ಸುಮೀತ್ ರೆಡ್ಡಿ ಮೊದಲಾದವರು ಈ ಪಂದ್ಯಾವಳಿಯಿಂದ ದೂರ ಉಳಿದಿದ್ದರು.