ಬರ್ಮಿಂಗ್‌ಹ್ಯಾಮ್: ಎರಡು ಬಾರಿಯ ಚಾಂಪಿಯನ್, ಚೀನದ ಚೆನ್ ಯಾಂಗ್ ಅವರನ್ನು ಪರಾಭವಗೊಳಿಸಿದ ಮಲೇಶ್ಯದ ಲೀ ಜೀ ಜಿಯಾ “ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್’ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ 13ನೇ ಶ್ರೇಯಾಂಕದ ಲೀ ಜೀ 3ನೇ ಶ್ರೇಯಾಂಕದ ಯಾಂಗ್ ವಿರುದ್ಧ 21-12, 21-18 ಅಂತರದ ಗೆಲುವು ಸಾಧಿಸಿದರು. ಯಾಂಗ್ 2013 ಮತ್ತು 2015ರಲ್ಲಿ ಚಾಂಪಿಯನ್ ಆಗಿದ್ದರು. ಕ್ವಾರ್ಟರ್ ಫೈನಲ್ ಹಾದಿಯಲ್ಲಿ 6 ಬಾರಿಯ ಚಾಂಪಿಯನ್ ಲಿನ್ ಡಾನ್ ಅವರನ್ನು ಕೆಡವಿದ ಚೆನ್ ಯಾಂಗ್ ಈ ಕೂಟದ ನೆಚ್ಚಿನ ಆಟಗಾರನಾಗಿದ್ದರು.
ಲೀ ಜೀ-ಯಾಂಗ್ ಕಳೆದ ಅಕ್ಟೋಬರ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಪಂದ್ಯಾವಳಿಯಲ್ಲಿ ಕೊನೆಯ ಸಲ ಮುಖಾಮುಖೀಯಾಗಿದ್ದರು. ಇದರಲ್ಲಿ ಯಾಂಗ್ ಜಯ ಸಾಧಿಸಿದ್ದರು. ಇದಕ್ಕೀಗ ಜಿಯಾ ಸೇಡು ತೀರಿಸಿಕೊಂಡರು.
“ಕಳೆದ ಸಲ ನಾನು ಯಾಂಗ್ ವಿರುದ್ಧ ಪರಾಭವಗೊಂಡಿದ್ದೆ. ಹೀಗಾಗಿ ಇದು ನನಗೆ ಸೇಡಿನ ಪಂದ್ಯವಾಗಿತ್ತು. ನಾಳಿನ ಪಂದ್ಯದ ಬಗ್ಗೆ ನಾನು ಚಿಂತಿತನಾಗಿಲ್ಲ. ಅತ್ಯುತ್ತಮ ಆಟ ಪ್ರದರ್ಶಿಸುವ ಗುರಿ ಹಾಕಿಕೊಂಡಿದ್ದೇನೆ’ ಎಂದು ಲೀ ಜೀ ಜಿಯಾ ಹೇಳಿದರು.
21ರ ಹರೆಯದ ಲೀ ಜೀ 2018ರ ಚೈನೀಸ್ ತೈಪೆ ಓಪನ್ ಪ್ರಶಸ್ತಿ ಬಳಿಕ ಯಾವುದೇ ಬಿಡಬ್ಲ್ಯುಎಫ್ ಕೂಟದಲ್ಲಿ ಚಾಂಪಿಯನ್ ಆಗಿಲ್ಲ.
ಸೆಮಿಫೈನಲ್ ಪ್ರವೇಶಿಸಿದ ಇತರರೆಂದರೆ ವಿಕ್ಟರ್ ಅಕ್ಸೆಲ್ಸೆನ್, ಅಗ್ರ ಶ್ರೇಯಾಂಕದ ಟೀನ್ ಚೆನ್ ಚೌ ಮತ್ತು ಆ್ಯಂಡ್ರೆಸ್ ಅಂಟೋನ್ಸೆನ್.