Advertisement
2019-20ನೇ ಸಾಲಿಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ದಾಖಲಾತಿ ಪಡೆಯ ಬಯಸುವ ವಿದ್ಯಾರ್ಥಿಗಳು ಕೋರ್ಸ್ ಅಥವಾ ಇನ್ಯಾವುದೋ ಮಾಹಿತಿಗಾಗಿ ಕಾಲೇಜುಗಳಿಗೆ ಎಡತಾಕಬೇಕಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲೇ ಎಲ್ಲ ಮಾಹಿತಿ ಲಭ್ಯ. ರಾಜ್ಯದ 412 ಸರ್ಕಾರಿ ಕಾಲೇಜುಗಳು ವೆಬ್‌ಸೈಟ್ ಸಿದ್ಧಪಡಿಸಿದ್ದು, ಇಲಾಖೆಯ ಅಂತರ್ಜಾಲ ತಾಣದಲ್ಲಿ ಲಿಂಕ್ ದೊರೆಯಲಿದೆ. ವಿದ್ಯಾರ್ಥಿಗಳು ಸುಲಭವಾಗಿ ಆ ಲಿಂಕ್ ತೆರೆದು, ತಮಗೆ ಬೇಕಾದ ಸರ್ಕಾರಿ ಪದವಿ ಕಾಲೇಜಿನ ಮಾಹಿತಿ ಪಡೆಯಬಹುದಾಗಿದೆ.
Related Articles
Advertisement
ಆನ್‌ಲೈನ್‌ನಲ್ಲೇ ವೇಳಾಪಟ್ಟಿ: ಕೋರ್ಸ್ ಮತ್ತು ಪ್ರಾಧ್ಯಾಪಕರ ಮಾಹಿತಿ ಮಾತ್ರವಲ್ಲ. ಪ್ರತಿ ವಿದ್ಯಾರ್ಥಿಗೂ ಅತಿ ಅವಶ್ಯಕವಾಗಿರುವ ವೇಳಾಪಟ್ಟಿ ಕೂಡ ವೆಬ್‌ಸೈಟ್‌ನಲ್ಲೇ ದೊರೆಯಲಿದೆ. ಒಂದೊಂದು ಸೆಮಿಸ್ಟರ್‌ಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಸೋಮವಾರದಿಂದ ಶನಿವಾರದವರೆಗಿನ ಎಲ್ಲ ವಿಷಯದ ವೇಳಾಪಟ್ಟಿ ಇಲ್ಲಿ ಸುಲಭವಾಗಿ ಸಿಗುತ್ತದೆ. ಜತೆಗೆ ಕಳೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮತ್ತು ವಿವಿಧ ಕೋರ್ಸ್‌ಗಳ ಪಠ್ಯಕ್ರಮವೂ ಲಭ್ಯವಿದೆ. ಕಾಲೇಜಿನ ಗ್ರಂಥಾಲಯ ಮತ್ತು ಆನ್‌ಲೈನ್ ಓದಬಹುದಾದ ಪುಸ್ತಕ ಮತ್ತು ಅದರ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗಲಿದೆ.
ಆನ್‌ಲೈನ್ ಅರ್ಜಿ ಇಲ್ಲ: 2019-20ನೇ ಸಾಲಿಗೆ ಪದವಿ ಕಾಲೇಜಿಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಲು ಅನುಕೂಲವಾಗುವ ವೆಬ್‌ಸೈಟ್ ಒಂದನ್ನು ಕಾಲೇಜು ಶಿಕ್ಷಣ ಇಲಾಖೆ ಅಭಿವೃದ್ಧಿ ಪಡಿಸುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಸಿಗದೇ ಇರುವುದರಿಂದ 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಕಾಲೇಜಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳ ಪೂರ್ಣ ವಿವರನ್ನು ಆನ್‌ಲೈನ್‌ನಲ್ಲಿ ಎಂಟ್ರಿ ಮಾಡಲಾಗುತ್ತದೆ. 2020-21ನೇ ಸಾಲಿನಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಬರಲಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವೆಬ್‌ಸೈಟ್ ಬಳಕೆ ಹೇಗೆ?: ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್ dce.kar.nic.in ಅನ್ನು ತೆರೆದರೆ, ಮುಖ ಪುಟದ ಎಡಭಾಗದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಂಬ್ರೆಲಾ ವೆಬ್‌ಸೈಟ್ ಎಂಬ ಲಿಂಕ್ ಇದೆ. ಆ ಲಿಂಕ್ ತೆರೆದರೆ ನಿಮಗೆ ಬೇಕಾದ ಕಾಲೇಜು ಬರುತ್ತದೆ. ಕಾಲೇಜಿನ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ, ಕಾಲೇಜಿನ ವೆಬ್‌ಸೈಟ್ ತೆರೆದುಕೊಳ್ಳುತ್ತದೆ.
ಎಲ್ಲ ಸರ್ಕಾರಿ ಕಾಲೇಜುಗಳು ವೆಬ್‌ಸೈಟ್ ತೆರೆಯಬೇಕು ಎಂದು ಸೂಚನೆ ನೀಡಿದ್ದೇವೆ. ಈಗ ವೆಬ್‌ಸೈಟ್ ಬಳಕೆಗೆ ಸಿದ್ಧವಾಗಿದೆ. ವಿದ್ಯಾರ್ಥಿಗಳು, ಪಾಲಕ, ಪೋಷಕರು ಕಾಲೇಜುಗಳ ಮಾಹಿತಿಯನ್ನು ಸುಲಭವಾಗಿ ಪಡೆದು, ಸರ್ಕಾರಿ ಕಾಲೇಜಿಗೆ ದಾಖಲಾಗಬಹುದಾಗಿದೆ.-ಪ್ರೊ.ಎಸ್.ಮಲ್ಲೇಶ್ವರಪ್ಪ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ * ರಾಜು ಖಾರ್ವಿ ಕೊಡೇರಿ