Advertisement

ಸಿದ್ದುಗೆ ಗುದ್ದು

09:08 AM Jun 06, 2019 | mahesh |

ಬೆಂಗಳೂರು: ಒಂದೆಡೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಯುತ್ತಿದ್ದರೆ, ಮತ್ತೂಂದೆಡೆ ಕಾಂಗ್ರೆಸ್‌ನಲ್ಲಿ ಹಿರಿಯರ ಅತೃಪ್ತಿ ಸ್ಫೋಟಗೊಂಡಿದೆ. ಜೆಡಿಎಸ್‌ನಲ್ಲೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್‌ ರಾಜೀನಾಮೆ ನೀಡಿದ್ದು ಎಲ್ಲರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದಾರೆ.

Advertisement

ಸಂಪುಟದಲ್ಲಿ ಅವಕಾಶ ಸಿಗದೆ ಮುನಿಸಿಕೊಂಡಿರುವ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಪರೋಕ್ಷವಾಗಿ ಸಿದ್ದರಾಮಯ್ಯರನ್ನು ಕೆಣಕಿದರೆ, ಮತ್ತೂಬ್ಬ ಹಿರಿಯ ನಾಯಕ ರೋಷನ್‌ ಬೇಗ್‌ ನೇರವಾಗಿ ಹರಿಹಾಯ್ದಿದ್ದಾರೆ.

”ಲೋಕಸಭೆ ಚುನಾವಣೆ ಹೊಣೆ ಹೊತ್ತು ವಿಫ‌ಲರಾದವರನ್ನು ಸಂಪುಟದಿಂದ ಕೈ ಬಿಟ್ಟು ಹೊಸಬರಿಗೆ ಅವಕಾಶ ಕೊಡಿ ಎಂದು ಟ್ವೀಟ್ ಮೂಲಕ ಒತ್ತಾಯಿಸಿರುವ ರಾಮಲಿಂಗಾರೆಡ್ಡಿ, ವಲಸಿಗರಿಂದಲೇ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.

ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದ ಮತ್ತೂಬ್ಬ ಹಿರಿಯ ನಾಯಕ ರೋಷನ್‌ ಬೇಗ್‌, ರಾಮಲಿಂಗಾರೆಡ್ಡಿ ಹೇಳಿದ್ದು ಸರಿಯಾಗಿದೆ. ಸಿದ್ದರಾಮಯ್ಯ ಅವರಿಗೆ ಸ್ವಪ್ರತಿಷ್ಠೆ ಜಾಸ್ತಿ. ತಾನು ಹೇಳಿದ್ದೇ ನಡೆಯಬೇಕು ಎಂಬ ಹಠ ಎಂದು ಆರೋಪಿಸಿದ್ದಾರೆ. ಜತೆಗೆ, ಎಚ್.ಕೆ.ಪಾಟೀಲ್ರಂತಹ ಹಿರಿಯರನ್ನು ಸಂಪುಟದಿಂದ ದೂರ ಉಳಿಸಿರುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಹಿರಿಯರನ್ನು ಸಂಪುಟದಲ್ಲಿ ನಿರ್ಲಕ್ಷ್ಯ ಮಾಡಿ ಬೇಕಾದವರಿಗೆ ಅವಕಾಶ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಚ್.ವಿಶ್ವನಾಥ್‌ ಅವರು ಸಹ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸಮನ್ವಯ ಸಮಿತಿಯು ಸಿದ್ದರಾಮಯ್ಯನವರ ಕೈಗೊಂಬೆಯಾಗಿದೆ. ನನ್ನನ್ನು ಸಮನ್ವಯ ಸಮಿತಿಗೆ ಸೇರಿಸಲು ಅವರು ಒಪ್ಪಲೇ ಇಲ್ಲ. ಎರಡೂ ಪಕ್ಷಗಳು ಜತೆಗೂಡಿ ಸರ್ಕಾರ ರಚಿಸಿರುವಾಗ ಎರಡೂ ಪಕ್ಷಗಳ ರಾಜ್ಯಾಧ್ಯಕ್ಷರು ಸಮನ್ವಯ ಸಮಿತಿಯಲ್ಲಿ ಇಲ್ಲ ಎಂದಾದರೆ ಸಮನ್ವಯ ಎಲ್ಲಿ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

Advertisement

ಈ ಎಲ್ಲ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ವಿರುದ್ಧವೇ ಕೇಂದ್ರೀಕೃತವಾಗಿದೆ. ಎರಡೂ ಪಕ್ಷದ ನಾಯಕರು ಸಿದ್ದರಾಮಯ್ಯ ವಿರುದ್ಧವೇ ಟೀಕಾಸ್ತ್ರಗಳನ್ನು ಬಿಡುತ್ತಿದ್ದಾರೆ. ಸರ್ಕಾರದಲ್ಲಿ ಸಮನ್ವಯತೆ ಕಾಪಾಡುವಲ್ಲಿ ಅವರು ವಿಫ‌ಲರಾಗಿದ್ದಾರೆ ಎಂಬುದು ಪ್ರಮುಖ ಆರೋಪ. ಇದು ಯಾವ ಸ್ವರೂಪ ಪಡೆಯಲಿದೆ ಎಂಬುದು ಕಾದು ನೋಡಬೇಕಾಗಿದೆ.

ಚರ್ಚೆ: ಪ್ರಸಕ್ತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ರಾಮಲಿಂಗಾರೆಡ್ಡಿ ಹಾಗೂ ರೋಷನ್‌ಬೇಗ್‌ ಅವರ ಹೇಳಿಕೆಗಳು ಹಾಗೂ ವಿಶ್ವನಾಥ್‌ ರಾಜೀನಾಮೆ ಕುರಿತು ಚರ್ಚೆ ನಡೆಯಿತು ಎಂದು ಹೇಳಲಾಗಿದೆ.

ಸಂಪುಟ ವಿಸ್ತರಣೆಗೆ ಸೀಮಿತಗೊಂಡು ಸಂಪುಟ ಪುನಾರಚನೆ ಆಗದಿದ್ದರೆ ಸಚಿವ ಸ್ಥಾನ ಸಿಗುವುದಿಲ್ಲ ಎಂದು ರೋಷನ್‌ ಬೇಗ್‌, ರಾಮಲಿಂಗಾರೆಡ್ಡಿಯವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೇ ರೀತಿ ಅಸಮಾಧಾನ ಬಹಿರಂಗವಾಗಿ ತೋರ್ಪಡಿಕೆ ಮಾಡಿದರೆ ಸರ್ಕಾರದ ಉಳಿವು ಕಷ್ಟ, ಪಕ್ಷಕ್ಕೂ ನಷ್ಟವಾಗಲಿದೆ.ಈ ಬಗ್ಗೆ ಹೈಕಮಾಂಡ್‌ ಗಮನಕ್ಕೂ ತರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಎಚ್.ವಿಶ್ವನಾಥ್‌ ರಾಜೀನಾಮೆ ಸೇರಿದಂತೆ ಜೆಡಿಎಸ್‌ನ ಆಂತರಿಕ ವಿಚಾರಗಳ ಬಗ್ಗೆ ಕಾಂಗ್ರೆಸ್‌ ನಾಯಕರು ಪ್ರತಿಕ್ರಿಯಿಸುವುದು ಬೇಡ. ಟೀಕೆಗಳನ್ನೂ ನಿರ್ಲಕ್ಷ್ಯ ಮಾಡೋಣ. ದೇವೇಗೌಡರು ಅಥವಾ ಕುಮಾರಸ್ವಾಮಿಯವರು ಹೇಳಿಕೆ ನೀಡಿದರೆ ಮಾತ್ರ ಪ್ರತಿಕ್ರಿಯೆ ಕೊಡುವುದು ಸೂಕ್ತ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು ಎಂದು ತಿಳಿದು ಬಂದಿದೆ.

ರಾಜಸ್ಥಾನ ಕಾಂಗ್ರೆಸ್‌ನಲ್ಲೂ ಬಿರುಕು: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ದಿನೇ ದಿನೆ ಬಿಗಡಾಯಿಸುತ್ತಿದೆ. ಅದರಲ್ಲೂ ರಾಜಸ್ಥಾನದಲ್ಲಿ ಸಿಎಂ ಅಶೋಕ್‌ ಗೆಹ್ಲೋಟ್ ಮತ್ತು ಉಪಮುಖ್ಯಮಂತ್ರಿ ಸಚಿನ್‌ ಪೈಲಟ್ ನಡುವೆ ಈವರೆಗೆ ಗುಟ್ಟಾಗಿಯೇ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಈಗ ಬಹಿರಂಗವಾಗಿದೆ.

‘ನನ್ನ ಮಗ ವೈಭವ್‌ ಗೆಹ್ಲೋಟ್ ಜೋಧ್‌ಪುರ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲಲು ಡಿಸಿಎಂ ಸಚಿನ್‌ ಪೈಲಟ್ ಕಾರಣ ಎಂದು ಸಿಎಂ ಗೆಹ್ಲೋಟ್ ಮಂಗಳವಾರ ಕಿಡಿ ಕಾರಿದ್ದಾರೆ. ಜೋಧ್‌ಪುರ ಕ್ಷೇತ್ರದಲ್ಲಿ ನಾವು 6 ಶಾಸಕರನ್ನು ಹೊಂದಿದ್ದೇವೆ. ಅವರು ಬಿರುಸಿನ ಪ್ರಚಾರ ನಡೆಸಲಿದ್ದಾರೆ ಎಂದು ಪೈಲಟ್ ಹೇಳಿದ್ದರು. ಆದರೆ ಇಲ್ಲಿ ನಡೆದಿದ್ದೇ ಬೇರೆ ಎಂದಿದ್ದಾರೆ ಗೆಹ್ಲೋಟ್. ಅಲ್ಲದೆ, ಸಚಿನ್‌ ಪೈಲಟ್ ಮತ್ತು ಶಾಸಕರ ಕಾರಣಕ್ಕೆ ಈ ಸೋಲು ಉಂಟಾಗಿದೆ. ಹೀಗಾಗಿ ಸೋಲಿನ ಹೊಣೆಯನ್ನು ಅವರೇ ಹೊರಬೇಕು ಎಂದೂ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ನಾಯಕ ಬಿಜೆಪಿಗೆ: ಅತ್ತ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲೂ ಬಂಡಾಯದ ಬಿಸಿ ಏರತೊಡಗಿದೆ. ರಾಜ್ಯದ ಕಾಂಗ್ರೆಸ್‌ ಹಿರಿಯ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟೇ ಅಲ್ಲ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ರನ್ನೂ ಅವರು ಭೇಟಿಯಾಗಿದ್ದು, ಸದ್ಯದಲ್ಲೇ ಕಾಂಗ್ರೆಸ್‌ನ ಕೆಲವು ಶಾಸಕರೊಂದಿಗೆ ಇವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ. ವಿಖೆ ಪಾಟೀಲ್ ಅವರ ಪುತ್ರ ಸುಜಯ್‌ ವಿಖೆ ಪಾಟೀಲ್ ಲೋಕಸಭೆ ಚುನಾವಣೆಗೆ ಮುನ್ನವೇ ಬಿಜೆಪಿಗೆ ಸೇರಿ, ಅಹಮದ್‌ನಗರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆಯೇ, ವಂಚಿತ್‌ ಬಹುಜನ್‌ ಅಘಾಡಿ(ವಿಬಿಎ) ನಾಯಕ ಪ್ರಕಾಶ್‌ ಅಂಬೇಡ್ಕರ್‌ ಅವರು ತಮ್ಮೊಂದಿಗೆ 10 ಮಂದಿ ಎನ್‌ಸಿಪಿ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ. ಜತೆಗೆ, ಜೂ.7ರಂದು ಈ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದಿದ್ದಾರೆ.

ರಾಜೀನಾಮೆಗೂ ಸಿದ್ಧ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಮೂಹಿಕ ರಾಜೀನಾಮೆಗೂ ಸಿದ್ಧ ಎಂದು ಜೆಡಿಎಸ್‌ ಸಚಿವರು ಹೇಳಿದ್ದು, ದೇವೇ ಗೌಡರು ಹಾಗೂ ಕುಮಾರಸ್ವಾಮಿಯವರು ಏನೇ ತೀರ್ಮಾನ ಕೈಗೊಂಡರೂ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಮಂಗಳವಾರ ನಡೆದ ಜೆಡಿಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಂಪುಟ ವಿಸ್ತರಣೆ, ಕಾಂಗ್ರೆಸ್‌ನಲ್ಲಿನ ಹಿರಿಯ ನಾಯಕರ ಅಪಸ್ವರ, ಇದರಿಂದ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಚಿವರು ಹಾಗೂ ಶಾಸಕರು ಕುಮಾರಸ್ವಾಮಿಯವರ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಮಧ್ಯೆ, ಶಾಸಕಾಂಗ ಸಭೆಯಲ್ಲಿ ಎಚ್.ವಿಶ್ವನಾಥ್‌ ಅವರ ರಾಜೀನಾಮೆ ಬಗ್ಗೆಯೂ ಪ್ರಸ್ತಾಪವಾಯಿತು. ನಾಯಕರೆಲ್ಲರೂ ರಾಜೀನಾಮೆ ವಾಪಸ್‌ ತೆಗೆದುಕೊಳ್ಳುವಂತೆ ವಿಶ್ವನಾಥ್‌ಗೆ ಮನವಿ ಮಾಡಿದರು.

ಸಂಪುಟ ವಿಸ್ತರಣೆ ಅನುಮಾನ?
ಸಚಿವ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನ ಭರ್ತಿ ಮಾಡಿ ಸರ್ಕಾರ ಗಟ್ಟಿಗೊಳಿಸಿಕೊಳ್ಳಲು ಮುಂದಾದ ಕಾಂಗ್ರೆಸ್‌-ಜೆಡಿಎಸ್‌ಗೆ ಹೊಸ ತಲೆನೋವು ಪ್ರಾರಂಭವಾಗಿದ್ದು ಆಕಾಂಕ್ಷಿಗಳು ಅತೃಪ್ತಿ ಹೊರಹಾಕುತ್ತಿದ್ದಾರೆ. ಮೂರು ಸ್ಥಾನಗಳಿಗೆ ಹತ್ತಾರು ಆಕಾಂಕ್ಷಿಗಳು ಇರುವುದರಿಂದ ಈಗಿನ ಸ್ಥಿತಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಿದರೆ ಇನ್ನಷ್ಟು ಪರಿಸ್ಥಿತಿ ಬಿಗಡಾಯಿಸುವುದರಿಂದ ಸದ್ಯಕ್ಕೆ ವಿಸ್ತರಣೆಯೂ ಅನುಮಾನ. ಅಂತಿಮವಾಗಿ ಹೈಕಮಾಂಡ್‌ ಸೂಚನೆ ಪಾಲಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next