ಬೆಂಗಳೂರು: ಮಂಡ್ಯ, ಮೈಸೂರು, ತುಮಕೂರು ಕ್ಷೇತ್ರಗಳ ಗೊಂದಲವನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬಗೆಹರಿಸಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು ಪ್ರಸ್‌ಕ್ಲಬ್ ಹಾಗೂ ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಮಂಥನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಸಮಸ್ಯೆಯನ್ನು ಸಿದ್ದರಾಮಯ್ಯನವರು ಬಗೆಹರಿಸಿದ್ದಾರೆ. ಮಂಡ್ಯ ವಿಚಾರ ಒಂದು ಹಂತದವರೆಗೂ ಸರಿ ಹೋಗಿದೆ. ಉಳಿದ ಕಡೆಯೂ ಆದಷ್ಟು ಬೇಗ ಸರಿ ಹೋಗಲಿದೆ. ಕೆಲವು ಕಡೆ ಸಮಸ್ಯೆ ಇದೆ, ಏನೂ ಇಲ್ಲವೇ ಇಲ್ಲ ಎಂದು ಹೇಳುವುದಿಲ್ಲ. ಆದರೆ, ಅಂತಿಮವಾಗಿ ಎಲ್ಲವೂ ಸರಿ ಹೋಗಲಿದೆ ಎಂದರು.
ಕಾಂಗ್ರೆಸ್ ಶಿಸ್ತಿನ ಪಕ್ಷ, ಹೊಂದಾಣಿಕೆ ತಕ್ಷಣಕ್ಕೆ ಕಠಿಣ ಅನ್ನಿಸಿದ್ದು ಹೌದು. ಆದರೆ, ನಂತರ ರಾಷ್ಟ್ರೀಯ ಅನಿವಾರ್ಯತೆಯಿಂದ ಸ್ಥಳೀಯ ಮಟ್ಟದಲ್ಲಿ ಬಹುತೇಕ ಕಡೆ ಕಾರ್ಯಕರ್ತರು ಹಾಗೂ ಮುಖಂಡರು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಐದು ವರ್ಷಗಳ ವೈಫಲ್ಯ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಐದು ವರ್ಷದ ಸಾಧನೆ ಹಾಗೂ ಈಗಿನ ಸಮ್ಮಿಶ್ರ ಸರ್ಕಾರದ ಜನಪರ ಯೋಜನೆಗಳನ್ನು ಜನರ ಮುಂದಿಡುತ್ತಿದ್ದೇವೆ ಎಂದು ಹೇಳಿದರು.
ಆಯೋಗ ಕ್ರಮ ಕೈಗೊಳ್ಳಬೇಕು: ರಾಜಸ್ಥಾನ ರಾಜ್ಯಪಾಲ ಕಲ್ಯಾಣಸಿಂಗ್ ಅವರು ಸಂವಿಧಾನಾತ್ಮಕ ಹುದ್ದೆಯಲ್ಲಿದ್ದು ಬಿಜೆಪಿಯ ಪರ ಮಾತನಾಡುತ್ತಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ಸೇನೆಯನ್ನು ಮೋದಿ ಸೇನೆ ಎನ್ನುತ್ತಾರೆ. ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್‌ಕುಮಾರ್ ಅವರು ಕಾಂಗ್ರೆಸ್ ಪ್ರಣಾಳಿಕೆ ಅನುಷ್ಠಾನ ಆಗಲ್ಲ ಎಂದು ಹೇಳುತ್ತಾರೆ. ಮೋದಿಯವರು ಸೇನಾ ಉಡುಪು ಧರಿಸಿ ರಾಜಕೀಯಕ್ಕೆ ಏರ್‌ಸ್ಟ್ರೈಕ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಚುನಾವಣಾ ಆಯೋಗ ಏನು ಮಾಡುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಲ್ಲಿಕಾರ್ಜುನ ಖರ್ಗೆ ಶಕ್ತಿ: ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಮಟ್ಟದ ಪ್ರಭಾವಿ ನಾಯಕರು. ಅವರು ನಾಮಪತ್ರ ಸಲ್ಲಿಕೆ ವೇಳೆ ನೆರೆದಿದ್ದ ಜನಸ್ತೋಮ ಅವರ ಜನಪ್ರಿಯತೆಗೆ ಸಾಕ್ಷಿ. ಅವರೂ ಸೇರಿದಂತೆ ಮೈತ್ರಿಕೂಟದ ಎಲ್ಲ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಎಚ್.ಕೆ.ಪಾಟೀಲ್ ಉತ್ತರಿಸಿದರು.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರದ ಗೊಂದಲ ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ಕೈಯಲ್ಲೇ ಸರಿ ಮಾಡಲು ಆಗುತ್ತಿಲ್ಲ. ಮೈತ್ರಿಯಿಂದ ಎರಡೂ ಪಕ್ಷಗಳು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬ ಮಾತುಗಳು ಇವೆಯಲ್ಲಾ ಎಂಬ ಪ್ರಶ್ನೆಗೆ, ಫಲಿತಾಂಶ ಬಂದ ನಂತರವಷ್ಟೇ ಅದು ಗೊತ್ತಾಗಲಿದೆ. ಕಾದು ನೋಡಿ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂದು ನನಗೆ ಬೇಸರವಿಲ್ಲ, ಮಂತ್ರಿ ಸ್ಥಾನವನ್ನು ಸಾಕಷ್ಟು ವರ್ಷ ನಿಭಾಯಿಸಿದ್ದೇನೆ. ಮಂತ್ರಿ ಸ್ಥಾನಕ್ಕಿಂತ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ದೊಡ್ಡದು ಎಂಬುದು ನನ್ನ ಅಭಿಪ್ರಾಯ. ಮುಖ್ಯಮಂತ್ರಿ ಸ್ಥಾನವೂ ಸೇರಿದಂತೆ ಪಕ್ಷದಲ್ಲಿ ಕೆಲಸಕ್ಕೆ ತಕ್ಕ ಪ್ರಾಮುಖ್ಯತೆ ಸಿಗಲಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದರೆ ಮುಂದೆ ಒಳ್ಳೆಯ ಸ್ಥಾನಮಾನವೂ ನನಗೆ ಸಿಗಬಹುದು.
-ಎಚ್.ಕೆ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ