Advertisement

ಒಳ ಮೀಸಲಾತಿಯಿಂದ ಎಲ್ಲ ಸಮುದಾಯಗಳಿಗೆ ಸಮಾನವಾದ ನ್ಯಾಯ: ಕೆ.ಎಚ್. ಮುನಿಯಪ್ಪ

12:46 PM Aug 31, 2020 | Mithun PG |

ಬೆಂಗಳೂರು: ಇತ್ತೀಚೆಗೆ ಸುಪ್ರೀಂ ಕೋರ್ಟ್ ಒಳ ಮೀಸಲಾತಿಯ ವಿಷಯದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಇದ್ದು ಅವುಗಳಲ್ಲಿ ಮಾದಿಗ, ಛಲವಾದಿ, ಬೊವಿ, ಲಂಬಾಣಿ ಹಾಗೂ ಕೊರಮ, ಕೊರಚ ಸಮುದಾಯಗಳಿಗೆ ಅನ್ಯಾಯವಾಗಬಾರದು ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರ ಸಂವಿಧಾನ ಪ್ರಕಾರ ಎಲ್ಲ ಸಮುದಾಯಗಳಿಗೂ ನ್ಯಾಯ ದೊರೆಕಬೇಕು ಯಾರಿಗೂ ಅನ್ಯಾಯ ಆಗಬಾರದು. ಹೀಗಾಗಿ ಎಲ್ಲರಿಗೂ ನ್ಯಾಯ ದೊರೆಯಲು ಈ ಆದೇಶವನ್ನು ಸ್ವಾಗತಿಸುತ್ತೇವೆ.

2004ರಲ್ಲಿ ಎಸ್ ಎಂ. ಕೃಷ್ಣ ಸರ್ಕಾರ ನೇಮಿಸಿದ್ದ ಸದಾಶಿವ ಆಯೋಗ ರಚನೆ ಮಾಡಿತ್ತು. ಆ ಆಯೋಗ 2012ರಲ್ಲಿ ವರದಿ ಸಲ್ಲಿಸಿತ್ತು. ಅವರ ವರದಿ ಜಾರಿಯಾಗಬೇಕು. ಸರ್ಕಾರಗಳು ಹೋಗುತ್ತವೆ ಬರುತ್ತವೆ. ಆದರೆ, ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುವವರು ಕಡಿಮೆ, ಕೆಲವರು ಒಳ ಮೀಸಲಾತಿಯಿಂದ ತಾರತಮ್ಯ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಅದು ಸರಿಯಲ್ಲ. ಇದರಿಂದ ಎಲ್ಲ ಸಮುದಾಯಗಳಿಗೆ ಸಮಾನವಾದ ನ್ಯಾಯ ದೊರೆಯುತ್ತದೆ. ರಾಜ್ಯ ಸರ್ಕಾರ ಈ ಪ್ರಸ್ತಾಪವನ್ನು ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದರು.

2018ರಲ್ಲಿ ಹುಬ್ಬಳ್ಳಿಯಲ್ಲಿ ಮಾದರ ಸಮುದಾಯದ ಸಮಾವೇಶ ನಡೆಸಿದಾಗ ಮೂರು ಪಕ್ಷಗಳ ನಾಯಕರು ಒಮ್ಮತದಿಂದ ಬೆಂಬಲ ಸೂಚಿಸಿದ್ದರು. ಈಗಿನ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತರಲು ಅಧಿವೇಶನದಲ್ಲಿ ತಂದು ಎಲ್ಲ ಪಕ್ಷಗಳ ಒಪ್ಪಿಗೆ ಪಡೆದು ಒಕ್ಕೊರಲಿನಿಂದ ಪಾಸ್ ಮಾಡಿ ಸಂಸತ್ತಿಗೆ ಕಳುಹಿಸಿಕೊಡಬೇಕು. ಸಂಸತ್ತು ಸಂವಿಧಾನ ತಿದ್ದುಪಡಿ ತಂದು ಕಾಯ್ದೆ ಜಾರಿಗೆ ತರಬೇಕಾಗುತ್ತದೆ. ಕೇಂದ್ರ ಸರ್ಕಾರ ಕೂಡ ಇದನ್ನು ತಿದ್ದುಪಡಿ ಮಾಡಿ  ಆದಷ್ಟು ಬೇಗ ನ್ಯಾಯ ದೊರಕಿಸಿ ಕೊಡಬೇಕು.

ಆಂಧ್ರ, ತೆಲಂಗಾಣ,  ಕರ್ನಾಟಕ ರಾಜ್ಯಗಳಲ್ಲಿ ಇದರ ತಿದ್ದುಪಡಿಗೆ ಬೇಡಿಕೆ ಹೆಚ್ಚಿದೆ. ಆಂಧ್ರದಲ್ಲಿ ರಾಜಶೇಖರ್ ರೆಡ್ಡಿ ಕಾಲದಲ್ಲಿ ತಿದ್ದುಪಡಿ ಮಾಡಿದ್ದರಿಂದ ಅನೇಕ ಸಮುದಾಯಗಳಿಗೆ ನ್ಯಾಯ ದೊರೆತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಬಸವಣ್ಣನ ಅನುಯಾಯಿಗಳಾಗಿದ್ದಾರೆ. ಅವರು ಸಮಾನತೆಯ ಪರವಾಗಿದ್ದಾರೆ. ಅವರು ನ್ಯಾಯ ಕೊಡಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸದಾಶಿವ ಆಯೋಗದ ವರದಿ ಜಾರಿಗೆ ದಲಿತರಲ್ಲಿ ಎಡ ಬಲ ಎಂಬ ಭೇದ ಇಲ್ಲ. ಖರ್ಗೆ, ಪರಮೇಶ್ವರ್ ಎಲ್ಲರೂ ಇದರ ಜಾರಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ನಡೆದ ಜಾತಿ ಗಣತಿ ವರದಿಯು ಜಾರಿಗೊಳಿಸಲು ಯಾರ ವಿರೋಧವೂ ಇಲ್ಲ ಎಂದರು.

ಎನ್. ಚಂದ್ರಪ್ಪ ಮಾತನಾಡಿ, ರಾಜ್ಯ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ತರುವುದಾಗಿ ಹೇಳಿದ್ದರು. ಈಗ ಬಿಜೆಪಿ ಸರ್ಕಾರದ ಅಧಿಕಾರದಲ್ಲಿದೆ. ಅವರು ಆದಷ್ಟು ಬೇಗ ಈ ವರದಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಈ ಮೀಸಲಾತಿಯಿಂದ ಲಂಬಾಣಿ ಬೋವಿ ಯಾವುದೇ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ. ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬಹುದು ಎಂದರು.

ಧರ್ಮಸೇನಾ ಮಾತನಾಡಿ ರಾಜ್ಯದಲ್ಲಿ ದಲಿತ ಸಮುದಾಯದಲ್ಲಿ ಬೇರೆ ಬೇರೆ ಜಾತಿಗಳನ್ನು ಸೇರಿಸಿ ಅಶ್ಪ್ರಶ್ಯರಿಗೆ ಅನ್ಯಾಯವಾಗುತ್ತಿದೆ. 43 ವರ್ಷಗಳಿಂದ ನಾವು ಅನ್ಯಾಯ ಅನುಭವಿಸುತ್ತ ಬಂದಿದ್ದೇವೆ. ಒಂದು ವರ್ಗಕ್ಕೆ ಅನ್ಯಾಯವಾದರೆ ಅದು ಇಡೀ ದೇಶದ ಅಭಿವೃದ್ಧಿಗೆ ಹೊಡೆತವಾಗುತ್ತದೆ. ರಾಜ್ಯ ಸರ್ಕಾರ ಸಂಪುಟದಲ್ಲಿಯೇ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next