Advertisement

ಎಲ್ಲ ವರ್ಗದವರಿಗೂ ನೆರವು ಅಗತ್ಯ

01:54 AM Mar 28, 2020 | Sriram |

ಕೋವಿಡ್‌ 19 ವಿರುದ್ಧದ ಹೋರಾಟದಲ್ಲಿ ತಮ್ಮ ದೇಶವಾಸಿಗಳನ್ನು ಸಂಕಷ್ಟದಿಂದ ಪಾರುಮಾಡಲು ಅನೇಕ ದೇಶಗಳು ನಾನಾ ವಿಧದಲ್ಲಿ ಪ್ರಯತ್ನ ನಡೆಸಿವೆ. ಅದರಲ್ಲೂ ಮುಖ್ಯವಾಗಿ ಆರ್ಥಿಕ ಚೇತರಿಕೆಗಾಗಿ ವಿಶೇಷ ಪ್ಯಾಕೇಜುಗಳನ್ನು ಘೋಷಣೆ ಮಾಡುತ್ತಿವೆ. ಇಟಲಿ, ಜರ್ಮನಿ, ಚೀನಾ, ಫ್ರಾನ್ಸ್‌, ಸ್ವೀಡನ್‌, ಜಪಾನ್‌, ಬ್ರಿಟನ್‌ ಹಾಗೂ ಅಮೆರಿಕದ ನಂತರ ಈಗ ಭಾರತವೂ ತನ್ನ ದೇಶವಾಸಿಗಳ ಸಹಾಯಕ್ಕಾಗಿ 1.7 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಘೋಷಿಸಿದೆ.

Advertisement

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿಯಲ್ಲಿ ಈ ಬೃಹತ್‌ ಮೊತ್ತದ ಪರಿಹಾರ ಪ್ಯಾಕೇಜ್‌ ಘೋಷಿಸಲಾಗಿದ್ದು, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ದೇಶದ ಕಡುಬಡವರನ್ನು ತಲುಪುವುದಕ್ಕಾಗಿ, ಯಾರೂ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕಾಗಿ ಈ ಹೆಜ್ಜೆಗೆ ಮುಂದಾಗಿರುವುದಾಗಿ ಹೇಳಿದ್ದಾರೆ. ಮುಖ್ಯವಾಗಿ ಗ್ರಾಮೀಣರು ಹಾಗೂ ನಗರ ಪ್ರದೇಶದ ಬಡಜನರು ಸೇರಿದಂತೆ ಅನೇಕರ ಪಾಲಿಗೆ ಈ ರೀತಿಯ ಪ್ಯಾಕೇಜ್‌ ನಿಜಕ್ಕೂ ಅತ್ಯಗತ್ಯವಾಗಿತ್ತು.

ಕೋವಿಡ್‌ 19 ಸೋಂಕಿನಿಂದ ದೇಶವು ಸಂಪೂರ್ಣ ಮುಕ್ತವಾಗುವವರೆಗೂ ಬಹುತೇಕ ಆರ್ಥಿಕ ಗತಿವಿಧಿಗಳು ಚಲನೆ ಪಡೆಯುವುದಿಲ್ಲ. ಹೀಗಾಗಿ, ಈ ಪರಿಹಾರ ಪ್ಯಾಕೇಜ್‌ ಸ್ವಾಗತಾರ್ಹವಾದದ್ದು. ಆದರೆ, ಇದೇ ವೇಳೆಯಲ್ಲೇ ಸರ್ಕಾರ ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಸಹಾಯಕ್ಕೂ ಬೃಹತ್‌ ಪ್ಯಾಕೇಜ್‌ ಬಿಡುಗಡೆಗೊಳಿಸುವ ಅಗತ್ಯವಿದೆ. ಏಕೆಂದರೆ, ಕೋವಿಡ್‌ 19ದಿಂದ ಈ ವರ್ಗವೂ ತೀರಾ ಸಂಕಷ್ಟಕ್ಕೆ ಈಡಾಗಿದೆ. ಇನ್ನು ಉದ್ಯಮಿಗಳಿಗೂ ಅಪಾರ ನೆರವಿನ ಅಗತ್ಯವಿದೆ. ತೀರಾ ಆಗರ್ಭ ಶ್ರೀಮಂತರಿಗೆ ಮಾತ್ರ ಈ ಲಾಕ್‌ಡೌನ್‌ನಿಂದಾಗಿ ತೊಂದರೆ ಆಗಿಲ್ಲ ಎನ್ನುವುದು ಬಿಟ್ಟರೆ, ಎಲ್ಲಾ ವರ್ಗದ ಜನರೂ ಸಂಕಷ್ಟಕ್ಕೆ ಈಡಾಗಿದ್ದು, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಆದಾಗ್ಯೂ, ಕಳೆದ ಕೆಲವು ಸಮಯದಿಂದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶಕ್ಕೆ, ಕೋವಿಡ್‌ 19ದಿಂದ ಬಲವಾದ ಪೆಟ್ಟು ಬೀಳಲಿರುವುದಂತೂ ನಿಜ. ಈ ಪರಿಸ್ಥಿತಿಯಲ್ಲಿ ಅತಿದೊಡ್ಡ ಪ್ರಮಾಣದ ಜನರ ಚಿಕಿತ್ಸೆಯನ್ನು ಸುನಿಶ್ಚಿತಗೊಳಿಸುವ ತುರ್ತೂ ಇರುವುದರಿಂದ ಸರ್ಕಾರದ ಖಜಾನೆಯ ಮೇಲೂ ಹೊರೆ ಬೀಳಲಿದೆ. ಆದರೆ, ಅನ್ಯ ದಾರಿಯಿಲ್ಲ. ಆಧುನಿಕ ಇತಿಹಾಸದಲ್ಲೇ ಅತಿದೊಡ್ಡ ಆರ್ಥಿಕ ಕುಸಿತ ಎಂದು ಕರೆಸಿಕೊಳ್ಳುವ 2008ರ ಆರ್ಥಿಕ ಬಿಕ್ಕಟ್ಟು ಹಾಗೂ 1929ರ ಮಹಾ ಆರ್ಥಿಕ ಪತನಕ್ಕಿಂತಲೂ ಅಧಿಕವಾಗಿ ಪತರಗುಟ್ಟಿಸುತ್ತಿರುವ ಈ ದೊಡ್ಡ ಬಿಕ್ಕಟ್ಟಿನ್ನಿಂದ ಆದಷ್ಟು ಬೇಗನೇ ಹೊರಗೆದ್ದು ಬರುವ ಸವಾಲು ಜಗತ್ತಿನ ಮುಂದೆ ಇದೆ.

ಬಹುತೇಕ ಎಲ್ಲಾ ದೇಶಗಳ ಸರ್ಕಾರಗಳೂ ಈ ಮೇಲ್ಕಂಡ ಅಂಶಗಳನ್ನು ಪರಿಗಣಿಸಿ ಪ್ಯಾಕೇಜ್‌ಗಳನ್ನು ಘೋಷಿಸಲಾರಂಭಿಸಿವೆ, ಗಮನಿಸಬೇಕಾದ ಸಂಗತಿಯೆಂದರೆ, ಅಲ್ಲೆ
ಲ್ಲ ಎಲ್ಲಾ ವರ್ಗದ ಜನರ ಚೇತರಿಕೆಯನ್ನೂ ಗಮನದಲ್ಲಿಟ್ಟುಕೊಂಡು ಪರಿಹಾರ ಪ್ಯಾಕೇಜ್‌ಗಳನ್ನು ಘೋಷಿಸಲಾಗುತ್ತಿದೆ. ಭಾರತ ಕೂಡ ಈ ನಿಟ್ಟಿನಲ್ಲಿ ಶೀಘ್ರವೇ ನಿರ್ಣಯ ಕೈಗೊಳ್ಳಲಿ ಎಂದು ಆಶಿಸೋಣ.

Advertisement

ಇನ್ನು, ಇದೇ ವೇಳೆಯಲ್ಲೇ ನಮ್ಮ ಜನಪ್ರತಿನಿಧಿಗಳ ಜವಾಬ್ದಾರಿಯೂ ಅಧಿಕವಾಗಿದೆ. ಆದರೆ, ಬೆರಳೆಣಿಕೆಯ ಜನಪ್ರತಿನಿಧಿಗಳನ್ನು ಹೊರತುಪಡಿಸಿ ನಮ್ಮ ಬಹುತೇಕ ಶಾಸಕರು, ಸಚಿವರು, ಸಂಸದರುತಮಗೂ ಈ ಸಂಕಷ್ಟಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಇದ್ದುಬಿಟ್ಟಿದ್ದಾರೆ. ಗ್ರಾಮಪಂಚಾಯಿತಿ ಅಧ್ಯಕ್ಷರಿಂದ ಹಿಡಿದು, ಸಚಿವರವರೆಗೆ ಎಲ್ಲರೂ ಕರ್ತವ್ಯಪರರಾಗಲೇಬೇಕಾದ ಸಮಯವಿದು.

Advertisement

Udayavani is now on Telegram. Click here to join our channel and stay updated with the latest news.

Next